'ರಾಷ್ಟ್ರ ಮೊದಲು ಯಾವಾಗಲೂ ಮೊದಲು' ಎನ್ನುವ ಮಂತ್ರದೊಂದಿಗೆ ಮುನ್ನಡೆಯಬೇಕಿದೆ: ಪ್ರಧಾನಿ ಮೋದಿ

‘ರಾಷ್ಟ್ರ ಮೊದಲು, ಯಾವಾಗಲೂ ಮೊದಲು’ ಎನ್ನುವ ಮಂತ್ರದೊಂದಿಗೆ ದೇಶವು ಮುನ್ನಡೆಯಬೇಕು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾನುವಾರ ಹೇಳಿದ್ದಾರೆ. 
ಪ್ರಧಾನಿ ಮೋದಿ
ಪ್ರಧಾನಿ ಮೋದಿ

ನವದೆಹಲಿ: ‘ರಾಷ್ಟ್ರ ಮೊದಲು, ಯಾವಾಗಲೂ ಮೊದಲು’ ಎನ್ನುವ ಮಂತ್ರದೊಂದಿಗೆ ದೇಶವು ಮುನ್ನಡೆಯಬೇಕು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾನುವಾರ ಹೇಳಿದ್ದಾರೆ. 

ಮನ್ ಕಿ ಬಾತ್ ಕಾರ್ಯಕ್ರಮದಲ್ಲಿಂದು ಪ್ರಧಾನಿ ಮೋದಿಯವರು 75ನೇ ವರ್ಷದ ಸ್ವಾತಂತ್ರ್ಯೋತ್ಸವದ ಆಚರಣೆ ಕುರಿತಂತೆ ಮಾತನಾಡಿದರು. 

ಮಹಾತ್ಮ ಗಾಂಧೀಜಿ ಅವರು ‘ಭಾರತ ಚೋಡೊ ಆಂದೋಲನ’(ಭಾರತ ಬಿಟ್ಟು ತೊಲಗಿ) ಆರಂಭಿಸಿದ್ದರು. ಅದೇ ರೀತಿಯ ವಿಭಿನ್ನವಾದ ಚಳವಳಿ ಈಗಿನ ಸಂದರ್ಭದಲ್ಲಿ ಅಗತ್ಯವಿದೆ. ಪ್ರತಿಯೊಬ್ಬ ಭಾರತೀಯ ‘ಭಾರತ ಜೋಡೊ ಆಂದೋಲನ’ (ಭಾರತ ಜೋಡಿಸಿ ಆಂದೋಲನ) ಆರಂಭಿಸಬೇಕು ಎಂದು ಸಲಹೆ ನೀಡಿದ್ದಾರೆ.

ಸಂಪೂರ್ಣ ವೈವಿಧ್ಯತೆ ಹೊಂದಿರುವ ಭಾರತದಲ್ಲಿ ಈ ಆಂದೋಲನವು ದೇಶವನ್ನು ಒಗ್ಗೂಡಿಸಲು ಪೂರಕವಾಗುವಂತೆ ನಾವೆಲ್ಲರೂ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದ್ದಾರೆ.

ಮುಂದಿನ ಆಗಸ್ಟ್‌ 15ರಂದು ಭಾರತದಲ್ಲಿ 75ನೇ ಸ್ವಾತಂತ್ರ್ಯೋತ್ಸವದ ಆಚರಣೆ ನಡೆಯಲಿದೆ. ಈ ಅಮೃತ ಮಹೋತ್ಸವವನ್ನು ದೇಶದಾದ್ಯಂತ ಸಂಭ್ರಮದಿದಂದ ಆಚರಿಸಲಾಗುವುದು. ಅಮೃತ ಮಹೋತ್ಸವಕ್ಕೆ ಸಂಬಂಧಿಸಿದಂತೆ ಹಲವಾರು ಕಾರ್ಯಕ್ರಮಗಳು ನಡೆಯುತ್ತಿವೆ. ರಾಷ್ಟ್ರಗೀತೆಯನ್ನು ಗರಿಷ್ಠ ಸಂಖ್ಯೆಯಲ್ಲಿ ಭಾರತೀಯರು ಹಾಡುವಂತೆ ಸಂಸ್ಕೃತಿ ಸಚಿವಾಲಯ ಈಗಾಗಲೇ ಹಲವು ಕ್ರಮಗಳನ್ನು ಕೈಗೊಂಡಿದೆ. ಇದಕ್ಕಾಗಿಯೇ rashtragan.in ವೆಬ್‌ಸೈಟ್‌ ಆರಂಭಿಸಲಾಗಿದೆ. ಈ ವೆಬ್‌ಸೈಟ್‌ ನೆರವಿನಿಂದ ರಾಷ್ಟ್ರೀಯ ಗೀತೆಯನ್ನು ಹಾಡುವ ಮೂಲಕ ದಾಖಲಿಸಬಹುದು ಎಂದು ವಿವರಿಸಿದ್ದಾರೆ.

ಜುಲೈ 26ರಂದು ಕಾರ್ಗಿಲ್‌ ವಿಜಯ ದಿನ ಆಚರಿಸಲಾಗುತ್ತಿದೆ. 1999ರಲ್ಲಿ ಹುತಾತ್ಮರಾದ ಯೋಧರಿಗೆ ದೇಶದ ಜನತೆ ಶ್ರದ್ಧಾಂಜಲಿ ಸಲ್ಲಿಸಬೇಕು ಎಂದು ಇದೇ ಸಂದರ್ಭದಲ್ಲಿ ಕೋರಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com