'ಮಕ್ಕಳಿಗೆ ಇಷ್ಟೊಂದು ಹೋಂ ವರ್ಕ್ ಯಾಕೆ ಕೊಡ್ತಾರೆ ಮೋದಿ ಸಾಬ್'?: ಪ್ರಧಾನಿಗೆ ಕಾಶ್ಮೀರದ ಪುಟ್ಟ ಪೋರಿಯ ಪ್ರಶ್ನೆ

ಕೊರೋನಾ ಸೋಂಕಿನಿಂದಾಗಿ ಕಳೆದ ವರ್ಷದಿಂದ ಶಾಲೆಗಳು ಆರಂಭವಾಗಿಲ್ಲ. ಆನ್ ಲೈನ್ ಕ್ಲಾಸ್ ನಲ್ಲಿ ಮಕ್ಕಳಿಗೆ ತರಗತಿಗಳು ನಡೆಯುತ್ತಿವೆ, ಆನ್ ಲೈನ್ ನಲ್ಲಿ ಮಕ್ಕಳಿಗೆ ಹೋಂವರ್ಕ್, ಕ್ಲಾಸ್ ವರ್ಕ್ ಎಲ್ಲವನ್ನೂ ಶಿಕ್ಷಕರು ನೀಡುತ್ತಾರೆ. ಇದು ಬಹುತೇಕ ಮಕ್ಕಳಿಗೆ ಇಷ್ಟವಾಗುತ್ತಿಲ್ಲ.
ಪ್ರಧಾನಿ ನರೇಂದ್ರ ಮೋದಿ, ಕಾಶ್ಮೀರದ ಬಾಲಕಿ
ಪ್ರಧಾನಿ ನರೇಂದ್ರ ಮೋದಿ, ಕಾಶ್ಮೀರದ ಬಾಲಕಿ

ಜಮ್ಮು-ಕಾಶ್ಮೀರ: ಕೊರೋನಾ ಸೋಂಕಿನಿಂದಾಗಿ ಕಳೆದ ವರ್ಷದಿಂದ ಶಾಲೆಗಳು ಆರಂಭವಾಗಿಲ್ಲ. ಆನ್ ಲೈನ್ ಕ್ಲಾಸ್ ನಲ್ಲಿ ಮಕ್ಕಳಿಗೆ ತರಗತಿಗಳು ನಡೆಯುತ್ತಿವೆ, ಆನ್ ಲೈನ್ ನಲ್ಲಿ ಮಕ್ಕಳಿಗೆ ಹೋಂವರ್ಕ್, ಕ್ಲಾಸ್ ವರ್ಕ್ ಎಲ್ಲವನ್ನೂ ಶಿಕ್ಷಕರು ನೀಡುತ್ತಾರೆ. ಇದು ಬಹುತೇಕ ಮಕ್ಕಳಿಗೆ ಇಷ್ಟವಾಗುತ್ತಿಲ್ಲ.

ಜಮ್ಮು-ಕಾಶ್ಮೀರದ 6 ವರ್ಷದ ಎರಡನೇ ತರಗತಿಯಲ್ಲಿ ಓದುತ್ತಿರುವ ಪುಟ್ಟ ಬಾಲಕಿಯೊಬ್ಬಳು ದೀರ್ಘಕಾಲ ಆನ್ ಲೈನ್ ಕ್ಲಾಸ್ ಮಾಡುವುದಕ್ಕೆ, ಅಷ್ಟೊಂದು ಹೋಂ ವರ್ಕ್ ಕೊಡುವುದಕ್ಕೆ ಪ್ರಧಾನಿ ಮೋದಿಯವರನ್ನೇ ಪ್ರಶ್ನೆ ಮಾಡಿದ್ದಾಳೆ. ಅದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಔರಂಗಜೇಬ್ ನಕ್ಶಬಂದಿ ಎಂಬ ಪತ್ರಕರ್ತರೊಬ್ಬರು ಬಾಲಕಿ ಮಾತನಾಡುವ ವಿಡಿಯೊವನ್ನು ಶೇರ್ ಮಾಡಿದ್ದಾರೆ. 45 ಸೆಕೆಂಡ್ ಗಳ ವಿಡಿಯೊದಲ್ಲಿ ಬಾಲಕಿ, ಬೆಳಗ್ಗೆ 10 ಗಂಟೆಗೆ ಆನ್ ಲೈನ್ ಕ್ಲಾಸ್ ಆರಂಭವಾದರೆ ಮಧ್ಯಾಹ್ನ 2 ಗಂಟೆಯವರೆಗೆ ಇರುತ್ತದೆ, ಇಂಗ್ಲಿಷ್, ಗಣಿತ, ಉರ್ದು, ಇವಿಎಸ್ ಮತ್ತೆ ಕಂಪ್ಯೂಟರ್ ಕ್ಲಾಸ್ ಗಳನ್ನು ಆನ್ ಲೈನ್ ನಲ್ಲಿ ತೆಗೆದುಕೊಳ್ಳುತ್ತಾರೆ. ನಮ್ಮಂತ ಸಣ್ಣ ಮಕ್ಕಳಿಗೆ ಇಷ್ಟೊಂದು ಹೊತ್ತು ಕ್ಲಾಸೇ.

8,9,10ನೇ ತರಗತಿ ಮಕ್ಕಳಿಗೆ ಕೊಡುವಂತೆ ಹೋಂ ವರ್ಕ್ ಸಿಕ್ಕಾಪಟ್ಟೆ ಕೊಡುತ್ತಾರೆ, ನಮಗೆ ನಿಜಕ್ಕೂ ಸಾಕಾಗಿ ಹೋಗಿದೆ, ಏನು ಮಾಡಲು ಆಗುತ್ತದೆ ಎಂದು ಹೇಳಿ ಬಾಲಕಿ ಮೌನವಾಗಿ ಕೊನೆಗೆ ಅಸ್ಸಾಮಲೈಕುಂ ಮೋದಿ ಸಾಬ್ ಬೈ ಎಂದು ಕೊನೆಗೆ ಹೇಳುತ್ತಾಳೆ.

ಈ ವಿಡಿಯೊ ಸಿಕ್ಕಾಪಟ್ಟೆ ವೈರಲ್ ಆಗಿ ಮಾಧ್ಯಮಳಲ್ಲಿ ಕೂಡ ಸುದ್ದಿಯಾಗಿದೆ. ಮೊನ್ನೆ ಶನಿವಾರ ಪೋಸ್ಟ್ ಆದ ವಿಡಿಯೊವನ್ನು ಸಾವಿರಾರು ಮಂದಿ ನೋಡಿ ಲೈಕ್ ಕೊಟ್ಟಿದ್ದಾರೆ, ಹಲವರು ರಿ ಟ್ವೀಟ್ ಮಾಡಿದ್ದಾರೆ. 

ಜಮ್ಮು-ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಪ್ರತಿಕ್ರಿಯೆ: ಜಮ್ಮು-ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಬಾಲಕಿಯ ಮಾತುಗಳಿಗೆ ಪ್ರತಿಕ್ರಿಯಿಸಿದ್ದು, ನಿಜಕ್ಕೂ ತುಂಬಾ ಮುದ್ದಾದ ಆರೋಪವಿದು. ಪುಟ್ಟ ಮಕ್ಕಳ ಮೇಲೆ ಶಾಲೆಯ ಕೆಲಸ ಹೊರೆಯಾಗದಂತೆ ನೀತಿ ನಿರೂಪಣೆಯನ್ನು 48 ಗಂಟೆಗಳೊಳಗೆ ತನ್ನಿ ಎಂದು ಶಾಲಾ ಶಿಕ್ಷಣ ಇಲಾಖೆಗೆ ಸೂಚಿಸಿದ್ದೇನೆ. ಬಾಲ್ಯದ ಮುಗ್ಧತನ ದೇವರು ಕೊಟ್ಟ ಉಡುಗೊರೆಯಾಗಿದ್ದು ಅವರು ಅದೇ ರೀತಿ ಬಾಲ್ಯವನ್ನು ಕಳೆಯಬೇಕು, ಅದನ್ನು ಕಸಿಯಬಾರದು ಎಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com