
ಡೆಕ್ಕನ್ ಪ್ರದೇಶ
ಶ್ರೀನಗರ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಸಂಭವಿಸಿದ ಮೇಘಸ್ಫೋಟದಲ್ಲಿ ಮೃತಪಟ್ಟವರ ಸಂಖ್ಯೆ ಏಳಕ್ಕೆ ಏರಿಕೆಯಾಗಿದ್ದು, ಇದುವರೆಗೆ 17 ಮಂದಿಯನ್ನು ರಕ್ಷಿಸಲಾಗಿದೆ.
ಭಾರಿ ಮಳೆಯಿಂದಾಗಿ ಉಂಟಾದ ಪ್ರವಾಹದಲ್ಲಿ ಕನಿಷ್ಠ 7 ಮಂದಿ ಸಾವನ್ನಪ್ಪಿದ್ದು, 30 ರಿಂದ 40ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಕಿಶ್ತ್ ವಾರ್ ಜಿಲ್ಲೆಯ ಡೆಕ್ಕನ್ ಟೆಹ್ಸೀಲ್ ಪ್ರಾಂತ್ಯದ ಹೊಂಝಾರ್ ಎಂಬ ಕುಗ್ರಾಮದಲ್ಲಿ ಮೇಘಸ್ಪೋಟ ಸಂಭವಿಸಿದ್ದು, ಪ್ರವಾಹದಲ್ಲಿ ಸಾಕಷ್ಟು ಮನೆಗಳು ಕೊಚ್ಚಿಹೋಗಿವೆ ಎಂದು ತಿಳಿದುಬಂದಿದೆ.
ವಿಚಾರ ತಿಳಿಯುತ್ತಿದ್ದಂತೆಯೇ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ(NDRF)ದ ಸಿಬ್ಬಂದಿಗಳು ಗ್ರಾಮಕ್ಕೆ ದೌಡಾಯಿಸಿದ್ದು, ರಕ್ಷಣಾ ಕಾರ್ಯಾಚರಣೆ ಕೈಗೊಂಡಿದ್ದಾರೆ ಮತ್ತು ಇದುವರೆಗೆ 17 ಮಂದಿಯನ್ನು ರಕ್ಷಿಸಿದ್ದಾರೆ.
ನಾಪತ್ತೆಯಾಗಿರುವವರ ರಕ್ಷಣೆಗೆ ಕ್ರಮ ಕೈಗೊಳ್ಳಲಾಗಿದ್ದು, ಸಮುತ್ತಮುತ್ತಲಿನ ಗ್ರಾಮಗಳಲ್ಲಿ ಮತ್ತು ಇಳಿಜಾರು ಪ್ರದೇಶಗಳಲ್ಲಿ ಎನ್ ಡಿಆರ್ ಎಫ್ ಸಿಬ್ಬಂದಿಗಳು ಶೋಧ ಕಾರ್ಯಾಚರಣೆ ಮುಂದುವರೆಸಿದ್ದಾರೆ.
ಕಳೆದೊಂದು ವಾರದಿಂದ ಜಮ್ಮುವಿನ ಬಹುತೇಕ ಭಾಗಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ಮುಂದಿನ ಒಂದು ವಾರಗಳ ಇದೇ ಪರಿಸ್ಥಿತಿ
ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಪ್ರಮುಖವಾಗಿ ನದಿ ಪಾತ್ರದ ಗ್ರಾಮಗಳು ಮತ್ತು ಪ್ರದೇಶಗಳಲ್ಲಿ ವಾಸಿಸುತ್ತಿರುವ ಜನರು ಅಪಾಯದಲ್ಲಿದ್ದು ಅವರನ್ನು ತುರ್ತಾಗಿ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಇನ್ನು ಜಮ್ಮು ಮತ್ತು ಕಾಶ್ಮೀರದ ಉಸ್ತುವಾರಿ ಮತ್ತು ಕೇಂದ್ರ ಸಚಿವ ಡಾ.ಜಿತೇಂದ್ರ ಸಿಂಗ್ ಅವರು ಕಣಿವೆ ರಾಜ್ಯಕ್ಕೆ ಅಗತ್ಯವಾದ ಎಲ್ಲ ನೆರವು ನೀಡಲು ಕೇಂದ್ರ ಸರ್ಕಾರ ಸಿದ್ಧವಿದೆ ಎಂದು ಹೇಳಿದ್ದಾರೆ. ಅಲ್ಲದೆ ಅಗತ್ಯಬಿದ್ದರೆ ಸೇನಾ ಹೆಲಿಕಾಪ್ಟರ್ ಗಳನ್ನೂ ಕೂಡ ರ್ಯಾಚರಣೆಗೆ ಇಳಿಸಲಾಗುತ್ತದೆ. ಈ ಕುರಿತಂತೆ ಡಿಎಂ ಅಶೋಕ್ ಶರ್ಮಾ ಅವರೊಂದಿಗೆ ತಾವು ಮಾತನಾಡಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದೇನೆ ಎಂದು ಹೇಳಿದ್ದಾರೆ.