ಶೀಘ್ರದಲ್ಲೇ ಸ್ವದೇಶಿ ಡ್ರೋಣ್ ವಿರೋಧಿ ತಂತ್ರಜ್ಞಾನ ಅಭಿವೃದ್ಧಿ: ಕೇಂದ್ರ ಗೃಹ ಸಚಿವ ಅಮಿತ್ ಶಾ

ಭಾರತದ ರಕ್ಷಣಾ ನೀತಿ ವಿದೇಶಾಂಗ ನೀತಿಯೊಂದಿಗೆ ಪ್ರಭಾವಿತವಾಗಿದ್ದು, ನರೇಂದ್ರ ಮೋದಿ ಪ್ರಧಾನಿಯಾದ ನಂತರವೇ ದೇಶಕ್ಕೆ ಸ್ವತಂತ್ರ ರಕ್ಷಣಾ ಕಾರ್ಯತಂತ್ರ ಸಿಕ್ಕಿತು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶನಿವಾರ ಹೇಳಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ
ಕೇಂದ್ರ ಗೃಹ ಸಚಿವ ಅಮಿತ್ ಶಾ

ನವದೆಹಲಿ: ಭಾರತದ ರಕ್ಷಣಾ ನೀತಿ ವಿದೇಶಾಂಗ ನೀತಿಯೊಂದಿಗೆ ಪ್ರಭಾವಿತವಾಗಿದ್ದು, ನರೇಂದ್ರ ಮೋದಿ ಪ್ರಧಾನಿಯಾದ ನಂತರವೇ ದೇಶಕ್ಕೆ ಸ್ವತಂತ್ರ ರಕ್ಷಣಾ ಕಾರ್ಯತಂತ್ರ ಸಿಕ್ಕಿತು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶನಿವಾರ ಹೇಳಿದ್ದಾರೆ.

ಡಿಆರ್ ಡಿಒ ಮತ್ತಿತರ ಏಜೆನ್ಸಿಗಳು ಕಾರ್ಯಗತಗೊಳಿಸುತ್ತಿರುವ ಸ್ವದೇಶಿ ಡ್ರೋಣ್ ವಿರೋಧಿ ತಂತ್ರಜ್ಞಾನವನ್ನು ಶೀಘ್ರದಲ್ಲಿಯೇ ಅಭಿವೃದ್ಧಿಪಡಿಸಲಾಗುವುದು ಎಂದು ಕೇಂದ್ರ ಗೃಹ ಸಚಿವರು ತಿಳಿಸಿದ್ದಾರೆ. 

ಕಳೆದ ತಿಂಗಳು ಜಮ್ಮುವಿನ ವಾಯುನೆಲೆಯಲ್ಲಿ ಮೊದಲ ಬಾರಿಗೆ ನಡೆದ ಡ್ರೋನ್ ದಾಳಿ ಹಿನ್ನೆಲೆಯಲ್ಲಿ ಅಮಿತ್ ಶಾ ಈ ರೀತಿಯ ಹೇಳಿಕೆ ನೀಡಿದ್ದಾರೆ. ಮಾನವ ರಹಿತ ಎರಡು ಡ್ರೋಣ್ ಗಳಿಂದ ಹಾಕಲಾದ ಬಾಂಬ್ ನಿಂದ ಇಬ್ಬರು ವಾಯು ಪಡೆ ಸಿಬ್ಬಂದಿ ಗಾಯಗೊಂಡಿದ್ದರು. ಕಟ್ಟಡವೊಂದರ ಒಳಗಡೆಯ ಭಾಗವೊಂದಕ್ಕೆ ಹಾನಿಯಾಗಿತ್ತು. 

ರುಸ್ತಮ್ಜಿ ನೆನಪಿನ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ದೇಶದಲ್ಲಿ ರಕ್ಷಣಾ ನೀತಿ ಇದೆಯೇ ಅಥವಾ ಇಲ್ಲವೇ ಎಂದು ಯೋಚಿಸುತ್ತಿದೆ. ನರೇಂದ್ರ ಮೋದಿ ಪ್ರಧಾನ ಮಂತ್ರಿಯಾಗುವವರೆಗೂ ನಾವು ಯಾವುದೇ ಸ್ವತಂತ್ರ ರಕ್ಷಣಾ ನೀತಿಯನ್ನು ಹೊಂದಿರಲಿಲ್ಲ. ಮೋದಿ ಪ್ರಧಾನಿಯಾದ ನಂತರ ದೇಶ ಸ್ವತಂತ್ರ ರಕ್ಷಣಾ ನೀತಿಯೊಂದನ್ನು ಪಡೆಯಿತು ಎಂದರು.

ಎಲ್ಲಾರೊಂದಿಗೂ ಶಾಂತಿಯುತ ಸಂಬಂಧ ಹೊಂದಬೇಕೆನ್ನುವುದು ನಮ್ಮ ಯೋಜನೆ ಆದರೆ, ಕೆಲವರು ನಮ್ಮ ಗಡಿಗಳಲ್ಲಿ ತೊಂದರೆ ಉಂಟು ಮಾಡುತ್ತಿದ್ದಾರೆ. ಯಾರೊ ಒಬ್ಬರು ನಮ್ಮ ಸಾರ್ವಭೌಮತ್ವವನ್ನು ಪ್ರಶ್ನಿಸಿದರೆ, ಅವರದೇ ಭಾಷೆಯಲ್ಲಿ ಪ್ರತಿಕ್ರಿಯೆ ನೀಡುವುದು ನಮ್ಮ ಭದ್ರತಾ ನೀತಿಯ ಆದ್ಯತೆಯಾಗಿದೆ. ದೇಶ ಅಂತಹ ಉತ್ತಮ ಯೋಜನೆಯನ್ನು ಬಯಸಿದ್ದರಿಂದ ಈ ಭದ್ರತಾ ನೀತಿ ದೊಡ್ಡ ಸಾಧನೆ ಎಂದು ಅವರು ಹೇಳಿದರು.

ಈ ರಕ್ಷಣಾ ನೀತಿ ಇಲ್ಲದೆ ದೇಶದ ಪ್ರಗತಿಗೆ ಸಾಧ್ಯವಿಲ್ಲ ಅಥವಾ ಪ್ರಜಾಪ್ರಭುತ್ವವು ಏಳಿಗೆ ಹೊಂದಲು ಸಾಧ್ಯವಿಲ್ಲ ಎಂಬುದು ನನ್ನ ನಂಬಿಕೆಯಾಗಿದೆ. 2022 ರ ವೇಳೆಗೆ ದೇಶದ ಗಡಿಯುದ್ದಕ್ಕೂ ಬೇಲಿಯಲ್ಲಿ ಯಾವುದೇ ಅಂತರವಿಲ್ಲದಂತೆ ಖಾತ್ರಿಪಡಿಸಲು ಸರ್ಕಾರ ಕಾರ್ಯನಿರ್ವಹಿಸುವುದಾಗಿ ಅವರು ತಿಳಿಸಿದರು.

ಪ್ರಸ್ತುತ ದೇಶದ ಗಡಿಯಲ್ಲಿ ಶೇಕಡಾ ಮೂರರಷ್ಟು ಬೇಲಿರಹಿತವಾಗಿದೆ. ಇದು ಉಗ್ರರು ಒಳನುಸುಳುವಿಕೆ, ಶಸಾಸ್ತ್ರಗಳು, ಮಾಧಕ ವಸ್ತು  ಕಳ್ಳ ಸಾಗಾಣಿಕೆ ಮತ್ತಿತರ ಗಡಿ ಅಪರಾಧ ಚಟುವಟಿಕೆಗಳಿಗೆ ದೊಡ್ಡ ಜಾಗವಾಗಿದೆ ಎಂದು ಅಮಿತ್ ಶಾ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com