2 ವಾರಗಳಿಂದ ಲಸಿಕೆ ಇಲ್ಲ, ದೆಹಲಿಯ ಯುವಕರು ವ್ಯಾಕ್ಸಿನ್ ಪಡೆಯಲು ನೂರಾರು ಕಿಮೀ ಸಂಚರಿಸುತ್ತಿದ್ದಾರೆ: ಆಪ್ ಶಾಸಕಿ ಆತಿಶಿ

ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಕೊರೋನಾ ಲಸಿಕೆಯ ತೀವ್ರ ಅಭಾವ ಎದುರಾಗಿದ್ದು, 2 ವಾರಗಳಿಂದ ದೆಹಲಿಯಲ್ಲಿ ಲಸಿಕೆ ಇಲ್ಲ.. ವ್ಯಾಕ್ಸಿನ್ ಪಡೆಯಲು ದೆಹಲಿ ಯುವಕರು ನೂರಾರು ಕಿ.ಮೀ ಸಂಚರಿಸುತ್ತಿದ್ದಾರೆ ಎಂದು ಆಪ್ ಶಾಸಕಿ ಆತಿಶಿ ಹೇಳಿದ್ದಾರೆ.
ಆಪ್ ಶಾಸಕಿ ಆತಿಶಿ
ಆಪ್ ಶಾಸಕಿ ಆತಿಶಿ

ನವದೆಹಲಿ: ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಕೊರೋನಾ ಲಸಿಕೆಯ ತೀವ್ರ ಅಭಾವ ಎದುರಾಗಿದ್ದು, 2 ವಾರಗಳಿಂದ ದೆಹಲಿಯಲ್ಲಿ ಲಸಿಕೆ ಇಲ್ಲ.. ವ್ಯಾಕ್ಸಿನ್ ಪಡೆಯಲು ದೆಹಲಿ ಯುವಕರು ನೂರಾರು ಕಿ.ಮೀ ಸಂಚರಿಸುತ್ತಿದ್ದಾರೆ ಎಂದು ಆಪ್ ಶಾಸಕಿ ಆತಿಶಿ ಹೇಳಿದ್ದಾರೆ.

ಕೇಂದ್ರ ಸರ್ಕಾರ 18-44 ವಯೋಮಾನದವರಿಗೆ ಲಸಿಕೆ ಘೋಷಣೆ ಮಾಡಿದೆ. ಆದರೆ ದೆಹಲಿಯಲ್ಲಿ ಕೋವಿಶೀಲ್ಡ್ ಮತ್ತು ಕೊವಾಕ್ಸಿನ್ ಲಸಿಕೆಗಳು ಖಾಲಿಯಾಗಿ ಎರಡು ವಾರಗಳೇ ಆಗಿದೆ. ಇನ್ನೂ ಲಸಿಕೆ ದಾಸ್ತಾನು ಬಂದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ದೆಹಲಿಯ ಯುವಕರು ಈಗ ಲಸಿಕೆ ಪಡೆಯಲು ನೂರಾರು ಕಿ.ಮೀ  ಪ್ರಯಾಣಿಸುತ್ತಿದ್ದಾರೆ ಎಂದು ಆತಿಶಿ ದೆಹಲಿಯ ಪ್ರಸ್ತುತ ಪರಿಸ್ಥಿತಿಯನ್ನು ಬಿಚ್ಚಿಟ್ಟಿದ್ದಾರೆ.

ಜೂನ್ 10 ರಂದು 18-44 ವಯೋಮಾನದವರಿಗೆ ಹೊಸದಾಗಿ ಲಸಿಕೆಗಳನ್ನು ಒದಗಿಸುವುದಾಗಿ ಕೇಂದ್ರ ಸರ್ಕಾರ ಹೇಳಿತ್ತು. ದೈನಂದಿನ ಲಸಿಕೆ ಬುಲೆಟಿನ್ ಸಮಯದಲ್ಲಿ ಕೇಂದ್ರ ಸರ್ಕಾರಕ್ಕೆ ಲಸಿಕೆಗಳನ್ನು ನೀಡುವಂತೆ ಒತ್ತಾಯಿಸಲಾಗುತ್ತಿದೆ. ಈಗಾಗಲೇ ಮೊದಲ ಡೋಸ್ ಪಡೆದವರು ಎರಡನೇ ಡೋಸ್ ಗಾಗಿ  ಪರದಾಡುತ್ತಿದ್ದು, ಆದರೆ ರಾಜ್ಯದಲ್ಲಿ ಕೋವಿಡ್ ಲಸಿಕೆಯ ದಾಸ್ತಾನು ಸಾಕಷ್ಟಿಲ್ಲ ಎಂದು ಹೇಳಿದ್ದಾರೆ. 

'18-44 ವಯೋಮಾನದ ಗುಂಪಿನಲ್ಲಿರುವ ಬಹಳಷ್ಟು ಮಂದಿ ಮೊದಲ ಡೋಸ್ ಲಸಿಕೆ ಪಡೆದಿದ್ದು, ಎರಡನೇ ಡೋಸ್‌ ಗೆ ತಮ್ಮ ದಿನಾಂಕ ಸಮೀಪಿಸುತ್ತಿರುವುದರಿಂದ ಲಸಿಕೆ ಪಡೆಯಲು ಪರದಾಡುತ್ತಿದ್ದಾರೆ. ಇದು ಗಂಭೀರ ಸಮಸ್ಯೆಯಾಗುತ್ತಿದ್ದು, ಜನರು ಲಸಿಕೆ ಪಡೆಯಲು 100-200 ಕಿ.ಮೀ ದೂರದಲ್ಲಿರುವ  ಮೀರತ್, ಬುಲಂದ್‌ಶಹರ್‌ಗೆ ಪ್ರಯಾಣಿಸುತ್ತಿದ್ದಾರೆ ಎಂಬ ವರದಿಗಳನ್ನೂ ನಾವು ಕೇಳುತ್ತಿದ್ದೇವೆ. ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಲಸಿಕೆ ಪಡೆದಾಗ, 45ಕ್ಕಿಂತ ಹೆಚ್ಚಿನ ವಯಸ್ಸಿನವರನ್ನು ಸಾಂಕ್ರಾಮಿಕದಿಂದ ಹೊರಗೆ ತರಲು ಪ್ರೋತ್ಸಾಹಿಸಲಾಗುತ್ತದೆ. ಯುವಕರು ಲಸಿಕೆ ಪಡೆದರೆ ಅದನ್ನು ನೋಡುವ ಹಿರಿಯರೂ  ಕೂಡ ಲಸಿಕೆ ಕುರಿತ ಹಿಂಜರಿಕೆ ಬಿಟ್ಟು ಸ್ವಯಂಪ್ರೇರಿತರಾಗಿ ಬಂದು ಲಸಿಕೆ ಹಾಕಿಸಿಕೊಳ್ಳುತ್ತಾರೆ ಎಂದು ಆತಿಶಿ ಹೇಳಿದರು.

ಇನ್ನು ಶನಿವಾರ ದೆಹಲಿಯಲ್ಲಿ ಒಟ್ಟು 57,990 ಡೋಸ್‌ ಲಸಿಕೆಗಳನ್ನು ನೀಡಲಾಗಿದ್ದು, ಈ ಪೈಕಿ 42,742 ಮೊದಲ ಡೋಸ್‌ಗಳು ಮತ್ತು 15,248 2ನೇ ಡೋಸ್‌ಗಳಾಗಿವೆ. ಆ ಮೂಲಕ ದೆಹಲಿಯಲ್ಲಿ ಈ ವರೆಗೂ ನೀಡಲಾದ ಲಸಿಕೆಯ ಪ್ರಮಾಣ 56,51,226 ಡೋಸ್‌ಗೆ ಏರಿಕೆಯಾಗಿದೆ. ಇದರಲ್ಲಿ  12,84,000 ಜನರು ಎರಡೂ ಡೋಸ್ ಹಾಕಿಸಿಕೊಂಡಿದ್ದಾರೆ. 45ಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ 5,84,370 ಡೋಸ್ ಲಸಿಕೆಗಳನ್ನು ನೀಡಲಾಗಿದೆ.

ದೆಹಲಿಗೆ ಶುಕ್ರವಾರ ಲಸಿಕೆ ದಾಸ್ತಾನು ಬಂದಿದ್ದು, ಅದರೊಂದಿಗೆ ಹಿರಿಯ ನಾಗರಿಕರಿಗೆ ನೀಡಲು 21,850 ಡೋಸ್ ಕೋವಾಕ್ಸಿನ್ ಮೀಸಲಿರಿಸಲಾಗಿದ್ದು, 5,62,520 ಡೋಸ್ ಕೋವಿಶೀಲ್ಡ್ ಲಸಿಕೆ ಲಭ್ಯವಿದೆ ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com