ಮಹಾರಾಷ್ಟ್ರ: ಮಳೆ ಸಂಬಂಧಿತ ಘಟನೆಗಳಲ್ಲಿ 122 ಸಾವು, 1.35 ಲಕ್ಷ ಜನರ ಸ್ಥಳಾಂತರ

ಕಳೆದ ಮೂರು ದಿನಗಳಿಂದ ಮಹಾರಾಷ್ಟ್ರದ ಪುಣೆ ಮತ್ತು ಕೊಂಕಣ ವಲಯದಲ್ಲಿ ಎಡಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆ ಮತ್ತು ಕೆಲವು ಕಡೆಗಳಲ್ಲಿ ಉಂಟಾಗಿರುವ ಭೂಕುಸಿತದಿಂದ ರಾಯಗಢ ಜಿಲ್ಲೆಯೊಂದರಲ್ಲಿ 52 ಸೇರಿದಂತೆ ಒಟ್ಟಾರೇ 122 ಜನರು ಮೃತಪಟ್ಟಿದ್ದಾರೆ.
ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಎನ್ ಡಿಆರ್ ಎಫ್ ರಕ್ಷಣಾ ಕಾರ್ಯಾಚರಣೆಯ ಚಿತ್ರ
ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಎನ್ ಡಿಆರ್ ಎಫ್ ರಕ್ಷಣಾ ಕಾರ್ಯಾಚರಣೆಯ ಚಿತ್ರ

ಮುಂಬೈ: ಕಳೆದ ಮೂರು ದಿನಗಳಿಂದ ಮಹಾರಾಷ್ಟ್ರದ ಪುಣೆ ಮತ್ತು ಕೊಂಕಣ ವಲಯದಲ್ಲಿ ಎಡಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆ ಮತ್ತು ಕೆಲವು ಕಡೆಗಳಲ್ಲಿ ಉಂಟಾಗಿರುವ ಭೂಕುಸಿತದಿಂದ ರಾಯಗಢ ಜಿಲ್ಲೆಯೊಂದರಲ್ಲಿ 52 ಸೇರಿದಂತೆ ಒಟ್ಟಾರೇ 122 ಜನರು ಮೃತಪಟ್ಟಿದ್ದಾರೆ. 1,35,313 ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗಿದೆ ಎಂದು ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಿದೆ.

ಸಾಂಗ್ಲಿಯ ಕೃಷ್ಣ ನದಿ ಮತ್ತು ಕೊಲ್ಹಾಪುರದ ಪಂಚಗಂಗ ಪ್ರವಾಹದಲ್ಲಿದ್ದರೂ ಮಳೆ ಕಡಿಮೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೊಂಕಣದ ಚಿಪ್ಲುನ್, ಖೇಡ್ ಮತ್ತು ಮಹಾದ್‌ನಂತಹ ಪ್ರವಾಹ ಪೀಡಿತ ಪಟ್ಟಣಗಳಲ್ಲಿನ ಜನರು ಈ ಅನಾಹುತವನ್ನು ಎದುರಿಸಲು ಹೆಣಗಾಡುತ್ತಿರುವಾಗ, ನೀರು ಮತ್ತು ವಿದ್ಯುತ್ ಸರಬರಾಜನ್ನು ಪುನರ್ ಸ್ಥಾಪಿಸಲು ಮತ್ತು ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಆಹಾರ ಮತ್ತು ಔಷಧಿಗಳ ವ್ಯವಸ್ಥೆ ಆಡಳಿತದ ಮುಂದಿರುವ ಸವಾಲಾಗಿದೆ. ರಾಯಘಡದ ತಾಲಿಯೆ ಗ್ರಾಮದಲ್ಲಿ ಗುರುವಾರ ಸಂಭವಿಸಿದ ಭೂಕುಸಿತದಲ್ಲಿ 41 ಶವಗಳನ್ನು ವಶಪಡಿಸಿಕೊಳ್ಳಲಾಗಿದೆ.

ಅನೇಕ ಮಂದಿ ಈಗಲೂ ಕೂಡಾ ಕಣ್ಮರೆಯಾಗಿದ್ದಾರೆ ಎಂದು ಡಿಐಜಿ (ಕೊಂಕಣ) ಸಂಜಯ್ ಮೊಹಿಟ್ ತಿಳಿಸಿರುವುದಾಗಿ ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ. ಮುಂದಿನ 24 ಗಂಟೆಗಳಲ್ಲಿ ಪಶ್ಚಿಮ ಕರಾವಳಿಯಲ್ಲಿ ಮಳೆ ತೀವ್ರ ರೀತಿಯಲ್ಲಿ ಕಡಿಮೆಯಾಗುವ ಸಾಧ್ಯತೆಯಿರುವುದಾಗಿ ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಜುಲೈ 21 ಮತ್ತು 24 ರ ನಡುವೆ ರಾಯಗಢ ಜಿಲ್ಲೆಯಲ್ಲಿ 52, ರತ್ನಗಿರಿ (21) ಸಾತರಾ (13) ಥಾಣೆ (12) ಕೊಲ್ಹಾಪುರ (ಏಳು) ಮುಂಬೈ (ನಾಲ್ಕು) ಸಿಂಧೂ ದುರ್ಗ (2) ಪುಣೆ (1) ಸಾವಿನ ಪ್ರಕರಣಗಳು ಸಂಭವಿಸಿರುವುದಾಗಿ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಈ ಪ್ರದೇಶಗಳಲ್ಲಿ ಒಟ್ಟಾರೇ 99 ಮಂದಿ ಕಣ್ಮರೆಯಾಗಿದ್ದು, 53 ಜನರು ಮಳೆ ಸಂಬಂಧಿತ ಘಟನೆಗಳಲ್ಲಿ ಗಾಯಗೊಂಡಿದ್ದಾರೆ. 3,221 ಜಾನುವಾರುಗಳು ಕೊಚ್ಚಿಕೊಂಡು ಹೋಗಿವೆ. ರಕ್ಷಣಾ ಕಾರ್ಯಾಚರಣೆಗಾಗಿ 34 ತಂಡಗಳನ್ನು ಎನ್ ಡಿಆರ್ ಎಫ್ ನಿಯೋಜಿಸಿದೆ ಎಂದು ಅದರ ವಕ್ತಾರರು ತಿಳಿಸಿದ್ದಾರೆ. ಸ್ಥಳೀಯ ಆಡಳಿತದ ಜೊತೆಗೆ ಸೇನೆ ಕೂಡಾ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com