ಲಕ್ಷದ್ವೀಪ ಜನರ ಪ್ರತಿಭಟನೆ ಬೆಂಬಲಿಸಿ ಕೇರಳ ವಿಧಾನಸಭೆ ನಿರ್ಣಯ ಅಂಗೀಕಾರ
ಲಕ್ಷ ದ್ವೀಪ ಆಡಳಿತಾಧಿಕಾರಿಯ ಇತ್ತೀಚಿನ ಕ್ರಮಗಳನ್ನು ವಿರೋಧಿಸಿ ಪ್ರತಿಭಟಿನೆ ನಡೆಸುತ್ತಿರುವ ದ್ವೀಪದ ಜನರಿಗೆ ಬೆಂಬಲ ವ್ಯಕ್ತಪಡಿಸುವ ನಿರ್ಣಯವೊಂದನ್ನು ಕೇರಳ ವಿಧಾನಸಭೆ ಸೋಮವಾರ ಸರ್ವಾನುಮತದಿಂದ ಅಂಗೀಕರಿಸಿದೆ.
Published: 01st June 2021 08:18 AM | Last Updated: 01st June 2021 08:18 AM | A+A A-

ಕೇರಳ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್
ತಿರುವನಂತಪುರಂ: ಲಕ್ಷ ದ್ವೀಪ ಆಡಳಿತಾಧಿಕಾರಿಯ ಇತ್ತೀಚಿನ ಕ್ರಮಗಳನ್ನು ವಿರೋಧಿಸಿ ಪ್ರತಿಭಟಿನೆ ನಡೆಸುತ್ತಿರುವ ದ್ವೀಪದ ಜನರಿಗೆ ಬೆಂಬಲ ವ್ಯಕ್ತಪಡಿಸುವ ನಿರ್ಣಯವೊಂದನ್ನು ಕೇರಳ ವಿಧಾನಸಭೆ ಸೋಮವಾರ ಸರ್ವಾನುಮತದಿಂದ ಅಂಗೀಕರಿಸಿದೆ.
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಈ ಸಂಬಂಧ ವಿಧಾನಸಭೆಯಲ್ಲಿ ನಿರ್ಣಯ ಮಂಡಿಸಿ, ಸ್ಥಳೀಯ ಜನರ ಜೀವನ ಶೈಲಿ ಹಾಗೂ ಲಕ್ಷ ದ್ವೀಪಗಳ ಪರಿಸರ ವ್ಯವಸ್ಥೆಯನ್ನು ನಾಶಗೊಳಿಸುವ ಪ್ರಯತ್ನ ನಡೆಯುತ್ತಿದೆ ಎಂದು ದೂರಿದರು. ಹಿಂಬಾಗಿಲ ಮೂಲಕ "ಕೇಸರಿ ಕಾರ್ಯಸೂಚಿ" ಜಾರಿಗೊಳಿಸುವ ಯೋಜನೆ ನಡೆಯುತ್ತಿದೆ ಎಂದು ಆರೋಪಿಸಿದರು. ಕಾರ್ಯಸೂಚಿಯ ಭಾಗವಾಗಿ ತೆಂಗಿನ ಮರಗಳಿಗೂ ಕೇಸರಿ ಬಣ್ಣ ಬಳಿಯಲಾಗುತ್ತಿದೆ. ಅಭಿವೃದ್ದಿಯ ಹೆಸರಿನಲ್ಲಿ ಕಾರ್ಪೋರೇಟ್ ಕಂಪನಿಗಳಿಗಾಗಿ ಲಕ್ಷದ್ವೀಪ ಜನರ ಹಿತಾಸಕ್ತಿಗಳನ್ನು ರಾಜಿಮಾಡಿಕೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಆರೋಪಿಸಿದರು.
ನಿರ್ಣಯಕ್ಕೆ ಬೆಂಬಲ ಸೂಚಿಸಿದ ಪ್ರತಿಪಕ್ಷ ನಾಯಕ ವಿ.ಡಿ ಸತೀಶನ್, ಲಕ್ಷದ್ವೀಪ ಆಡಳಿತಾಧಿಕಾರಿಯನ್ನು ಕೂಡಲೇ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.
ಕಳೆದ ಏಪ್ರಿಲ್ 6ರಂದು ನಡೆದ ವಿಧಾನಸಭಾ ಚುನಾವಣೆಯಲ್ಲಿ ಸತತ ಎರಡನೇ ಬಾರಿ ಜಯಸಾಧಿಸಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಪಿಣರಾಯಿ ವಿಜಯನ್ ನೇತೃತ್ವದ ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ನೀತಿಯ ವಿರುದ್ದ ಅಂಗೀಕರಿಸಿದ ಮೊದಲ ನಿರ್ಣಯ ಇದಾಗಿದೆ. ಇದಕ್ಕೂ ಮುನ್ನ ಇತ್ತೀಚಿಗೆ ಅಗಲಿದ ಮಾಜಿ ಕೇರಳ ರಾಜ್ಯಪಾಲ ಆರ್ ಎಲ್. ಭಾಟಿಯಾ, ಹಿರಿಯ ನಾಯಕಿ ಕೆ.ಆರ್ ಗೌರಿಯಮ್ಮ, ಆರ್. ರಾಮಕೃಷ್ಣ ಪಿಳ್ಳೈ, ಕೇರಳ ಕಾಂಗ್ರೆಸ್ ನಾಯಕ ಕೆ.ಜೆ. ಚಾಕೋ, ಸಿಎ ಕುರಿಯನ್, ಕೆ.ಎಂ ಹಂಸಕುಂಜು ಹಾಗೂ ಬಿ. ರಾಘವನ್ ಅವರಿಗೆ ವಿಧಾನಸಭೆ ಶ್ರದ್ದಾಂಜಲಿ ಸಲ್ಲಿಸಿತು.