ಯಾಸ್ ಚಂಡಮಾರುತ; ಪುರಸಭೆಯಿಂದ ಪರಿಹಾರ ಸಾಮಗ್ರಿ ಕಳ್ಳತನ ಆರೋಪ; ಬಿಜೆಪಿ ನಾಯಕ ಸುವೇಂದು ಅಧಿಕಾರಿ, ಸಹೋದರರ ವಿರುದ್ಧ ಎಫ್ ಐಆರ್
ಯಾಸ್ ಚಂಡಮಾರುತದ ನಿಮಿತ್ತ ಪುರಸಭೆಯಲ್ಲಿ ಸಂಗ್ರಹಿಸಿಡಲಾಗಿದ್ದ ಪರಿಹಾರ ಸಾಮಗ್ರಿಗಳನ್ನು ಕಳ್ಳತನ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಬಿಜೆಪಿ ನಾಯಕ ಸುವೇಂದು ಅಧಿಕಾರಿ ಮತ್ತು ಅವರ ಸಹೋದರರ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
Published: 06th June 2021 08:40 PM | Last Updated: 06th June 2021 08:40 PM | A+A A-

ಸುವೇಂದು ಅಧಿಕಾರಿ
ಕೋಲ್ಕತಾ: ಯಾಸ್ ಚಂಡಮಾರುತದ ನಿಮಿತ್ತ ಪುರಸಭೆಯಲ್ಲಿ ಸಂಗ್ರಹಿಸಿಡಲಾಗಿದ್ದ ಪರಿಹಾರ ಸಾಮಗ್ರಿಗಳನ್ನು ಕಳ್ಳತನ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಬಿಜೆಪಿ ನಾಯಕ ಸುವೇಂದು ಅಧಿಕಾರಿ ಮತ್ತು ಅವರ ಸಹೋದರರ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ ಪಶ್ಚಿಮಬಂಗಾಳದ ಕಾಂತಿ ಪುರಸಭೆ ಕಚೇರಿಯಿಂದ ಲಕ್ಷಾಂತರ ಮೌಲ್ಯದ ಪರಿಹಾರ ಸಾಮಾಗ್ರಿಗಗಳನ್ನು ಕದ್ದ ಆರೋಪದ ಮೇಲೆ ಭಾರತೀಯ ಜನತಾ ಪಕ್ಷದ (ಬಿಜೆಪಿ) ಮುಖಂಡ ಸುವೇಂದು ಅಧಿಕಾರಿ ಮತ್ತು ಅವರ ಸಹೋದರ ಸೌಮೇಂದು ಅಧಿಕಾರಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಕಾಂತಿ ಪುರಸಭೆ ಆಡಳಿತ ಮಂಡಳಿಯ ಸದಸ್ಯ ರತ್ನಾದೀಪ್ ಮನ್ನಾ ಅವರ ದೂರಿನ ಮೇರೆಗೆ ಸುವೇಂದು ಅಧಿಕಾರಿ ಮತ್ತವರ ಸೋದರನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. 2021 ಮೇ 29 ಮಧ್ಯಾಹ್ನ 12.30ಕ್ಕೆ ಸುವೇಂದು ಅಧಿಕಾರಿ ಹಾಗೂ ಸೌಮೇಂದು ಅಧಿಕಾರಿ ನಿರ್ದೇಶನದಂತೆ ಪುರಸಭೆ ಕಚೇರಿ ಗೋಡೌನ್ ಅನ್ನು ಬಲವಂತವಾಗಿ ತೆರೆದು ಲಕ್ಷಾಂತರ ರೂಪಾಯಿ ಮೌಲ್ಯದ ಪರಿಹಾರ ಸಾಮಾಗ್ರಿಗಳನ್ನು ಒಯ್ಯಲಾಗಿದೆ ಮತ್ತು ಈ ಕಳ್ಳತನಕ್ಕೆ ಬಿಜೆಪಿ ನಾಯಕರು ಕೇಂದ್ರದ ಸಶಸ್ತ್ರ ಪಡೆಯ ನೆರವನ್ನು ಬಳಕೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ
ಪರಿಹಾರ ಸಾಮಾಗ್ರಿಗಳನ್ನು ದುರುಪಯೋಗ ಮಾಡಿದ ಬಗ್ಗೆ ಬಿಜೆಪಿ ನಾಯಕರು ತ್ರಿಣಮೂಲ ಕಾಂಗ್ರೆಸ್ ನಾಯಕರ ವಿರುದ್ಧ ಸತತ ಆರೋಪಗಳನ್ನು ಮಾಡುತ್ತಿದ್ದರು. ಅಂತೆಯೇ ಸುವೇಂದು ಅಧಿಕಾರಿ ಆಪ್ತ ರಾಖೇಲ್ ಬೆರಾ ಅವರನ್ನು ವಂಚನೆ ಪ್ರಕರಣದಲ್ಲಿ ಪೊಲೀಸರು ಬಂಧಿಸಿದ್ದಾರೆ. ಸರ್ಕಾರಿ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ಎರಡು ಲಕ್ಷ ರೂಪಾಯಿ ಪಡೆದು ವಂಚನೆ ಮಾಡಿದ್ದಾರೆಂದು ರಾಖೇಲ್ ವಿರುದ್ಧ ದೂರು ನೀಡಲಾಗಿತ್ತು. ಅವರ ಬಂಧನವಾದ ದಿನವೇ ಅಧಿಕಾರಿ ವಿರುದ್ದ ಪ್ರಕರಣ ದಾಖಲಿಸಲಾಗಿದೆ.