ಹಿರಿಯ ಪೊಲೀಸ್ ಅಧಿಕಾರಿಗೆ ವರ್ಗಾವಣೆ ಬೆದರಿಕೆ, ಕರೆ ವಿವರ ಪಡೆದ ಆರೋಪ: ಸುವೇಂದು ಅಧಿಕಾರಿ ವಿರುದ್ಧ ಕೇಸ್!
ದೇಶಾದ್ಯಂತ ಗೂಢಚರ್ಯೆಯ ಚಟುವಟಿಕೆಗಳಿಗೆ ಸಂಬಂಧಿಸಿದ ಸುದ್ದಿ ಪ್ರಾಮುಖ್ಯತೆ ಪಡೆದಿರುವ ನಡುವೆ ಪಶ್ಚಿಮ ಬಂಗಾಳದ ವಿಪಕ್ಷ ನಾಯಕ ಸುವೇಂದು ಅಧಿಕಾರಿ ವಿರುದ್ಧ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ಕರೆ ವಿವರಗಳನ್ನು ಅಕ್ರಮವಾಗಿ ಪಡೆದಿರುವ ಆರೋಪ ಕೇಳಿಬಂದಿದೆ.
Published: 21st July 2021 12:52 AM | Last Updated: 21st July 2021 01:45 PM | A+A A-

ಸುವೇಂದು ಅಧಿಕಾರಿ
ಕೋಲ್ಕತ್ತ: ದೇಶಾದ್ಯಂತ ಗೂಢಚರ್ಯೆಯ ಚಟುವಟಿಕೆಗಳಿಗೆ ಸಂಬಂಧಿಸಿದ ಸುದ್ದಿ ಪ್ರಾಮುಖ್ಯತೆ ಪಡೆದಿರುವ ನಡುವೆ ಪಶ್ಚಿಮ ಬಂಗಾಳದ ವಿಪಕ್ಷ ನಾಯಕ ಸುವೇಂದು ಅಧಿಕಾರಿ ವಿರುದ್ಧ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ಕರೆ ವಿವರಗಳನ್ನು ಅಕ್ರಮವಾಗಿ ಪಡೆದಿರುವ ಆರೋಪ ಕೇಳಿಬಂದಿದೆ.
ಜಿಲ್ಲಾ ಎಸ್ ಪಿ ಪುರ್ಬಾ ಮೇದಿನಿಪುರ್ ಅವರ ಕರೆ ವಿವರಗಳು ತಮ್ಮ ಬಳಿ ಇದೆ ಎಂದು ಹೇಳುವ ಮೂಲಕ ಸುವೇಂದು ಅಧಿಕಾರಿ ವಿವಾದ ಸೃಷ್ಟಿಸಿದ್ದಾರೆ ಅಷ್ಟೇ ಅಲ್ಲದೇ ಕಾನೂನಿನ ಪ್ರಕರಣವನ್ನೂ ಮೈಮೇಲೆ ಎಳೆದುಕೊಂಡಿದ್ದಾರೆ.
ನಂದಿಗ್ರಾಮ ಜಿಲ್ಲೆಯ ತಮ್ಲುಕ್ ಪ್ರದೇಶದಲ್ಲಿ ಪಕ್ಷದ ಸಭೆಯಲ್ಲಿ ಮಾತನಾಡಿದ್ದ ಸುವೇಂದು ಅಧಿಕಾರಿ, ಜಿಲ್ಲೆಯ ಪೊಲೀಸರು ರಾಜಕೀಯ ಪ್ರೇರಿತ ನಕಲಿ ಪ್ರಕರಣಗಳನ್ನು ದಾಖಲಿಸುವುದನ್ನು ಬಿಡಬೇಕು ಎಂದು ಎಚ್ಚರಿಕೆ ನೀಡುವ ಭರದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಜಮ್ಮು-ಕಾಶ್ಮೀರದ ಅನಂತ್ ನಾಗ್ ಅಥವಾ ಬಾರಾಮುಲ್ಲಾಗೆ ವರ್ಗಾವಣೆ ಮಾಡಿಸುವ ಬೆದರಿಕೆ ಹಾಕಿದ್ದರು ಅಷ್ಟೇ ಅಲ್ಲದೇ ಎಸ್ ಪಿ ಹಾಗೂ ಅವರ ಸಹೋದ್ಯೋಗಿಗಳಿಗೆ ಟಿಎಂಸಿ ನಾಯಕ ಅಭಿಷೇಕ್ ಬ್ಯಾನರ್ಜಿಯಿಂದ ಬಂದಿರುವ ಕರೆ ವಿವರಗಳು ತಮ್ಮ ಬಳಿ ಇವೆ ಎಂದು ಹೇಳಿದ್ದರು.
ಈ ಸಂಬಂಧ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿ ಪ್ರಕರಣ ದಾಖಲಿಸಿದ್ದಾರೆ. ಸುವೇಂದು ಅಧಿಕಾರಿ ಹಾಗೂ ಇನ್ನೂ 14 ಮಂದಿ ಸಹಚರರ ವಿರುದ್ಧ, ಅನುಮತಿ ಪಡೆಯದೇ ಕಾರ್ಯಕ್ರಮ ನಡೆಸಿದ್ದಕ್ಕಾಗಿ ವಿಪತ್ತು ನಿರ್ವಹಣೆ ಕಾಯ್ದೆಯಡಿ ಹಾಗೂ ಸಾರ್ವಜನಿಕ ಸೇವೆಯಲ್ಲಿರುವವರ ಕರ್ತವ್ಯಕ್ಕೆ ಅಡ್ಡಿಯಾದ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ.
ರಾಜಕೀಯ ಪ್ರೇರಿತವಾಗಿ ನಕಲಿ ಪ್ರಕರಣಗಳನ್ನು ಪೊಲೀಸರು ದಾಖಲಿಸಿದ್ದೇ ಆದಲ್ಲಿ ತಾವು ಅಂತಹ ಆರೋಪಗಳಿಗೆ ಸಂಬಂಧಿಸಿದಂತೆ ಸಿಬಿಐ ತನಿಖೆಗೆ ಆಗ್ರಹಿಸಿ ಪಿಐಎಲ್ ಹಾಕುವುದಾಗಿ ಹೇಳಿದ್ದ ಸುವೇಂದು ಅಧಿಕಾರಿ, ಪೊಲೀಸರು ಕಾಶ್ಮೀರದ ಅನಂತ್ ನಾಗ್ ಅಥವಾ ಬಾರಾಮುಲ್ಲಾಗೆ ವರ್ಗಾವಣೆಗೊಳ್ಳುವಂತಹ ಯಾವುದೇ ಕೆಲಸವನ್ನೂ ಮಾಡದಂತೆ ಎಚ್ಚರಿಸಿದ್ದರು.
ಅಷ್ಟೇ ಅಲ್ಲದೇ ನಿಮ್ಮ ಪರ ರಾಜ್ಯ ಸರ್ಕಾರವಿದ್ದರೆ ನಮ್ಮ ಪರವಾಗಿ ಕೇಂದ್ರ ಸರ್ಕಾರವಿದೆ ಎಂದೂ ಸುವೇಂದು ಅಧಿಕಾರಿ ಪೊಲೀಸ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದರು.