ಸುಪ್ರೀಂ ತರಾಟೆಯ ಬೆನ್ನಲ್ಲೇ ಉತ್ತರ ಪ್ರದೇಶದಲ್ಲಿ ಕನ್ವರ್ ಯಾತ್ರೆ ರದ್ದು

ಉತ್ತರ ಪ್ರದೇಶದಲ್ಲಿ ವಾರ್ಷಿಕವಾಗಿ ನಡೆಯುವ ಕನ್ವರ್ ಯಾತ್ರೆಯನ್ನು ರದ್ದುಗೊಳಿಸಲಾಗಿದೆ ಎಂದು ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. 
ಕನ್ವರ್ ಯಾತ್ರೆ (ಸಂಗ್ರಹ ಚಿತ್ರ)
ಕನ್ವರ್ ಯಾತ್ರೆ (ಸಂಗ್ರಹ ಚಿತ್ರ)

ಲಖನೌ: ಉತ್ತರ ಪ್ರದೇಶದಲ್ಲಿ ವಾರ್ಷಿಕವಾಗಿ ನಡೆಯುವ ಕನ್ವರ್ ಯಾತ್ರೆಯನ್ನು ರದ್ದುಗೊಳಿಸಲಾಗಿದೆ ಎಂದು ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. 

ಕೋವಿಡ್-19 ದೃಷ್ಟಿಯಿಂದಾಗಿ ಶೇ.100 ರಷ್ಟು ಭೌತಿಕ ಪಾಲ್ಗೊಳ್ಳುವಿಕೆಗೆ ಅನುಮತಿ ನೀಡಲಾಗುವುದಿಲ್ಲ, ಧಾರ್ಮಿಕವೂ ಸೇರಿದಂತೆ ಎಲ್ಲಾ ಭಾವನೆಗಳೂ ಜೀವನದ ಹಕ್ಕಿಗೆ ಅಧೀನವಾಗಿರುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು. 

ಈ ಬೆನ್ನಲ್ಲೇ ಉತ್ತರ ಪ್ರದೇಶ ಸರ್ಕಾರ ಯಾತ್ರೆಯನ್ನು ರದ್ದುಗೊಳಿಸುವ ನಿರ್ಧಾರವನ್ನು ಪ್ರಕಟಿಸಿದೆ ಎಂದು ಮಾಹಿತಿ ವಿಭಾಗದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನವನೀತ್ ಸೆಹ್ಗಲ್ ಸ್ಪಷ್ಟಪಡಿಸಿದ್ದಾರೆ. 

ಜುಲೈ 25 ರಿಂದ ಕನ್ವರ್ ಯಾತ್ರೆ ಪ್ರಾರಂಭವಾಗಬೇಕಿತ್ತು. ಈ ನಡುವೆ ಉತ್ತರಾಖಂಡ್ ಸರ್ಕಾರ ಮುನ್ನೆಚ್ಚರಿಕಾ ಕ್ರಮವಾಗಿ ಕನ್ವರ್ ಯಾತ್ರೆಯನ್ನು ಈಗಾಗಲೇ ರದ್ದುಗೊಳಿಸಿದೆ.  ಜು.25 ರಿಂದ ನಿಗದಿಯಾಗಿದ್ದ ಯಾತ್ರೆ ಆಗಸ್ಟ್ ಮೊದಲ ವಾರದವರೆಗೂ ನಡೆಯಬೇಕಿತ್ತು. ಹರಿದ್ವಾರದಲ್ಲಿನ ಗಂಗಾ ನದಿಯನ್ನು ಸಂಗ್ರಹಿಸಲು ಲಕ್ಷಾಂತರ ಮಂದಿ "ಕನ್ವರಿ"ಗಳು(ಶಿವನ ಭಕ್ತಾದಿಗಳು) ಉತ್ತರ ಪ್ರದೇಶ, ಹರ್ಯಾಣ, ದೆಹಲಿಗಳಿಂದ ಉತ್ತರಾಖಂಡ್ ಗೆ ಕಾಲ್ನಡಿಗೆಯಲ್ಲಿ ಸಂಚರಿಸುತ್ತಾರೆ. 

ಕನ್ವರ್ ಯಾತ್ರೆ ಬಗ್ಗೆ ಸುಪ್ರೀಂ ಕೋರ್ಟ್ ಗೆ ಹೇಳಿಕೆ ನೀಡಿದ್ದ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳು ಯಾವುದೇ ರೀತಿಯ ಕನ್ವರ್ ಯಾತ್ರೆಗಳಿಗೂ ಅನುಮತಿ ನೀಡಬಾರದು, ಆದರೆ ಗಂಗಾ ನದಿಯ ನೀರನ್ನು ಟ್ಯಾಂಕರ್ ಗಳ ಮೂಲಕ ನಿರ್ದಿಷ್ಟ ಪ್ರದೇಶಗಳಲ್ಲಿ ಲಭ್ಯವಾಗುವಂತಹ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕೆಂದು ಹೇಳಿತ್ತು. ಕನ್ವರ್ ಯಾತ್ರೆಯನ್ನು ಸಾಂಕೇತಿಕವಾಗಿ ನಡೆಸುವುದಾಗಿ ಈ ಹಿಂದೆ ಉತ್ತರ ಪ್ರದೇಶ ಸರ್ಕಾರ ಸುಪ್ರೀಂ ಕೋರ್ಟ್ ಕೇಳಿದ್ದ ಪ್ರತಿಕ್ರಿಯೆಗೆ ಉತ್ತರಿಸಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com