ಪೆಗಾಸಸ್ ವಿವಾದ: ರಾಹುಲ್ ಗಾಂಧಿ 'ಅಪ್ರಬುದ್ಧ'ರಂತೆ ಮಾತನಾಡುತ್ತಿದ್ದಾರೆ: ಕೇಂದ್ರ ಸರ್ಕಾರ

ಪೆಗಾಸಸ್ ವಿವಾದ ಸಂಬಂಧ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಎನ್'ಡಿಎ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಕೇಂದ್ರ ಸರ್ಕಾರ ಗುರುವಾರ ತಿರುಗೇಟು ನೀಡಿದೆ. 
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ

ನವದೆಹಲಿ; ಪೆಗಾಸಸ್ ವಿವಾದ ಸಂಬಂಧ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಎನ್'ಡಿಎ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಕೇಂದ್ರ ಸರ್ಕಾರ ಗುರುವಾರ ತಿರುಗೇಟು ನೀಡಿದೆ. 

ರಾಹುಲ್ ಗಾಂಧಿ ವಾಗ್ದಾಳಿ ಹಿನ್ನೆಲೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿಯವರು, ವಿಷಯವಲ್ಲದ ವಿಚಾರವನ್ನು ಅನಗತ್ಯವಾಗಿ ಸಮಸ್ಯೆಯಾಗುವಂತೆ ಮಾಡಲಾಗುತ್ತಿದೆ. ವಿಶ್ವದ ಸಾವಿರಾರು ಜನರನ್ನು ಬೇಹುಗಾರಿಕೆ ಮಾಡಲು ಸಾಧ್ಯವೇ? ರಾಹುಲ್ ಗಾಂಧಿ ಏನು ಹೇಳುತ್ತಿದ್ದಾರೆಂಬುದು ಅವರಿಗೆ ಅರ್ಥವಾಗುತ್ತಿಲ್ಲ. ಅದೇ ಅವರ ಮೂಲ ಸಮಸ್ಯೆ. ರಾಹುಲ್ ಗಾಂಧಿ ಅಪ್ರಬುಧ್ಧರಂತೆ ಮಾತನಾಡುತ್ತಾರೆಂದು ಕಿಡಿಕಾರಿದ್ದಾರೆ. 

ಪೆಗಾಸಸ್ ವಿವಾದ ಹಿಡಿದು ಸಂಸತ್ತಿನ ಉಭಯ ಸದನಗಳಲ್ಲಿ ತೀವ್ರ ಗದ್ದಲ ಸೃಷ್ಟಿಸುತ್ತಿರುವ ಹಿನ್ನೆಲೆಯಲ್ಲಿ ಮಾತನಾಡಿದ ಅವರು, ಸರ್ಕಾರ ಹಾಗೂ ಸ್ಪೀಕರ್ ವೈಯಕ್ತಿಕವಾಗಿಯೇ ಮನವಿ ಮಾಡಿಕೊಂಡರೂ ಕೇಳುತ್ತಿಲ್ಲ. ಮನವಿಗೆ ಸ್ಪಂದನೆ ನೀಡಿ, ಕಲಾಪ ಸುಗಮವಾಗಿ ಸಾಗಲು ಅವಕಾಶ ಮಾಡಿಕೊಡುತ್ತಿಲ್ಲ. ಸದನದ ಕಲಾಪ ನಡೆಯಲು ಬಿಡುವುದಿಲ್ಲ ಎಂದು ಹೇಳುವುದು ಸರಿಯಲ್ಲ ಎಂದು ಹೇಳಿದ್ದಾರೆ. 

ದೇಶದಲ್ಲಿ ಎದುರಾಗಿರುವ ಕೋವಿಡ್ ಸಾಂಕ್ರಾಮಿಕ ರೋಗ ಕುರಿತು ರಾಜ್ಯಸಭೆಯಲ್ಲಿ ಚರ್ಚೆಗಳು ನಡೆದಿವೆ.ಆದರೆ, ಲೋಕಸಭೆಯಲ್ಲಿ ಈ ಕುರಿತು ಚರ್ಚೆಗೆ ಅವಕಾಶ ನೀಡಲಾಗುತ್ತಿಲ್ಲ. ಇದು ನಿಜಕ್ಕೂ ದುರಾದೃಷ್ಟಕರ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. 

ಈ ಹಿಂದೆ ಹೇಳಿಕೆ ನೀಡಿದ್ದ ರಾಹುಲ್ ಗಾಂಧಿಯವರು, ರಾಷ್ಟ್ರೀಯ ಮಹತ್ವದ ವಿಷಯಗಳ ಬಗ್ಗೆ ಸಂಸತ್ತಿನಲ್ಲಿ ಚರ್ಚಿಸಲು ವಿರೋಧ ಪಕ್ಷಗಳಿಗೆ ಸರ್ಕಾರ ಅವಕಾಶವನ್ನೇ ನೀಡುತ್ತಿಲ್ಲ ಎಂದು ಆರೋಪಿಸಿದ್ದರು. 

ಸಂಸತ್ತಿನ ಅತ್ಯಮೂಲ್ಯ ಸಮಯವನ್ನು ಸರ್ಕಾರ ವ್ಯರ್ಥ ಮಾಡಬಾರದು. ಹಣದುಬ್ಬರ, ರೈತರ ಸಮಸ್ಯೆಗಳು ಮತ್ತು ಪೆಗಾಸಸ್‌ ವಿಷಯಗಳನ್ನು ಪ್ರಸ್ತಾಪಿಸಲು ಅವಕಾಶ ಕಲ್ಪಿಸಬೇಕು. ಸಂಸದರು ಜನರ ಧ್ವನಿಯಾಗಬೇಕು. ರಾಷ್ಟ್ರೀಯ ಮಹತ್ವದ ವಿಷಯಗಳ ಬಗ್ಗೆ ಸಂಸದರು ಚರ್ಚಿಸುವುದು ಅಗತ್ಯವಿದೆ. ಆದರೆ, ಸರ್ಕಾರಕ್ಕೆ ಇಂತಹ ಯಾವುದೇ ಚರ್ಚೆ ಬೇಡವಾಗಿದೆ ಎಂದು ಟೀಕಿಸಿದ್ದರು.

ಪೆಗಾಸಸ್‌ ಗೂಢಚರ್ಯೆ ವಿಷಯದ ಬಗ್ಗೆ ಸಂಸತ್‌ ಅಧಿವೇಶನದಲ್ಲಿ ಗದ್ದಲ ಮುಂದುವರಿದಿದೆ. ಗುರುವಾರವೂ ರಾಜ್ಯಸಭೆ, ಲೋಕಸಭೆ ಕಲಾಪವನ್ನು ಎರಡು ಬಾರಿ ಮುಂದೂಡಲಾಯಿತು. ಸುಪ್ರೀಂ ಕೋರ್ಟ್‌ ನಿಗಾದಲ್ಲಿ ಗೂಢಚರ್ಯೆ ಬಗ್ಗೆ ತನಿಖೆ ನಡೆಸಬೇಕು ಎಂದು ವಿರೋಧ ಪಕ್ಷಗಳು ಆಗ್ರಹಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com