ಪೆಗಾಸಸ್ ವಿವಾದ: 'ಕಣ್ಗಾವಲು ಪರಿಸ್ಥಿತಿ' ನಿರ್ಮಾಣಕ್ಕೆ ಮೋದಿ ಸರ್ಕಾರ ಪ್ರಯತ್ನ; ಬಿಜೆಪಿ ವಿರೋಧಿ ರಂಗ ರಚನೆಗೆ ಮಮತಾ ಬ್ಯಾನರ್ಜಿ ಕರೆ

ದೇಶದಲ್ಲಿ ಆಡಳಿತಾರೂಢ ಬಿಜೆಪಿ ಸರ್ಕಾರ 'ಕಣ್ಗಾವಲು ಪರಿಸ್ಥಿತಿ' ನಿರ್ಮಾಣ ಮಾಡುತ್ತಿದ್ದು, ಬಿಜೆಪಿ ವಿರೋಧಿ ರಂಗ ರಚನೆಗೆ ಸಮಯ ಬಂದಿದೆ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಮಮತಾ ಬ್ಯಾನರ್ಜಿ
ಮಮತಾ ಬ್ಯಾನರ್ಜಿ

ಕೋಲ್ಕತಾ: ದೇಶದಲ್ಲಿ ಆಡಳಿತಾರೂಢ ಬಿಜೆಪಿ ಸರ್ಕಾರ 'ಕಣ್ಗಾವಲು ಪರಿಸ್ಥಿತಿ' ನಿರ್ಮಾಣ ಮಾಡುತ್ತಿದ್ದು, ಬಿಜೆಪಿ ವಿರೋಧಿ ರಂಗ ರಚನೆಗೆ ಸಮಯ ಬಂದಿದೆ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಪೆಗಾಸಸ್ ವಿವಾದದ ಕುರಿತಂತೆ ಕೋಲ್ಕತ್ತಾದಲ್ಲಿ ನಡೆದ ತೃಣಮೂಲ ಕಾಂಗ್ರೆಸ್‌ನ ರ್‍ಯಾಲಿಯಲ್ಲಿ ಮಾತನಾಡಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು. 'ಪ್ರತಿಪಕ್ಷ ನಾಯಕರು, ಸಚಿವರು, ನ್ಯಾಯಾಧೀಶರು ಮತ್ತು ಅಧಿಕಾರಿಗಳ ಫೋನ್‌ಗಳನ್ನು ಟ್ಯಾಪ್  ಮಾಡಲಾಗುತ್ತಿದೆ ಎಂದು ಆರೋಪಿಸಿದರು. ಇದೇವೇಳೆ, ಪ್ರತಿಪಕ್ಷಗಳು ಬಿಜೆಪಿ ವಿರೋಧಿ ರಂಗವನ್ನು ರಚಿಸಬೇಕೆಂದು ಒತ್ತಾಯಿಸಿದ್ದಾರೆ.

'ಬಿಜೆಪಿ ಪ್ರಜಾಪ್ರಭುತ್ವವನ್ನು ಪ್ರೀತಿಸುತ್ತಿದ್ದರೆ ಅದು ದೇಶದ ಒಕ್ಕೂಟ ವ್ಯವಸ್ಥೆಯನ್ನು ಉರುಳಿಸುವ ಯತ್ನ ಮಾಡುತ್ತಿರಲಿಲ್ಲ. ಪ್ರತಿಪಕ್ಷಗಳ ಆಳ್ವಿಕೆ ಇರುವ ರಾಜ್ಯಗಳಲ್ಲಿ ಬಿಜೆಪಿ ವಿರೋಧಿ ರಂಗ ಸ್ಥಾಪಿಸಬೇಕೆಂದು ನಾನು ಒತ್ತಾಯಿಸುತ್ತೇನೆ. 2024 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ವಿರೋಧ  ಪಕ್ಷಗಳು ಒಗ್ಗೂಡಬೇಕು. ಯುದ್ಧಕ್ಕೆ ತಯಾರಾಗಲು ಇದು ಸರಿಯಾದ ಸಮಯ. ಪ್ರಜಾಪ್ರಭುತ್ವವನ್ನು ಕಾಪಾಡುವ ಬದಲು ಬಿಜೆಪಿ ದೇಶದಾದ್ಯಂತ ಬೇಹುಗಾರಿಕೆ ನಡೆಸುತ್ತಿದೆ. ತನ್ನ ಫೋನ್ ಟ್ಯಾಪ್ ಆಗುತ್ತಿರುವುದರಿಂದ ಯಾವುದೇ ಪ್ರತಿಪಕ್ಷದ ನಾಯಕರಿಗೆ ಕರೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ದೀದಿ  ಆರೋಪಿಸಿದ್ದಾರೆ.

'ನನ್ನ ಫೋನ್ ಅನ್ನು ಕೂಡ ಟ್ಯಾಪ್ ಮಾಡಲಾಗುತ್ತಿದೆ ಎಂದು ನನಗೆ ತಿಳಿದಿದೆ. ನಮ್ಮೆಲ್ಲರ ಫೋನ್ ಗಳನ್ನು ಟ್ಯಾಪ್ ಮಾಡಲಾಗುತ್ತಿದೆ ಎಂದು ಎಲ್ಲಾ ವಿರೋಧ ಪಕ್ಷದ ನಾಯಕರು ತಿಳಿದಿದ್ದಾರೆ. ಎನ್‌ಸಿಪಿ ನಾಯಕ ಶರದ್ ಪವಾರ್ ಅಥವಾ ಇತರೆ ವಿರೋಧ ಪಕ್ಷದ ನಾಯಕರು ಅಥವಾ ಮುಖ್ಯಮಂತ್ರಿಗಳೊಂದಿಗೆ  ಮಾತನಾಡಲು ನನಗೆ ಸಾಧ್ಯವಿಲ್ಲ. ಏಕೆಂದರೆ ನಾವು ಕೇಂದ್ರ ಸರ್ಕಾರ ಗೂಢಚರ್ಯೆ ಮತ್ತು ಬೇಹುಗಾರಿಕೆ ನಡೆಸುತ್ತಿದೆ. 2024 ರ ಲೋಕಸಭಾ ಚುನಾವಣೆಯಲ್ಲಿ ನಮ್ಮ ಮೇಲೆ ಕಣ್ಣಿಟ್ಟರೆ ಅವರನ್ನು ಉಳಿಸಲಾಗುವುದಿಲ್ಲ ಎಂದು ಬ್ಯಾನರ್ಜಿ ಎಚ್ಚರಿಕೆ ನೀಡಿದರು.

ಅಂತೆಯೇ ಕೋವಿಡ್-19 ಬಿಕ್ಕಟ್ಟಿನ ಎರಡನೇ ಅಲೆಯನ್ನು ನಿಭಾಯಿಸುವಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ವೈಫಲ್ಯವಾಗಿದೆ. ಕೇಸರಿ ಪಕ್ಷ "ಹೆಚ್ಚು ಲೋಡ್ ಮಾಡಲಾದ ವೈರಸ್ ಪಕ್ಷ". ಅದನ್ನು ಯಾವುದೇ ಸಂದರ್ಭದಲ್ಲೂ ಎಂತಹುದೇ ಕಠಿಣ ಪರಿಸ್ಥಿತಿಯಲ್ಲೂ ಸೋಲಿಸಬೇಕಾಗಿದೆ ಎಂದು ಹೇಳಿದರು, 

ಕಾಂಗ್ರೆಸ್, ಎನ್‌ಸಿಪಿ, ಎಸ್‌ಪಿ, ಶಿವಸೇನೆ ಮತ್ತು ಇತರ ಹಲವಾರು ಪಕ್ಷಗಳ ನಾಯಕರು ತಮ್ಮ ರ್ಯಾಲಿಯಲ್ಲಿ  ಪಾಲ್ಗೊಂಡಿದ್ದಕ್ಕೆ ಮಮತಾ ಬ್ಯಾನರ್ಜಿ ಧನ್ಯವಾದ ಅರ್ಪಿಸಿದರು.

ಅಂತೆಯೇ ಬಿಜೆಪಿ ಮತ್ತು ಅದರ "ಸರ್ವಾಧಿಕಾರಿ ಆಡಳಿತ" ವನ್ನು ವಿರೋಧಿಸುವವರೆಲ್ಲರೂ ಒಗ್ಗೂಡಬೇಕು ಮತ್ತು ಅದನ್ನು ಸೋಲಿಸಬೇಕು. ಬಿಜೆಪಿ ದೇಶವನ್ನು ಕತ್ತಲೆಗೆ ಕೊಂಡೊಯ್ದಿದೆ, ಅದನ್ನು ಹೊಸ ಬೆಳಕಿನತ್ತ ಕೊಂಡೊಯ್ಯಲು ನಾವೆಲ್ಲರೂ ಮುಂದೆ ಬರಬೇಕಾಗಿದೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com