ನಿಮ್ಮ ಗ್ರಾಮವನ್ನು 'ಕೊರೋನಾ ಮುಕ್ತ' ಮಾಡಿ 50 ಲಕ್ಷ ರೂ. ಗೆಲ್ಲಿ: ಮಹಾರಾಷ್ಟ್ರ ಸರ್ಕಾರದಿಂದ ವಿನೂತನ ಸ್ಪರ್ಧೆ

ಗ್ರಾಮಗಳಿಗೆ ಕೊರೋನಾ ಹರಡುವುದನ್ನು ತಡೆಯುವ ಕ್ರಮಗಳನ್ನು ಉತ್ತೇಜಿಸುವ ಉದ್ದೇಶದಿಂದ ಮಹಾರಾಷ್ಟ್ರ ಸರ್ಕಾರ 'ಕೊರೋನಾ ಮುಕ್ತ ಗ್ರಾಮ' ಸ್ಪರ್ಧೆಯನ್ನು ಘೋಷಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮುಂಬೈ: ಗ್ರಾಮಗಳಿಗೆ ಕೊರೋನಾ ಹರಡುವುದನ್ನು ತಡೆಯುವ ಕ್ರಮಗಳನ್ನು ಉತ್ತೇಜಿಸುವ ಉದ್ದೇಶದಿಂದ ಮಹಾರಾಷ್ಟ್ರ ಸರ್ಕಾರ 'ಕೊರೋನಾ ಮುಕ್ತ ಗ್ರಾಮ' ಸ್ಪರ್ಧೆಯನ್ನು ಘೋಷಿಸಿದೆ.

ಕೊರೋನಾ ಸೋಂಕಿನ ಹರಡುವಿಕೆಯನ್ನು ತಡೆಯಲು ಕೆಲವು ಗ್ರಾಮಗಳು ಮಾಡಿದ ಪ್ರಯತ್ನಗಳನ್ನು ಶ್ಲಾಘಿಸಿದ್ದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಇದೀಗ 'ಮೈ ವಿಲೇಜ್ ಕೊರೋನಾ ಫ್ರೀ' ಉಪಕ್ರಮವನ್ನು ಪ್ರಕಟಿಸಿದೆ.

ಕೊರೋನಾ ತಡೆಯುವ ಉದ್ದೇಶದಿಂದ 'ಕರೋನಾ ಮುಕ್ತ ಗ್ರಾಮ' ಸ್ಪರ್ಧೆಯು ಮುಖ್ಯಮಂತ್ರಿ ಘೋಷಿಸಿದ ಉಪಕ್ರಮದ ಭಾಗವಾಗಿದೆ ಎಂದು ರಾಜ್ಯ ಗ್ರಾಮೀಣಾಭಿವೃದ್ಧಿ ಸಚಿವ ಹಸನ್ ಮುಶ್ರಿಫ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತಿ ಕಂದಾಯ ವಿಭಾಗದಲ್ಲಿ ಕೋವಿಡ್ ನಿರ್ವಹಣೆಯಲ್ಲಿ ಉತ್ತಮ ಕೆಲಸ ಮಾಡುತ್ತಿರುವ ಮೂರು ಗ್ರಾಮ ಪಂಚಾಯಿತಿಗಳಿಗೆ ಬಹುಮಾನ ನೀಡಲಾಗುವುದು. ಪ್ರಥಮ ಬಹುಮಾನ 50 ಲಕ್ಷ ರೂ., ದ್ವಿತೀಯ ಸ್ಥಾನಕ್ಕೆ 25 ಲಕ್ಷ ರೂ. ಮತ್ತು ತೃತೀಯ ಸ್ಥಾನಕ್ಕೆ 15 ಲಕ್ಷ ರೂ. ನೀಡಲಾಗುವುದು. ಇನ್ನು ರಾಜ್ಯದಲ್ಲಿ ಆರು ಕಂದಾಯ ವಿಭಾಗಗಳಿದ್ದು ಒಟ್ಟು 18 ಬಹುಮಾನಗಳು ನೀಡಲಾಗುವುದು. 

ಒಟ್ಟು ಬಹುಮಾನದ ಮೊತ್ತ 5.4 ಕೋಟಿ ರೂ. ಆಗಲಿದೆ. ಸ್ಪರ್ಧೆಯಲ್ಲಿ ಗೆಲ್ಲುವ ಹಳ್ಳಿಗಳಿಗೆ ಬಹುಮಾನದ ಮೊತ್ತವನ್ನು ಹಂಚಲಾಗುವುದು. ಇದನ್ನು ಆ ಗ್ರಾಮಗಳಲ್ಲಿನ ಅಭಿವೃದ್ಧಿ ಕಾರ್ಯಗಳಿಗೆ ಬಳಸಲಾಗುತ್ತದೆ. 22 ಮಾನದಂಡಗಳ ಮೇಲೆ ತೀರ್ಪನ್ನು ನಿರ್ಣಯಿಸಲಾಗುವುದು. ಗ್ರಾಮಗಳನ್ನು ನಿರ್ಣಯಿಸಲು ಸಮಿತಿಯನ್ನು ರಚಿಸಲಾಗುವುದು ಎಂದರು. 

ಭಾನುವಾರ ವರ್ಚುವಲ್ ಭಾಷಣದಲ್ಲಿ ಠಾಕ್ರೆ, ಸೋಲಾಪುರ ಜಿಲ್ಲೆಯ ಘಾಟ್ನೆ ಗ್ರಾಮವನ್ನು ಕೊರೋನಾವೈರಸ್ ಮುಕ್ತವಾಗಿಡಲು ಶ್ರಮಿಸುತ್ತಿರುವ ಮಹಾರಾಷ್ಟ್ರದ ಕಿರಿಯ ಸರ್ಪಂಚ್ 21 ವರ್ಷದ ರುತುರಾಜ್ ದೇಶ್ಮುಖ್ ಮತ್ತು ಅವರ ಕಾರ್ಯಪಡೆಯನ್ನು ಶ್ಲಾಘಿಸಿದ್ದರು.

ಮಂಗಳವಾರ ಮಹಾರಾಷ್ಟ್ರದಲ್ಲಿ 14,123 ಹೊಸ ಕೊರೋನಾ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿನ ಸಂಖ್ಯೆ 57,61,015ಕ್ಕೆ ತಲುಪಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com