ಜೈಲಿಗೆ ಹೋಗೋಕೆ 'ಬಯಸಿ' ಪಿಎಂ ಮೋದಿ ಕೊಲ್ಲೋದಾಗಿ ಕಂಟ್ರೋಲ್ ರೂಂಗೆ ಕರೆ ಮಾಡಿದವ ಸೆರೆ!

ಪೊಲೀಸ್ ನಿಯಂತ್ರಣ ಕೊಠಡಿಗೆ (ಪಿಸಿಆರ್) ಕರೆ ಮಾಡಿ ಪ್ರಧಾನಿ ನರೇಂದ್ರ ಮೋದಿಯವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ 22 ವರ್ಷದ ಯುವಕನನ್ನು ಈಶಾನ್ಯ ದೆಹಲಿಯ ಖಜುರಿ ಖಾಸ್ ಪ್ರದೇಶದಲ್ಲಿ  ಬಂಧಿಸಲಾಗಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಪೊಲೀಸ್ ನಿಯಂತ್ರಣ ಕೊಠಡಿಗೆ (ಪಿಸಿಆರ್) ಕರೆ ಮಾಡಿ ಪ್ರಧಾನಿ ನರೇಂದ್ರ ಮೋದಿಯವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ 22 ವರ್ಷದ ಯುವಕನನ್ನು ಈಶಾನ್ಯ ದೆಹಲಿಯ ಖಜುರಿ ಖಾಸ್ ಪ್ರದೇಶದಲ್ಲಿ ಬಂಧಿಸಲಾಗಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

ಸಲ್ಮಾನ್ ಅಲಿಯಾಸ್ ಅರ್ಮಾನ್ ಎಂದು ಗುರುತಿಸಲ್ಪಟ್ಟ ಆರೋಪಿ ಜೈಲಿಗೆ ಹೋಗಲು "ಬಯಸಿದ್ದರಿಂದ" ಕರೆ ಮಾಡಿದ್ದಾಗಿ ಪೊಲೀಸರಿಗೆ ತಿಳಿಸಿದ್ದಾನೆ.

ಆರೋಪಿ ಸಲ್ಮಾನ್ ಮಾದಕ ವ್ಯಸನಿಯಾಗಿದ್ದು, ಬಾಲಾಪರಾಧಿಗಳ ಪರಿವರ್ತನಾ ಕೇಂದ್ರದಿಂದ ಬಿಡುಗಡೆ ಮಾಡಲಾಗಿತ್ತು. ಅವನನ್ನು 2018 ರಲ್ಲಿ ಕೊಲೆ ಪ್ರಕರಣವೊಂದರಲ್ಲಿ ಅಲ್ಲಿಗೆ ಕಳಿಸಲಾಗಿತ್ತು ಎಂದು ಅವರು ತಿಳಿಸಿದ್ದಾರೆ.

ಆರೋಪಿ ಗುರುವಾರ ಮಧ್ಯರಾತ್ರಿ ಸುಮಾರಿಗೆ 112 ಕ್ಕೆ ಪಿಸಿಆರ್‌ಗೆ ಕರೆ ಮಾಡಿ ಪ್ರಧಾನಿ ಮೋದಿಯವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಕರೆ ಸ್ವೀಕರಿಸಿದ ಸಂಖ್ಯೆಯನ್ನು ತಕ್ಷಣವೇ ಪತ್ತೆ ಹಚ್ಚಿ ಜಿಲ್ಲಾ ಪೊಲೀಸ್ ಘಟಕದೊಂದಿಗೆ ಹಂಚಿಕೊಳ್ಳಲಾಗಿದ್ದು, ನಂತರ ಆತನನ್ನು ಖಜುರಿ ಖಾಸ್‌ ನಲ್ಲಿ ಪತ್ತೆ ಹಚ್ಚಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಪ್ರಾಥಮಿಕ ತನಿಖೆಯ ಪ್ರಕಾರ, ಕರೆ ಮಾಡುವ ಸಮಯದಲ್ಲಿ ಸಲ್ಮಾನ್ ಡ್ರಗ್ಸ್ ಪ್ರಭಾವಕ್ಕೆ ಒಳಗಾಗಿದ್ದ. ರಾತ್ರಿ 10 ರ ಸುಮಾರಿಗೆ ಆತನ ತಂದೆ ಅವನಿಗೆ ಗದರಿದ್ದರು. ವಿಚಾರಣೆ ವೇಳೆ, ಜೈಲಿಗೆ ಹೋಗಲು "ಬಯಸಿದ್ದರಿಂದ" ಕರೆ ಮಾಡಿದ್ದಾಗಿ ಆ ವ್ಯಕ್ತಿ ಪೊಲೀಸರಿಗೆ ತಿಳಿಸಿದ್ದಾನೆ. 

ಆತ ಜೈಲಿಗೆ ಹೋಗಲು ಏಕೆ ಬಯಸುತ್ತಾನೆ ಎಂದು ಕೇಳಿದಾಗ, "ವಹಿ ಮನ್ ಲಗ್ತಾ ಹೈ ಮೇರಾ (ನಾನು ಅಲ್ಲಿರಲು ಇಷ್ಟಪಡುತ್ತೇನೆ)" ಎಂದು ಹೇಳಿದನು. ತಾನು ಮಾದಕ ವ್ಯಸನಿಯಾಗಿದ್ದೇನೆ ಮತ್ತು ಗುರುವಾರ ಸಂಜೆ 7 ಗಂಟೆ ಸುಮಾರಿಗೆ ಸ್ವಲ್ಪ ಸ್ಮ್ಯಾಕ್ ತೆಗೆದುಕೊಂಡಿದ್ದೇನೆ ಎಂದು ಸಲ್ಮಾನ್ ಪೊಲೀಸರಿಗೆ ತಿಳಿಸಿದ್ದಾನೆ. ಯಾವುದೇ ಕಾನೂನು ಕ್ರಮ ಕೈಗೊಳ್ಳುವ ಮೊದಲು ದೆಹಲಿ ಪೊಲೀಸರ ಹಿರಿಯ ಅಧಿಕಾರಿಗಳು ಪ್ರೋಟೋಕಾಲ್ ಪ್ರಕಾರ ಇಂಟೆಲಿಜೆನ್ಸ್ ಬ್ಯೂರೋ ಅಧಿಕಾರಿಗಳೊಂದಿಗೆ ವಿಚಾರಣೆ ನಡೆಸಲಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com