ವಿರೋಧ ಪಕ್ಷ ನಾಯಕರ ತೀವ್ರ ಗದ್ದಲ, ಕೋಲಾಹಲ: ಸಂಸತ್ತಿನ ಉಭಯ ಸದನಗಳ ಕಲಾಪ ಅಪರಾಹ್ನ 2 ಗಂಟೆಗೆ ಮುಂದೂಡಿಕೆ

ಇಸ್ರೇಲ್ ಮೂಲದ ಪೆಗಾಸಸ್ ಸ್ಪೈವೇರ್ ವಿವಾದ ಹಾಗೂ ದೈನಿಕ್ ಭಾಸ್ಕರ್ ಮಾಧ್ಯಮ ಸಂಸ್ಥೆಯ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ಕುರಿತು ವಿರೋಧ ಪಕ್ಷಗಳು ತೀವ್ರ ಗದ್ದಲ, ಕೋಲಾಹಲ ಎಬ್ಬಿಸಿದ ಕಾರಣ ಲೋಕಸಭೆ ಹಾಗೂ ರಾಜ್ಯಸಭೆ ಉಭಯ ಸದನಗಳ ಕಲಾಪವನ್ನು ಅಪರಾಹ್ನ 2 ಗಂಟೆಯವರೆಗೆ ಮುಂದೂಡಲಾಗಿದೆ.
ಸಂಸತ್ತು
ಸಂಸತ್ತು

ನವದೆಹಲಿ: ಜಾಗತಿಕ ಮಟ್ಟದಲ್ಲಿ ವಿವಾದ ಹುಟ್ಟುಹಾಕಿರುವ ಇಸ್ರೇಲ್ ಮೂಲದ ಪೆಗಾಸಸ್ ಸ್ಪೈವೇರ್ ಹಾಗೂ ದೈನಿಕ್ ಭಾಸ್ಕರ್ ಮಾಧ್ಯಮ ಸಂಸ್ಥೆಯ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ಕುರಿತು ವಿರೋಧ ಪಕ್ಷಗಳು ತೀವ್ರ ಗದ್ದಲ, ಕೋಲಾಹಲ ಎಬ್ಬಿಸಿದ ಕಾರಣ ಲೋಕಸಭೆ ಹಾಗೂ ರಾಜ್ಯಸಭೆ ಉಭಯ ಸದನಗಳ ಕಲಾಪವನ್ನು ಅಪರಾಹ್ನ 2 ಗಂಟೆಯವರೆಗೆ ಮುಂದೂಡಲಾಗಿದೆ.

ಇಂದು ಬೆಳಗ್ಗೆ ರಾಜ್ಯಸಭೆಯಲ್ಲಿ ಕಲಾಪ ಆರಂಭವಾದ ಕೂಡಲೇ ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ದೈನಿಕ ಭಾಸ್ಕರ ಸಂಸ್ಥೆಯ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿಯನ್ನು ಪ್ರಸ್ತಾಪಿಸಿದರು. ಟಿಎಂಸಿ ನಾಯಕರು ಸೇರಿದಂತೆ ಇತರ ವಿರೋಧ ಪಕ್ಷಗಳ ನಾಯಕರು ಸದನದ ಬಾವಿಗಿಳಿದು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಇಸ್ರೇಲ್ ಮೂಲದ ಪೆಗಾಸಸ್ ಸ್ಪೈವೇರ್ ಸಂಸ್ಥೆಯನ್ನು ಕಣ್ಗಾವಲು ಆಗಿ ಮೋದಿ ಸರ್ಕಾರ ಬಳಸಿಕೊಂಡು ತಮ್ಮ ರಾಜಕೀಯ ಪ್ರತಿಸ್ಪರ್ಧಿಗಳು, ಪತ್ರಕರ್ತರು ಮತ್ತು ಟೀಕಾಕಾರವನ್ನು ಮಟ್ಟಹಾಕಲು ಹವಣಿಸುತ್ತಿದೆ ಎಂದು ಕಿಡಿಕಾರಿದರು.

ದಿಗ್ವಿಜಯ್ ಸಿಂಗ್ ಅವರ ಹೇಳಿಕೆಗಳನ್ನು ದಾಖಲು ಮಾಡಿಕೊಳ್ಳಲು ಸಾಧ್ಯವಿಲ್ಲ, ಭಿತ್ತಿಪತ್ರಗಳನ್ನು ತೋರಿಸಬೇಡಿ ಎಂದು ರಾಜ್ಯಸಭಾಧ್ಯಕ್ಷ ಎಂ ವೆಂಕಯ್ಯ ನಾಯ್ಡು ಹೇಳಿದರು. ಸದನದ ಸದಸ್ಯರಿಗೆ ಜನರ ಸಮಸ್ಯೆಗಳನ್ನು ಚರ್ಚಿಸಲು ಇಚ್ಛೆಯಿಲ್ಲ ಎಂದು ಕಾಣುತ್ತದೆ, ನಿಮಗೆ ವಿಷಯ ಪ್ರಸ್ತಾಪಿಸಲು ಅನುಮತಿ ನೀಡಿರಲಿಲ್ಲ, ದಾಖಲೆ ಮಾಡಿಟ್ಟುಕೊಳ್ಳುವುದಿಲ್ಲ ಎಂದು ವೆಂಕಯ್ಯ ನಾಯ್ಡು ದಿಗ್ವಿಜಯ್ ಸಿಂಗ್ ಅವರಿಗೆ ಹೇಳಿದರು.

ದಯಮಾಡಿ ನಿಮ್ಮ ಆಸನಗಳಿಗೆ ಹೋಗಿ ಕುಳಿತುಕೊಳ್ಳಿ, ಸಂಸತ್ತಿನ ಶಿಸ್ತು, ಸಂಪ್ರದಾಯಗಳನ್ನು ಪಾಲಿಸಿ, ನನಗೆ ಸೂಚನೆ ಕಳುಹಿಸಿ, ನಂತರ ನಾನು ವಿಷಯವನ್ನು ಪ್ರಸ್ತಾಪಿಸಬೇಕೆ, ಬೇಡವೆ ಎಂದು ಹೇಳುತ್ತೇನೆ ಎಂದು ಸಭಾಪತಿ ವೆಂಕಯ್ಯ ನಾಯ್ಡು ಅವರು ಹೇಳಿದರು.

ಸಭಾಪತಿಗಳ ಮಾತನ್ನು ಕೇಳದೆ ವಿರೋಧ ಪಕ್ಷದ ನಾಯಕರು ಗದ್ದಲ, ಕೋಲಾಹಲ ಮುಂದುವರಿಸಿದರು. ಹೀಗಾಗಿ ಅಪರಾಹ್ನ 2 ಗಂಟೆಗೆ ರಾಜ್ಯಸಭಾ ಕಲಾಪ ಮುಂದೂಡಲಾಯಿತು.

ಲೋಕಸಭಾ ಕಲಾಪ ಮುಂದಕ್ಕೆ: ಕೆಳಮನೆಯಲ್ಲಿ ಕೂಡ ಇಂದು ಬೆಳಗ್ಗೆಯಿಂದಲೇ ಗದ್ದಲ, ಕೋಲಾಹಲ ತೀವ್ರವಾದದ್ದರಿಂದ ಅಪರಾಹ್ನ 2 ಗಂಟೆಗೆ ಕಲಾಪ ಮುಂದೂಡಲಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com