'ಪ್ರಸ್ತುತ ಮೇಕೆದಾಟು ಅಣೆಕಟ್ಟು ನಿರ್ಮಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ': ಕರ್ನಾಟಕಕ್ಕೆ ಶಾಕ್ ಕೊಟ್ಟ ಕೇಂದ್ರ ಸರ್ಕಾರ

ಹಾಲಿ ಪರಿಸ್ಥಿತಿಯಲ್ಲಿ ಕರ್ನಾಟಕ ಸರ್ಕಾರ ಮೇಕೆದಾಟು ಅಣೆಕಟ್ಟು ನಿರ್ಮಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಕೇಂದ್ರ ಸರ್ಕಾರ ಶುಕ್ರವಾರ ಸ್ಪಷ್ಟಪಡಿಸಿದೆ.
ಮೇಕೆದಾಟು
ಮೇಕೆದಾಟು

ಚೆನ್ನೈ: ಹಾಲಿ ಪರಿಸ್ಥಿತಿಯಲ್ಲಿ ಕರ್ನಾಟಕ ಸರ್ಕಾರ ಮೇಕೆದಾಟು ಅಣೆಕಟ್ಟು ನಿರ್ಮಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಕೇಂದ್ರ ಸರ್ಕಾರ ಶುಕ್ರವಾರ ಸ್ಪಷ್ಟಪಡಿಸಿದೆ.

ಮೇಕೆದಾಟು ವಿವಾದ ವಿಚಾರವಾಗಿ ತಮಿಳುನಾಡ ಸರ್ಕಾರದ ನಿಯೋಗ ಇಂದು ತಮ್ಮನ್ನು ಭೇಟಿ ಮಾಡಿದ ಬಳಿಕ ಕೇಂದ್ರ ಜಲ ಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ಇಂತಹುದೊಂದು ಹೇಳಿಕೆ ನೀಡಿದ್ದು, ತಮಿಳುನಾಡು, ಕೇರಳ ಮತ್ತು ಪುದುಚೇರಿ ಮತ್ತು ಕಾವೇರಿ ವಾಟರ್ ಮ್ಯಾನೇಜ್ಮೆಂಟ್ ಅಥಾರಿಟಿ  (ಸಿಡಬ್ಲ್ಯೂಎಂಎ)ಯ ಪೂರ್ವಾಪೇಕ್ಷಿತ ಅಂಶಗಳನ್ನು ಕರ್ನಾಟಕ ಸರ್ಕಾರ ಸ್ಪಷ್ಟಪಡಿಸುವವರೆಗೂ ಈ ಯೋಜನೆ ನಿರ್ಮಿಸುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.

ಸುಮಾರು 45 ನಿಮಿಷಗಳ ಕಾಲ ನಡೆದ ನವದೆಹಲಿಯಲ್ಲಿ ಕೇಂದ್ರ ಸಚಿವರೊಂದಿಗೆ ನಡೆದ ಸಭೆಯ ನಂತರ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ತಮಿಳುನಾಡು ಜಲಸಂಪನ್ಮೂಲ ಸಚಿವ ದೊರೈ ಮುರುಗನ್ ಅವರು, 'ಕರ್ನಾಟಕದ ಡಿಪಿಆರ್ ಅನ್ನು ಒಪ್ಪಲು ಸಾಧ್ಯವಿಲ್ಲ. ಕೇಂದ್ರ ಸರ್ಕಾರ ಕರ್ನಾಟಕದ ಡಿಪಿಆರ್  ಅನ್ನು ಒಪ್ಪುವುದಿಲ್ಲ. ಕರ್ನಾಟಕವು ಡಿಪಿಆರ್‌ನಲ್ಲಿನ ಷರತ್ತುಗಳನ್ನು ಈಡೇರಿಸಿಲ್ಲ. ಕೆಳಗಿನ ರಾಜ್ಯಗಳು ಮತ್ತು ಕೇಂದ್ರ ಜಲ ಆಯೋಗದಿಂದ ಒಪ್ಪಿಗೆ ಪಡೆಯಬೇಕು. ಇವನ್ನು ಮಾಡದೆ ಮೇಕೆದಾಟು ಯೋಜನೆ ಆರಂಭಿಸುವಂತಿಲ್ಲ ಎಂದು ಕೇಂದ್ರ ಜಲ್ ಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಭರವಸೆ ನೀಡಿದ್ದಾರೆ'  ಎಂದು ಹೇಳಿದ್ದಾರೆ.

'ನಿಯೋಗವು ತಮಿಳುನಾಡಿನ ಅಭಿಪ್ರಾಯಗಳನ್ನು ಕೇಂದ್ರ ಸಚಿವರಿಗೆ ಪರಿಣಾಮಕಾರಿಯಾಗಿ ಮಂಡಿಸಿತು. ಮೇಕೆದಾಟುವಿನಲ್ಲಿ ಅಣೆಕಟ್ಟು ನಿರ್ಮಿಸುವಲ್ಲಿ ಕೇಂದ್ರ ಸರ್ಕಾರ ಕರ್ನಾಟಕದ ಪರವಾಗಿ ವರ್ತಿಸಬಾರದು ಎಂದು ನಾವು ಅವರಿಗೆ ಸ್ಪಷ್ಟವಾಗಿ ಹೇಳಿದ್ದೇವೆ. ಮೇಕೆದಾಟುವಿನಲ್ಲಿ ಅಣೆಕಟ್ಟು ನಿರ್ಮಿಸಲು  ವಿವರವಾದ ಯೋಜನಾ ವರದಿಯನ್ನು ತಯಾರಿಸಲು ಕರ್ನಾಟಕಕ್ಕೆ ನೀಡಲಾದ ಅನುಮತಿಯನ್ನೂ ಹಿಂಪಡೆಯುವಂತೆ ನಾವು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿದ್ದೇವೆ ಎಂದು ಹೇಳಿದರು.

ನಿಯೋಗದ ಬೇಡಿಕೆಗಳಿಗೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವರು, ಪೂರ್ವಾಪೇಕ್ಷಿತ ಅಂಶಗಳನ್ನು ಪೂರೈಸದೆ ಕರ್ನಾಟಕ ತಾವಾಗಿಯೇ ಸಿದ್ಧಪಡಿಸಿದ ಡಿಪಿಆರ್ ಅನ್ನು ಜಲ ಶಕ್ತಿ ಸಚಿವಾಲಯ ಸ್ವೀಕರಿಸುವುದಿಲ್ಲ. ನಾವು ಕರ್ನಾಟಕಕ್ಕೆ ಅಣೆಕಟ್ಟು ನಿರ್ಮಾಣ ಸಂಬಂಧ ಯಾವುದೇ ರೀತಿಯ ಭರವಸೆ ನೀಡಿಲ್ಲ ಎಂದು  ಹೇಳಿದ್ದಾರೆ ಎಂದು ಮುರುಗನ್ ಹೇಳಿದರು.

ಕಾವೇರಿ ನಿರ್ವಹಣಾ ಮಂಡಳಿಗೆ ಅಧ್ಯಕ್ಷರ ನೇಮಕ
ಇನ್ನು ಖಾಲಿ ಉಳಿದಿರುವ ಕಾವೇರಿ ನಿರ್ವಹಣಾ ಮಂಡಳಿಗೆ ಅಧ್ಯಕ್ಷರ ನೇಮಕ ಮಾಡುವ ವಿಚಾರವಾಗಿ ಮಾತನಾಡಿದ ದೊರೈ ಮುರುಗನ್ ಅವರು, ಈ ವಿಚಾರವಾಗಿಯೂ ತಾವು ಕೇಂದ್ರ ಸಚಿವರೊಂದಿಗೆ ಮಾತುಕತೆ ನಡೆಸಿದ್ದೇವೆ. ಈ ಹುದ್ದೆಯನ್ನು ಭರ್ತಿ ಮಾಡಲು ಜಾಹೀರಾತುಗಳನ್ನು ನೀಡಲಾಗಿದೆ ಮತ್ತು  ಯಾವುದೇ ತೃಪ್ತಿದಾಯಕ ಪ್ರೊಫೈಲ್‌ ಗಳು ನಮಗೆ ಬಂದಿಲ್ಲ. ಕೇಂದ್ರ ಸರ್ಕಾರ ಕೂಡ ಪೂರ್ಣ ಸಮಯದ ಅಧ್ಯಕ್ಷರನ್ನು ನೇಮಕ ಮಾಡುವ ಪ್ರಕ್ರಿಯೆಯಲ್ಲಿದೆ ಎಂದು ಹೇಳಿದ್ದು, ಮೊದಲೇ ಬೇಡಿಕೆಯಿದ್ದ ಕೆಲವು ಅರ್ಹತೆಗಳನ್ನು ಸಡಿಲಿಸಲಾಗುವುದು ಎಂದು ಅವರು ಹೇಳಿದ್ದಾರೆ ಎಂದು ಹೇಳಿದರು.

ಇನ್ನು ತಮಿಳುನಾಡು ನಿಯೋಗದಲ್ಲಿ ಆರ್.ಎಸ್.ಭಾರತಿ (ಡಿಎಂಕೆ), ಡಿ ಜಯಕುಮಾರ್ (ಎಐಎಡಿಎಂಕೆ), ಎ ಗೋಪಣ್ಣ (ಕಾಂಗ್ರೆಸ್), ಜಿಕೆ ಮಣಿ (ಪಿಎಂಕೆ), ವೈಕೊ (ಎಂಡಿಎಂಕೆ), ಥೋಲ್ ತಿರುಮಾವಾಲವನ್ (ವಿಸಿಕೆ), ಆರ್ಸಿ ಪಾಲ್ ಕನಗರಾಜ್ (ಬಿಜೆಪಿ), ಎನ್ ಪೆರಿಯಾಸಾಮಿ (ಸಿಪಿಐ) ಮತ್ತು ಕೆ ಬಾಲಕೃಷ್ಣನ್  (ಸಿಪಿಎಂ), ಎಂ.ಎಚ್.ಜವಾಹಿರುಲ್ಲಾ (ಎಂಎಂಕೆ), ಎಕೆಪಿ ಚಿನ್ನರಾಜ್ (ಕೊಂಗುನಾಡು ಮಕ್ಕಳ್ ದೇಸಿಯಾ ಕಚ್ಚಿ), ಟಿ ವೆಲ್ ಮುರುಗನ್ (ತಮಿಳಗ ವಳ್ವುರಿಮಯ್ ಕಚ್ಚಿ) ಮತ್ತು ಎಂ ಜಗನ್ ಮೂರ್ತಿ (ಪುರಾಚಿ ಭಾರತಂ) ಸರ್ವಪಕ್ಷಗಳ ನಿಯೋಗದ ಭಾಗವಾಗಿದ್ದರು. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com