2021ನೇ ಸಾಲಿನ ಸಿಬಿಎಸ್ಇ 12ನೇ ತರಗತಿ ಪರೀಕ್ಷೆ ರದ್ದು; ವಿದ್ಯಾರ್ಥಿಗಳ ಸುರಕ್ಷತೆ ಮುಖ್ಯ: ಪ್ರಧಾನಿ ಮೋದಿ

ಮಹಾಮಾರಿ ಕೊರೋನಾ ಎರಡನೇ ಅಲೆ ದೇಶದಲ್ಲಿ ಆತಂಕ ಸೃಷ್ಟಿಸುತ್ತಿದ್ದು ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ 2021ನೇ ಸಾಲಿನ ಸಿಬಿಎಸ್ಇ 12ನೇ ತರಗತಿ ಪರೀಕ್ಷೆಗಳನ್ನು ರದ್ದು ಮಾಡಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿದ್ದಾರೆ. 
ವಿದ್ಯಾರ್ಥಿಗಳು
ವಿದ್ಯಾರ್ಥಿಗಳು

ನವದೆಹಲಿ: ಮಹಾಮಾರಿ ಕೊರೋನಾ ಎರಡನೇ ಅಲೆ ದೇಶದಲ್ಲಿ ಆತಂಕ ಸೃಷ್ಟಿಸುತ್ತಿದ್ದು ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ 2021ನೇ ಸಾಲಿನ ಸಿಬಿಎಸ್ಇ 12ನೇ ತರಗತಿ ಪರೀಕ್ಷೆಗಳನ್ನು ರದ್ದು ಮಾಡಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿದ್ದಾರೆ. 

ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಇಂದು ಸಂಜೆ 12ನೇ ತರಗತಿ ಪರೀಕ್ಷೆ ಕುರಿತಂತೆ ನಿರ್ಣಾಯಕ ಸಭೆ ಬಳಿಕ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. 

ಕೋವಿಡ್ ಕಾರಣದಿಂದ ಅನಿಶ್ಚಿತ ಪರಿಸ್ಥಿತಿ ಹಿನ್ನೆಲೆಯಲ್ಲಿ ಮತ್ತು ವಿವಿಧ ಭಾಗೀದಾರರ ಅಭಿಪ್ರಾಯಗಳನ್ನು ಪರಿಗಣಿಸಿ ಸಿಬಿಎಸ್ಇ 12ನೇ ತರಗತಿ ಪರೀಕ್ಷೆಗಳನ್ನು ಈ ವರ್ಷ ನಡೆಸದಿರಲು ನಿರ್ಧರಿಸಲಾಗಿದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಪ್ರಧಾನಮಂತ್ರಿ ಕಾರ್ಯಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

ದೇಶದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿದ್ದು, ಕೆಲ ರಾಜ್ಯಗಳಲ್ಲಿ ಸೂಕ್ತ ಕ್ರಮಗಳೊಂದಿಗೆ ಸಾಂಕ್ರಾಮಿಕವನ್ನು ನಿರ್ವಹಿಸಲಾಗುತ್ತಿದೆ. ಕೆಲ ರಾಜ್ಯಗಳು ಲಾಕ್ ಡೌನ್ ಅನ್ನು ಇನ್ನೂ ಮುಂದುವರೆಸುತ್ತಿವೆ. ಪೋಷಕರು ಮತ್ತು ಶಿಕ್ಷಕರು ಸ್ವಾಭಾವಿಕವಾಗಿ ಸದ್ಯದ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳ ಆರೋಗ್ಯದ ಬಗ್ಗೆ ಆತಂಕಗೊಂಡಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳನ್ನು ಬಲವಂತವಾಗಿ ಪರೀಕ್ಷೆಗೆ ಕಳುಹಿಸುವುದು ಸೂಕ್ತವಲ್ಲ ಎಂದು ಪ್ರಧಾನಿ ಹೇಳಿರುವುದಾಗಿ ಪ್ರಕಟಣೆ ತಿಳಿಸಿದೆ. 

ಕಳೆದ ವರ್ಷದಂತೆ, ಪರೀಕ್ಷೆಗಳನ್ನು ತೆಗೆದುಕೊಳ್ಳಲು  ವಿದ್ಯಾರ್ಥಿಗಳು ಇಚ್ಛಿಸಿದರೆ, ಪರಿಸ್ಥಿತಿ ನಿಯಂತ್ರಣಕ್ಕೆ ಬಂದ ನಂತರ ಸಿಬಿಎಸ್ಇ ಇಂತಹ ಆಯ್ಕೆಯನ್ನು ಪರಿಗಣಿಸಲು ಸಹ ಸಭೆಯಲ್ಲಿ ನಿರ್ಧರಿಸಲಾಗಿದೆ. ಇದಕ್ಕೂ ಮುನ್ನ ಸರ್ಕಾರ 10ನೇ ತರಗತಿ ಪರೀಕ್ಷೆಗಳನ್ನು ರದ್ದುಪಡಿಸಿತ್ತು.

"ಭಾರತ ಸರ್ಕಾರವು ಸಿಬಿಎಸ್ಇ 12ನೇ ತರಗತಿಯ ಬೋರ್ಡ್ ಪರೀಕ್ಷೆಗಳನ್ನು ರದ್ದುಗೊಳಿಸಲು ನಿರ್ಧರಿಸಿದೆ. ವ್ಯಾಪಕ ಸಮಾಲೋಚನೆಯ ನಂತರ, ನಾವು ವಿದ್ಯಾರ್ಥಿ-ಸ್ನೇಹಿಯಾಗಿರುವ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ. ಅದು ವಿದ್ಯಾರ್ಥಿಗಳ ಆರೋಗ್ಯ ಮತ್ತು ನಮ್ಮ ಯುವ ಭವಿಷ್ಯದ ರಕ್ಷಣೆ ದೃಷ್ಟಿಯಿಂದಾಗಿ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com