ಪೆಗಾಸಸ್ ಸ್ಪೈವೇರ್ ಆರೋಪಕ್ಕೆ ಸೂಕ್ತ ಸಾಕ್ಷ್ಯಗಳೇ ಇಲ್ಲ: ವಿಪಕ್ಷಗಳಿಗೆ ಕೇಂದ್ರ ಸರ್ಕಾರ ತಿರುಗೇಟು

ಸಂಸತ್ ನ ಉಭಯ ಕಲಾಪಗಳಲ್ಲಿ ಭಾರಿ ಕೋಲಾಹಲಕ್ಕೆ ಕಾರಣವಾಗಿರುವ ಪೆಗಾಸಸ್ ಸ್ಪೈ ವೇರ್ ಆರೋಪಕ್ಕೆ ಸೂಕ್ತ ದಾಖಲೆಗಳೇ ಇಲ್ಲ ಎಂದು ಕೇಂದ್ರ ಸರ್ಕಾರ ತಿರುಗೇಟು ನೀಡಿದೆ.
ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಕೇಂದ್ರ ಸಚಿವ ಅಶ್ವಿನಿ ವೈಷ್ಣವ್

ನವದೆಹಲಿ: ಸಂಸತ್ ನ ಉಭಯ ಕಲಾಪಗಳಲ್ಲಿ ಭಾರಿ ಕೋಲಾಹಲಕ್ಕೆ ಕಾರಣವಾಗಿರುವ ಪೆಗಾಸಸ್ ಸ್ಪೈ ವೇರ್ ಆರೋಪಕ್ಕೆ ಸೂಕ್ತ ದಾಖಲೆಗಳೇ ಇಲ್ಲ ಎಂದು ಕೇಂದ್ರ ಸರ್ಕಾರ ತಿರುಗೇಟು ನೀಡಿದೆ.

ಇಸ್ರೇಲ್‌ ಮೂಲದ ಸ್ಪೈ ವೇರ್ ಬಳಸಿ 40ಕ್ಕೂ ಹೆಚ್ಚು ಪತ್ರಕರ್ತರ, ರಾಜಕಾರಣಿಗಳ ಮೊಬೈಲ್‌ ಫೋನ್‌ ಗಳನ್ನು ಹ್ಯಾಕ್‌ ಮಾಡಲಾಗಿದೆ ಎಂಬ ವಿಸ್ತೃತ ಸರಣಿ ವರದಿಗಳನ್ನು ಉಲ್ಲೇಖಿಸಿ ವಿಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದು, ಇದಕ್ಕೆ ಕೇಂದ್ರ ಸರ್ಕಾರ ತಿರುಗೇಟು ನೀಡಿದೆ. 

ಸಂಸತ್ ಅಧಿವೇಶನದಲ್ಲಿ ಈ ಕುರಿತು ಮಾತನಾಡಿದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಅವರು, ಈ ಹಿಂದೆ, ವಾಟ್ಸಾಪ್ ನಲ್ಲಿ ಪೆಗಾಸಸ್ ಬಳಕೆಗೆ ಸಂಬಂಧಿಸಿದಂತೆ ಇದೇ ರೀತಿಯ ಆರೋಪಗಳನ್ನು ಮಾಡಲಾಗಿತ್ತು. ಆ ವರದಿಗಳಿಗೆ ಯಾವುದೇ ವಾಸ್ತವಿಕ ಆಧಾರವಿರಲಿಲ್ಲ. ಜುಲೈ  18 2021 ರ ಪತ್ರಿಕಾ ವರದಿಗಳು ಭಾರತೀಯ ಪ್ರಜಾಪ್ರಭುತ್ವ ಮತ್ತು ಅದರ ಸುಸ್ಥಾಪಿತ ಸಂಸ್ಥೆಗಳನ್ನು ಕೆಣಕುವ ಪ್ರಯತ್ನವೆಂದು ತೋರುತ್ತದೆ. ಹೆಚ್ಚು ಸಂವೇದನಾಶೀಲ ಕಥೆಯನ್ನು ಕಳೆದ ರಾತ್ರಿ ವೆಬ್ ಪೋರ್ಟಲ್ ಪ್ರಕಟಿಸಿದೆ. ಈ ಕಥೆಯ ಸುತ್ತಲೂ ಅನೇಕ ಆರೋಪಗಳು ಕೇಳಿ ಬರುತ್ತಿವೆ. ಸಂಸತ್ತಿನ ಮಾನ್ಸೂನ್ ಅಧಿವೇಶನಕ್ಕೆ ಒಂದು ದಿನ ಮೊದಲು ಪತ್ರಿಕಾ ವರದಿಗಳು ಪ್ರಕಟವಾಗಿವೆ ಎಂದು ಹೇಳುವ ಮೂಲಕ ವರದಿಯ ಹಿಂದೆ ಕಾಣದ ಕೈಗಳ ಕೈವಾಡವಿರಬಹುದು ಎಂದು ಸಚಿವರು ಶಂಕಿಸಿದ್ದಾರೆ.

ನಾವು ಈ ವಿಚಾರವನ್ನು ಸೂಕ್ಷ್ಮವಾಗಿ ಗಮನಿಸಿದರೆ ಈ ಆರೋಪದಲ್ಲಿ ಯಾವುದೇ ರೀತಿಯ ಹುರುಳಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ನಮ್ಮ ಕಾನೂನುಗಳು ಮತ್ತು ದೃಢವಾದ ಸಂಸ್ಥೆಗಳಲ್ಲಿನ ಪರಿಶೀಲನೆಯಡಿಯಲ್ಲಿ ಯಾವುದೇ ರೀತಿಯ ಅಕ್ರಮ ಹ್ಯಾಕಿಂಗ್ ಸಾಧ್ಯವಿಲ್ಲ. ಭಾರತದಲ್ಲಿ, ಸುಸ್ಥಾಪಿತ ಕಾರ್ಯವಿಧಾನವಿದೆ, ಅದರ ಮೂಲಕ ರಾಷ್ಟ್ರೀಯ ಭದ್ರತೆಯ ಉದ್ದೇಶಕ್ಕಾಗಿ ಎಲೆಕ್ಟ್ರಾನಿಕ್ ಸಂವಹನದ ಕಾನೂನುಬದ್ಧ ಪ್ರತಿಬಂಧವನ್ನು ನಡೆಸಲಾಗುತ್ತದೆ ಎಂದು ಹೇಳಿದರು.

ಹ್ಯಾಕಿಂಗ್ ಸಂತ್ರಸ್ಥರ ಪಟ್ಟಿಯಲ್ಲಿ ಭಾರತೀಯ ಪತ್ರಕರ್ತರು
ಪ್ರಸ್ತುತ ಪ್ರಕಟವಾಗಿರುವ ವರದಿಯಲ್ಲಿ ಕೆಲವು ಪತ್ರಕರ್ತರ ಫೋನ್‌ಗಳು ಪೆಗಾಸಸ್ ಮಾಲ್‌ವೇರ್‌ನಿಂದ ಒಳಪಟ್ಟಿವೆ ಎಂದು ವಿಧಿವಿಜ್ಞಾನ ಪರೀಕ್ಷೆಗಳು ಖಚಿತಪಡಿಸಿವೆ ಎಂದು ತಿಳಿಸಿದೆ. ವರದಿಯಲ್ಲಿರುವಂತೆ ಹಿಂದೂಸ್ತಾನ್ ಟೈಮ್ಸ್, ದಿ ಹಿಂದೂ, ಇಂಡಿಯಾ ಟುಡೆ, ಇಂಡಿಯನ್ ಎಕ್ಸ್‌ಪ್ರೆಸ್ ಮತ್ತು ನೆಟ್‌ವರ್ಕ್ 18  ಸೇರಿದಂತೆ ದೇಶದ ಕೆಲವು ಸುದ್ದಿ ಸಂಸ್ಥೆಗಳಿಗೆ ಸೇರಿದ ಪತ್ರಕರ್ತರ ಫೋನ್ ಗಳಲ್ಲಿ ಪೆಗಾಸಸ್ ಸ್ಪೈವೇರ್ ಬಳಕೆ ಮಾಡಲಾಗಿದೆ. ಅಲ್ಲದೆ ಅವುಗಳಲ್ಲಿ ಹಲವು ರಕ್ಷಣಾ, ಗೃಹ ಸಚಿವಾಲಯ, ಚುನಾವಣಾ ಆಯೋಗ ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದ ವಿಷಯಗಳನ್ನು ಒಳಗೊಂಡಿವೆ ಎಂದು ಹೇಳಲಾಗಿದೆ. ದಿ ವೈರ್ ಸ್ಥಾಪಕ-ಸಂಪಾದಕರಾದ ಸಿದ್ಧಾರ್ಥ್ ವರದರಾಜನ್ ಮತ್ತು ಎಂ.ಕೆ.ವೇಣು ಅವರ ಫೋನ್‌ಗಳನ್ನು ಸಹ ಪೆಗಾಸಸ್ ಸ್ಪೈವೇರ್ ಹ್ಯಾಕ್ ಮಾಡಲಾಗಿದೆ. ಅಲ್ಲದೆ ಕೆಲ ಪ್ರಮುಖ ಪತ್ರಕರ್ತರಾದ ಶಿಶಿರ್ ಗುಪ್ತಾ, ಪ್ರಶಾಂತ್ ಝಾ, ರಾಹುಲ್ ಸಿಂಗ್, ಸಂದೀಪ್ ಉನ್ನಿತಾನ್, ಮನೋಜ್ ಗುಪ್ತಾ, ವಿಜೈತ ಸಿಂಗ್ ಮತ್ತು ಜೆ ಗೋಪಿಕೃಷ್ಣನ್ ಅವರ ಫೋನ್ ಗಳನ್ನು ಹ್ಯಾಕ್ ಮಾಡಿರುವ ಸಾಧ್ಯತೆ ಇದೆ ಎಂದು ವರದಿಯಲ್ಲಿ ಹೇಳಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com