ಜಿಎಸ್ ಟಿ ಪರಿಹಾರ ಬಿಡುಗಡೆಗೆ ಹಣಕಾಸು ಸಚಿವೆ ಒಪ್ಪಿಗೆ, ಹೆಚ್ಚಿನ ಕೊರೋನಾ ಲಸಿಕೆ ಪೂರೈಕೆಗೆ ಕೇಂದ್ರ ಅಸ್ತು: ಸಿಎಂ ಬೊಮ್ಮಾಯಿ 

ಸಚಿವ ಸಂಪುಟ ರಚನೆ ಬಗ್ಗೆ ರಾಷ್ಟ್ರಾಧ್ಯಕ್ಷ ಜೆ ಪಿ ನಡ್ಡಾ ಅವರ ಜೊತೆಗೆ ಮಾತನಾಡುತ್ತೇನೆ, ಅವರು ಒಂದು ಸಭೆಯಲ್ಲಿದ್ದಾರೆ, ಅದಾದ ಬಳಿಕ ಹೋಗಿ ಅವರನ್ನು ಭೇಟಿ ಮಾಡಿ ಸಂಪುಟ ರಚನೆ ಬಗ್ಗೆ ಅನುಮತಿ ಕೇಳುವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿದ ಸಿಎಂ ಬೊಮ್ಮಾಯಿ
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿದ ಸಿಎಂ ಬೊಮ್ಮಾಯಿ

ನವದೆಹಲಿ: ಸಚಿವ ಸಂಪುಟ ರಚನೆ ಬಗ್ಗೆ ರಾಷ್ಟ್ರಾಧ್ಯಕ್ಷ ಜೆ ಪಿ ನಡ್ಡಾ ಅವರ ಜೊತೆಗೆ ಮಾತನಾಡುತ್ತೇನೆ, ಅವರು ಒಂದು ಸಭೆಯಲ್ಲಿದ್ದಾರೆ, ಅದಾದ ಬಳಿಕ ಹೋಗಿ ಅವರನ್ನು ಭೇಟಿ ಮಾಡಿ ಸಂಪುಟ ರಚನೆ ಬಗ್ಗೆ ಅನುಮತಿ ಕೇಳುವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ದೆಹಲಿ ಪ್ರವಾಸದಲ್ಲಿರುವ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಸಂಪುಟ ರಚನೆಗೆ ಹೈಕಮಾಂಡ್ ಗ್ರೀನ್ ಸಿಗ್ನಲ್ ಗೆ ಕಾಯುತ್ತಿದ್ದೇನೆ ಎಂದಿದ್ದಾರೆ. ಜೆ ಪಿ ನಡ್ಡಾ ಅವರ ಸಭೆ ಮುಗಿದ ಬಳಿಕ ಚರ್ಚೆ ನಡೆಸುತ್ತೇನೆ ಎಂದಿದ್ದಾರೆ.

ಕೊರೋನಾ ಲಸಿಕೆ ಬಗ್ಗೆ ಕೇಂದ್ರ ಆರೋಗ್ಯ ಸಚಿವರ ಜೊತೆ ಚರ್ಚಿಸಿದ್ದೇನೆ, ಮುಂದಿನ ತಿಂಗಳಿನಿಂದ ದಿನಕ್ಕೆ 1.5 ಲಕ್ಷ ಕೋವಿಡ್ ಲಸಿಕೆ ರಾಜ್ಯಕ್ಕೆ ಪೂರೈಕೆಯಾಗಲಿದೆ ಎಂದರು. ಪ್ರಸ್ತುತ ಕೇಂದ್ರ ಸರ್ಕಾರದಿಂದ ಪ್ರತಿ ತಿಂಗಳು 63ರಿಂದ 64 ಲಕ್ಷಕ್ಕೆ ಲಸಿಕೆ ಏರಿಕೆಯಾಗುತ್ತಿದೆ. ಅದನ್ನು ದಿನಕ್ಕೆ ಒಂದೂವರೆ ಲಕ್ಷಕ್ಕೆ ಹೆಚ್ಚಿಸಬೇಕೆಂದು ಬೇಡಿಕೆಯಿಟ್ಟಿದ್ದೇನೆ, ಇದರಿಂದ ಪ್ರತಿದಿನ ಸುಮಾರು 5 ಲಕ್ಷ ಮಂದಿಗೆ ಲಸಿಕೆ ನೀಡಬಹುದು ಎಂದರು.

ಯಾವುದೇ ರೀತಿಯಲ್ಲಿಯೂ ರಾಜ್ಯದಲ್ಲಿ ಯೂರಿಯಾ ಕೊರತೆಯಾಗದಂತೆ ನೋಡಿಕೊಳ್ಳುವಂತೆ ಸಹ ಕೇಂದ್ರ ರಸಗೊಬ್ಬರ ಖಾತೆ ಸಚಿವರೂ ಕೂಡ ಆಗಿರುವ ಆರೋಗ್ಯ ಸಚಿವರು ಹೇಳಿದ್ದಾರೆ. ಕೋವಿಡ್-3ನೇ ಅಲೆ ಬರುವ ಸಂದರ್ಭದಲ್ಲಿ ವೈದ್ಯಕೀಯ ಮೂಲಭೂತ ಸೌಕರ್ಯಗಳಿಗೆ ಕೊರತೆಯಾಗದಂತೆ 23 ಸಾವಿರ ಕೋಟಿ ರೂಪಾಯಿಗಳನ್ನು ದೇಶ ಮಟ್ಟದಲ್ಲಿ ಕೇಂದ್ರ ಸರ್ಕಾರ ನೀಡುತ್ತಿದ್ದು, ಅದರಲ್ಲಿ 800 ಕೋಟಿ ರೂಪಾಯಿ ಕರ್ನಾಟಕಕ್ಕೆ ಬಿಡುಗಡೆ ಮಾಡುತ್ತಿದ್ದು, ಅದರಲ್ಲಿ ಶೇಕಡಾ 15ರಷ್ಟನ್ನು ಈಗಾಗಲೇ ನೀಡಿದ್ದೇವೆ, ಇನ್ನುಳಿದ ಭಾಗವನ್ನು ಆರೋಗ್ಯ ಮೂಲಸೌಕರ್ಯಕ್ಕೆ ಬಿಡುಗಡೆ ಮಾಡುವುದಾಗಿ ಕೇಂದ್ರ ಆರೋಗ್ಯ ಸಚಿವರು ಭರವಸೆ ನೀಡಿದ್ದಾರೆ ಎಂದರು.

ಜಿಎಸ್ ಟಿ ಪರಿಹಾರಕ್ಕೆ ಮನವಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿರುವ ವಿವರ ನೀಡಿದ ಸಿಎಂ ಬೊಮ್ಮಾಯಿ, ಕಳೆದ ವರ್ಷದ ಜಿಎಸ್ ಟಿ ಪರಿಹಾರ ಮೊತ್ತವಾದ 11 ಸಾವಿರದ 400 ಕೋಟಿ ರೂಪಾಯಿಯನ್ನು ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದೇನೆ. ಅದಕ್ಕೆ ಕಂತುಗಳ ರೂಪದಲ್ಲಿ ಮತ್ತು ಈ ವರ್ಷದ ಜಿಎಸ್ ಟಿ ಪರಿಹಾರ ಹಣವನ್ನು ಪ್ರತಿ ತಿಂಗಳು ಮತ್ತು 18 ಸಾವಿರ ಕೋಟಿ ರೂಪಾಯಿಗಳ ಸಾಲ ಕೂಡ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದ್ದಾರೆ, ನಬಾರ್ಡ್ ಮೂಲಕ ವಿಶೇಷ ಅನುದಾನ ರಚಿಸುವುದಾಗಿ ಹೇಳಿದ್ದಾರೆ ಎಂದರು.

ಮೇಕೆದಾಟು ನಿರ್ಮಾಣವನ್ನು ವಿರೋಧಿಸಿ ತಮಿಳು ನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈಯವರು ಉಪವಾಸ ಸತ್ಯಾಗ್ರಹ ನಡೆಸಲು ತೀರ್ಮಾನ ಮಾಡಿರುವ ಬಗ್ಗೆ ಕೇಳಿದಾಗ, ಅವರು ಅವರ ಕೆಲಸ ಮಾಡುತ್ತಾರೆ, ಅದಕ್ಕೂ ನಮಗೂ ಸಂಬಂಧವಿಲ್ಲ, ಮೇಕೆದಾಟು ನಿರ್ಮಾಣದಲ್ಲಿ ನಮ್ಮ ಹಕ್ಕಿದೆ. ನೀರಿನ ಬಳಕೆಗೆ ನಮಗೆ ಹಕ್ಕಿದೆ, ಹಾಗಾಗಿ ಮೇಕೆದಾಟು ಯೋಜನೆಯನ್ನು ಮಾಡಿಯೇ ಸಿದ್ದ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com