ಕೋವಿಡ್-19 ವಿರುದ್ಧದ ಉತ್ತರ ಪ್ರದೇಶದ ಹೋರಾಟ ಶ್ಲಾಘನೀಯ: ಪ್ರಧಾನಿ ಮೋದಿ

ರಾಜ್ಯದ ಕೊರೋನಾ ಸಾಂಕ್ರಾಮಿಕ ರೋಗದ ಪರಿಸ್ಥಿತಿಯನ್ನು ಅತ್ಯುತ್ತಮವಾಗಿ ನಿಭಾಯಿಸುತ್ತಿರುವ ಉತ್ತರಪ್ರದೇಶ ಸರ್ಕಾರವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಬುಧವಾರ ಶ್ಲಾಘಿಸಿದ್ದಾರೆ. 
ಪ್ರಧಾನಿ ಮೋದಿ
ಪ್ರಧಾನಿ ಮೋದಿ

ವಾರಣಾಸಿ: ರಾಜ್ಯದ ಕೊರೋನಾ ಸಾಂಕ್ರಾಮಿಕ ರೋಗದ ಪರಿಸ್ಥಿತಿಯನ್ನು ಅತ್ಯುತ್ತಮವಾಗಿ ನಿಭಾಯಿಸುತ್ತಿರುವ ಉತ್ತರಪ್ರದೇಶ ಸರ್ಕಾರವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಬುಧವಾರ ಶ್ಲಾಘಿಸಿದ್ದಾರೆ. 

ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಲು ಇಂದು ಬೆಳಿಗ್ಗೆ ತಮ್ಮ ಲೋಕಸಭಾ ಕ್ಷೇತ್ರ ವಾರಣಾಸಿಗೆ ಪ್ರಧಾನಿ ಮೋದಿಯವರು ಭೇಟಿ ನೀಡಿದ್ದಾರೆ. 

ಇದರಂತೆ ಮೊದಲು ಬನಾರಸ್​ ಹಿಂದು ವಿಶ್ವವಿದ್ಯಾಲಯದಲ್ಲಿ ಶಿಶು ಮತ್ತು ತಾಯಂದಿರ ಆರೋಗ್ಯ ಕೇಂದ್ರ ಉದ್ಘಾಟಿಸಿ ಜನತೆಯನ್ನುದ್ದೇಶಿ ಮಾತನಾಡಿದ ಅವರು, ಕೋವಿಡ್-19 ಸಾಂಕ್ರಾಮಿಕವನ್ನು ಅತ್ಯುತ್ತಮವಾಗಿ ನಿರ್ವಹಣೆ ಮಾಡಿದ ಸಿಎಂ ಯೋಗಿ ಆದಿತ್ಯನಾಥ್​ರನ್ನು ಶ್ಲಾಘಿಸಿದರು.

ಕೊವಿಡ್​ 19 ಎರಡನೇ ಅಲೆಯನ್ನು ಉತ್ತರಪ್ರದೇಶ ಎದುರಿಸಿ, ನಿಯಂತ್ರಿಸಿದ ರೀತಿ ನಿಜಕ್ಕೂ ಅದ್ಭುತವಾಗಿದ್ದು, ಅನುಕರಣೀಯ. ಅದಕ್ಕಾಗಿ ಇಲ್ಲಿನ ಆರೋಗ್ಯ ಕಾರ್ಯಕರ್ತರು, ಜನರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಇವತ್ತು ಭಾರತದಲ್ಲಿ ಅತಿ ಹೆಚ್ಚು ಕೊರೊನಾ ಟೆಸ್ಟಿಂಗ್​ ಮಾಡಿರುವ ರಾಜ್ಯವೆಂದರೆ ಅದು ಉತ್ತರ ಪ್ರದೇಶ. ಅಷ್ಟೇ ಅಲ್ಲ, ತುಂಬ ವೇಗವಾಗಿ ಕೊರೊನಾ ಲಸಿಕೆ ಅಭಿಯಾನ ನಡೆಸುತ್ತಿದ್ದು, ದೇಶದಲ್ಲೇ ಅತ್ಯಂತ ಹೆಚ್ಚು ಜನರಿಗೆ ಲಸಿಕೆ ನೀಡಿದ ರಾಜ್ಯವಾಗಿದೆ ಎಂದು ಹೇಳಿದ್ದಾರೆ. 

ಕಾಶಿ ಪೂರ್ವಾಂಚಲದ ಅತ್ಯಂದ ದೊಡ್ಡ ವೈದ್ಯಕೀಯ ಹಬ್​ ಆಗಿ ಬದಲಾಗುತ್ತಿದೆ. ಈ ಹಿಂದೆ ಇಲ್ಲಿನ ಜನರು ಕೆಲವು ರೋಗಗಳ ಚಿಕಿತ್ಸೆಗೆ ಮುಂಬೈ ಅಥವಾ ದೆಹಲಿಯ ದೊಡ್ಡ ಆಸ್ಪತ್ರೆಗಳಿಗೆ ಹೋಗಬೇಕಾಗಿತ್ತು. ಇದೀಗ ಆ ವೈದ್ಯಕೀಯ ಸೌಲಭ್ಯಗಳನ್ನೆಲ್ಲ ಕಾಶಿಗೆ ಒದಗಿಸಲಾಗುತ್ತಿದೆ. ಇದರಿಂದ ಇಲ್ಲಿನ ಜನರಿಗೆ ಖಂಡಿತ ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.

ಒಂದು ಕಾಲದಲ್ಲಿ ಉತ್ತರಪ್ರದೇಶದಲ್ಲಿ ಯಾವುದೇ ಉದ್ಯಮ ಮಾಡುವುದೇ ಕಷ್ಟ ಎಂಬ ಪರಿಸ್ಥಿತಿ ಇತ್ತು. ಆದರೆ ಇಂದು ಈ ರಾಜ್ಯ ಮೇಕ್​ ಇನ್​ ಇಂಡಿಯಾ ಪರಿಕಲ್ಪನೆಗೆ ಅತ್ಯಂತ ಒಳ್ಳೆಯ ಪ್ರದೇಶವಾಗಿದೆ. 2017ಕ್ಕೂ ಮೊದಲು ಉತ್ತರಪ್ರದೇಶಕ್ಕೆ ಯಾವುದೇ ಅಭಿವೃದ್ಧಿ ಯೋಜನೆಗಳೂ ಇರಲಿಲ್ಲ. ನಮ್ಮ ಬಿಜೆಪಿ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಾಗ ಅನುದಾನ ಬಿಡುಗಡೆ ಮಾಡಿದರೂ ಅದು ಬಳಕೆಯಾಗುತ್ತಿರಲಿಲ್ಲ. ಆದರೆ ನಂತರ ಸಿಎಂ ಯೋಗಿಜೀ ಉತ್ತರಪ್ರದೇಶ ಅಭಿವೃದ್ಧಿಗಾಗಿ ತುಂಬ ಶ್ರಮಿಸಿದರು, ಈಗಲೂ ಶ್ರಮಿಸುತ್ತಿದ್ದಾರೆ. 

ಒಂದು ಕಾಲದಲ್ಲಿ ಉತ್ತರಪ್ರದೇಶದಲ್ಲಿ ಭಯೋತ್ಪಾದನೆ, ಮಾಫಿಯಾಗಳೆಲ್ಲ ಹಿಡಿತಕ್ಕೆ ಸಿಗುತ್ತಿರಲಿಲ್ಲ. ಈಗ ಎಲ್ಲವೂ ಬದಲಾಗಿದೆ. ಕಾನೂನು ಸುವ್ಯವಸ್ಥೆ ಪ್ರಬಲವಾಗಿದೆ. ಇಂದು ಉತ್ತರಪ್ರದೇಶ ಸರ್ಕಾರ ನಡೆಯುತ್ತಿರುವುದು ಅಭಿವೃದ್ಧಿ ಮೂಲಕವೇ ಹೊರತು ಭ್ರಷ್ಟಾಚಾರದಿಂದ ಅಲ್ಲ ಎಂದು ಹೇಳಿದ್ದಾರೆ. 

ವಾರಣಾಸಿಗೆ ಭೇಟಿ ನೀಡಿರುವ ಪ್ರಧಾನಿ ಮೋದಿಯವರು ಜಪಾನಿಯರ ನೆರವಿನಿಂದ ನಿರ್ಮಿಸಲಾಗಿರುವ ಅಂತರರಾಷ್ಟ್ರೀಯ ಸಹಕಾರ ಮತ್ತು ಸಭಾ ಕೇಂದ್ರ 'ರುದ್ರಾಕ್ಷ' ಸೇರಿದಂತೆ ರೂ.1,500 ಕೋಟಿಗೂ ಹೆಚ್ಚು ಮೌಲ್ಯದ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. 

ಮೊದಲಿಗೆ  ಬನಾರಸ್‌ ಹಿಂದು ವಿಶ್ವವಿದ್ಯಾಲಯದ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ 100 ಬೆಡ್‌ಗಳಿರುವ ತಾಯಿ ಮತ್ತು ಮಕ್ಕಳ ಆರೋಗ್ಯ ವಿಭಾಗ(ಬಿಎಚ್‌ಯು) ಉದ್ಘಾಟಿಸುವ ಅವರು, ನಂತರ ಗೊದೌಲಿಯಾದಲ್ಲಿ ಬಹು ಹಂತದ ಪಾರ್ಕಿಂಗ್‌ ವ್ಯವಸ್ಥೆ, ಪ್ರವಾಸೋದ್ಯಮ ಅಭಿವೃದ್ಧಿಗೆ ರೊ-ರೊ ವೆಸೆಲ್ಸ್‌, ವಾರಾಣಸಿ-ಘಾಜಿಪುರ್‌ ಹೆದ್ದಾರಿಯಲ್ಲಿ ಮೂರು ಲೇನ್‌ ಫ್ಲೈಓವರ್‌ ಬ್ರಿಡ್ಜ್‌ ಮತ್ತಿತರ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ.

ಸೆಂಟ್ರಲ್ ಇನ್​ಸ್ಟಿಟ್ಯೂಟ್​ ಆಫ್​ ಪೆಟ್ರೋಕೆಮಿಕಲ್​ ಎಂಜನಿಯರಿಂಗ್​ ಮತ್ತು ತಂತ್ರಜ್ಞಾನದ ಕೌಶಲ್ಯ ಮತ್ತು ತಾಂತ್ರಿಕ ಸಹಕಾರ ಕೇಂದ್ರ, ಜಲಜೀವನ ಮಿಶನ್​​ನಡಿ 143 ಗ್ರಾಮೀಣ ಯೋಜನೆಗಳು, ಕಾರ್ಖಿಯಾನ್ವ್​​ನಲ್ಲಿ ಒಂದು ಮಾವು ಮತ್ತು ತರಕಾರಿ ಪ್ಯಾಕ್​ಹೌಸ್​​ ನಿರ್ಮಾಣಕ್ಕೆ ಅಡಿಗಲ್ಲು ಸ್ಥಾಪಿಸಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com