ಕೇರಳ ವಿಧಾನಸಭೆಯಲ್ಲಿ ಗದ್ದಲ: ಎಲ್‌ಡಿಎಫ್ ಶಾಸಕರ ವಿರುದ್ಧದ ಪ್ರಕರಣ ಹಿಂಪಡೆಯುವ ರಾಜ್ಯದ ಮನವಿ ತಿರಸ್ಕರಿಸಿದ ಸುಪ್ರೀಂ
2015ರಲ್ಲಿ ಕೇರಳ ವಿಧಾನಸಭೆಯಲ್ಲಿ ನಡೆದ ಗದ್ದಲಕ್ಕೆ ಸಂಬಂಧಿಸಿದಂತೆ ಕೆಲವು ಎಲ್‌ಡಿಎಫ್ ಶಾಸಕರ ವಿರುದ್ಧದ ಕ್ರಿಮಿನಲ್ ಮೊಕದ್ದಮೆಯನ್ನು ಹಿಂಪಡೆಯುವ ಸಂಬಂಧ ಕೇರಳ ಸರ್ಕಾರ ಸಲ್ಲಿಸಿದ್ದ ಮನವಿಯನ್ನು....
Published: 28th July 2021 02:22 PM | Last Updated: 28th July 2021 02:22 PM | A+A A-

ಕೇರಳ ವಿಧಾನಸಭೆ
ನವದೆಹಲಿ: 2015ರಲ್ಲಿ ಕೇರಳ ವಿಧಾನಸಭೆಯಲ್ಲಿ ನಡೆದ ಗದ್ದಲಕ್ಕೆ ಸಂಬಂಧಿಸಿದಂತೆ ಕೆಲವು ಎಲ್‌ಡಿಎಫ್ ಶಾಸಕರ ವಿರುದ್ಧದ ಕ್ರಿಮಿನಲ್ ಮೊಕದ್ದಮೆಯನ್ನು ಹಿಂಪಡೆಯುವ ಸಂಬಂಧ ಕೇರಳ ಸರ್ಕಾರ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ಬುಧವಾರ ವಜಾಗೊಳಿಸಿದೆ.
"ನ್ಯಾಯಸಮ್ಮತವಲ್ಲದ ಕಾರಣಗಳಿಗಾಗಿ" ಕಾನೂನು ಕ್ರಮ ಜರುಗಿಸಲು ಅವಕಾಶ ನೀಡುವ ವಿಚಾರದಲ್ಲಿ ಹಸ್ತಕ್ಷೇಪ ಮಾಡುವುದು ಸರಿಯಲ್ಲ.
ಸಾರ್ವಜನಿಕ ಆಸ್ತಿಯನ್ನು ನಾಶಮಾಡುವ ಕೃತ್ಯಗಳನ್ನು ಶಾಸಕರ ವಾಕ್ ಸ್ವಾತಂತ್ರ್ಯದೊಂದಿಗೆ ಅಥವಾ ಪ್ರತಿಪಕ್ಷ ಸದಸ್ಯರಿಗೆ ಲಭ್ಯವಿರುವ ಪ್ರತಿಭಟನೆಯ ಸ್ವರೂಪಗಳೊಂದಿಗೆ ಸಮೀಕರಿಸಲಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
"ಸವಲತ್ತುಗಳು ಮತ್ತು ವಿನಾಯಿತಿಗಳು ಈ ನೆಲದ ಸಾಮಾನ್ಯ ಕಾನೂನಿನಿಂದ ವಿನಾಯಿತಿ ಪಡೆಯುವ ಹೆಬ್ಬಾಗಿಲು ಅಲ್ಲ" ಎಂದು ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್ ಮತ್ತು ಎಂ ಆರ್ ಶಾ ಅವರ ನ್ಯಾಯಪೀಠ ಹೇಳಿದೆ.
ಈ ಪ್ರಕರಣದಲ್ಲಿ ಕೆಲವು ಎಲ್‌ಡಿಎಫ್ ಶಾಸಕರ ವಿರುದ್ಧ ದಾಖಲಾದ ಕ್ರಿಮಿನಲ್ ಮೊಕದ್ದಮೆ ಹಿಂಪಡೆಯಬೇಕೆಂದು ಕೋರಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಮನವಿಯನ್ನು ಕೇರಳ ಹೈಕೋರ್ಟ್ ಮಾರ್ಚ್ 12 ರಂದು ವಜಾಗೊಳಿಸಿತ್ತು. ರಾಜ್ಯ ಸರ್ಕಾರ ಹೈಕೋರ್ಟ್ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್ ಮೇಲ್ಮನವಿ ಸಲ್ಲಿಸಿತ್ತು. ಈಗ ಸುಪ್ರೀಂ ಕೋರ್ಟ್ ಸಹ ಮೇಲ್ಮನವಿಯನ್ನು ವಜಾಗೊಳಿಸಿದೆ.
ಮಾರ್ಚ್ 13, 2015 ರಂದು ರಾಜ್ಯ ವಿಧಾನಸಭೆಯು ತೀವ್ರ ಕೋಲಾಹಲಕ್ಕೆ ಸಾಕ್ಷಿಯಾಗಿತ್ತು. ಆಗ ವಿರೋಧ ಪಕ್ಷದಲ್ಲಿದ್ದ ಎಲ್‌ಡಿಎಫ್ ಸದಸ್ಯರು, ಬಾರ್ ಲಂಚ ಹಗರಣದಲ್ಲಿ ಆರೋಪ ಎದುರಿಸುತ್ತಿದ್ದ ಅಂದಿನ ಹಣಕಾಸು ಸಚಿವ ಕೆ ಎಂ ಮಣಿಯ ಅವರು ಬಜೆಟ್ ಮಂಡಿಸದಂತೆ ತಡೆದು ಕೋಲಾಹಲ ಸೃಷ್ಟಿಸಿದ್ದರು.