ಛೇ ಇದೆಂಥಾ ಸಾವು..!; ಕುಡಿಯಲು ನೀರು ಸಿಗದೇ ಬಾಯಾರಿಕೆಯಿಂದ 5 ವರ್ಷದ ಬಾಲಕಿ ಬಲಿ!

ಸಾವು ಹೇಗೆಲ್ಲಾ ಬೆನ್ನಟ್ಟುತ್ತದೆ ಎಂಬುದಕ್ಕೆ ರಾಜಸ್ಥಾನದ ಈ ಘಟನೆ ಉದಾಹರಣೆಯಾಗಿದ್ದು, ಮನೆಗೆ ತೆರಳುತ್ತಿದ್ದ 5 ವರ್ಷದ ಬಾಲಕಿ ಕುಡಿಯಲು ನೀರು ಸಿಗದೇ ಬಾಯಾರಿಕೆಯಿಂದ ಸಾವನ್ನಪ್ಪಿದ್ದಾಳೆ.
ಬಾಯರಿಕೆಯಿಂದ ಬಾಲಕಿ ಸಾವು-ಅಜ್ಜಿ ಆಸ್ಪತ್ರೆಗೆ ದಾಖಲು
ಬಾಯರಿಕೆಯಿಂದ ಬಾಲಕಿ ಸಾವು-ಅಜ್ಜಿ ಆಸ್ಪತ್ರೆಗೆ ದಾಖಲು

ಜೈಪುರ: ಸಾವು ಹೇಗೆಲ್ಲಾ ಬೆನ್ನಟ್ಟುತ್ತದೆ.. ಎಂಬುದಕ್ಕೆ ರಾಜಸ್ಥಾನದ ಈ ಘಟನೆ ಉದಾಹರಣೆಯಾಗಿದ್ದು, ಮನೆಗೆ ತೆರಳುತ್ತಿದ್ದ 5 ವರ್ಷದ ಬಾಲಕಿ ಕುಡಿಯಲು ನೀರು ಸಿಗದೇ ಬಾಯಾರಿಕೆಯಿಂದ ಸಾವನ್ನಪ್ಪಿದ್ದಾಳೆ.

ಹೌದು.. ರಾಜಸ್ಥಾನದ ಜಲೋರ್ ಜಿಲ್ಲೆಯ ರಾಣಿವಾರಾದಲ್ಲಿ ಈ ಹೃದಯ ವಿದ್ರಾವಕ ಘಟನೆ ನಡೆದಿದ್ದು, ಐದು ವರ್ಷದ ಬಾಲಕಿ ಬಾಯಾರಿಕೆಯಿಂದ ಸಾವನ್ನಪ್ಪಿದ್ದರೆ, ಅಜ್ಜಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾರೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ. 

ಮೂಲಗಳ ಪ್ರಕಾರ ಇಲ್ಲಿನ ರೋಡಾ ಗ್ರಾಮದಲ್ಲಿ ಕುಟುಂಬ ಸದಸ್ಯರನ್ನು ನೋಡಲು ಸುಖಿ (60 ವರ್ಷ) ಮತ್ತು ಅವರ ಮೊಮ್ಮಗಳು ಮಂಜು (5 ವರ್ಷ) ಕಾಲ್ನಡಿಗೆಯಲ್ಲಿ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ. ದಾರಿಯಲ್ಲಿರುವಾಗ ಅವರಿಗೆ ಬಾಯಾರಿಕೆಯಾಗಿದೆ ಆದರೆ ಸ್ಥಳವು ಜನವಸತಿ ಇಲ್ಲದ ಕಾರಣ ಸುತ್ತಲೂ  ನೀರು ಸಿಗಲಿಲ್ಲ. ಈ ವೇಳೆ ಅಜ್ಜಿ ಮೊಮ್ಮಗಳು ಇಬ್ಬರೂ ರಸ್ತೆಯಲ್ಲಿ ನಿತ್ರಾಣರಾಗಿದ್ದಾರೆ. ಇದನ್ನು ದೂರದಲ್ಲಿ ಕುರಿ ಮೇಯಿಸುತ್ತಿದ್ದ ಕೆಲವರು ಗಮನಿಸಿ ಓಡಿ ಬಂದು ಇಬ್ಬರನ್ನೂ ಆರೈಕೆ ಮಾಡಿದ್ದಾರೆ. ಅಲ್ಲದೇ ಗ್ರಾಮದ ಸರ್ಪಂಚ್‌ಗೆ ಮಾಹಿತಿ ನೀಡಿ ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಪ್ರಥಮ ಚಿಕಿತ್ಸೆ  ನೀಡಿ ಆಸ್ಪತ್ರೆಗೆ ರವಾನಿಸಲು ಪ್ರಯತ್ನಿಸುತ್ತಿರುವಾಗಲೇ 5 ವರ್ಷದ ಪುಟ್ಟ ಬಾಲಕಿಯ ಪ್ರಾಣ ಪಕ್ಷಿ ಹಾರಿ ಹೋಗಿದೆ.

ಇನ್ನು ಅಜ್ಜಿ ಸುಖಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ಆಕೆ ಕೂಡ ದೇಹದ ನಿರ್ಜಲೀಕರಣ ಸಮಸ್ಯೆಯಿಂದ ಗಂಭೀರರಾಗಿದ್ದಾರೆ ಎಂದು ಸ್ಥಳೀಯ ಎಸ್ ಎಚ್ ಒ (ಆರೋಗ್ಯಾಧಿಕಾರಿ) ಮಾಹಿತಿ ನೀಡಿದ್ದಾರೆ.

ಇದೇ ವಿಚಾರವಾಗಿ ಮಾಹಿತಿ ನೀಡಿರುವ ಇಲ್ಲಿನ ಸ್ಟೇಷನ್ ಹೌಸ್ ಅಧಿಕಾರಿ ಪದ್ಮಾ ರಾಮ್ ಅವರು, ಕುರಿ ಕಾಯುವ ಹುಡುಗರು ಈ ಬಗ್ಗೆ ಮಾಹಿತಿ ನೀಡಿದಾಗ ಕೂಡಲೇ ನಮ್ಮ ತಂಡ ಸ್ಥಳ ತಲುಪಿತ್ತು. ಅದು ಕುರುಚಲು ಗುಡ್ಡಗಾಡು ಪ್ರದೇಶವಾಗಿದ್ದು, ಅಲ್ಲಿಗೆ ವಾಹನಗಳಲ್ಲಿ ತೆರಳಲು ಅಸಾಧ್ಯ. ಹೀಗಾಗಿ ನಾವು  ನಡೆದುಕೊಂಡೇ ವೇಗವಾಗಿ ಘಟನಾ ಸ್ಥಳ ತಲುಪಿದೆವು. ಅಷ್ಟು ಹೊತ್ತಿಗಾಗಲೇ ಅಜ್ಜಿ ಮತ್ತು ಮಗು ನಿತ್ರಾಣರಾಗಿದ್ದರು. ನಾವು ಪ್ರಥಮ ಚಿಕಿತ್ಸೆ ನೀಡಿ ಅಜ್ಜಿಗೆ ನೀರು ಕುಡಿಸಿದೆವು. ಬಳಿಕ ಇಬ್ಬರನ್ನೂ ಆಸ್ಪತ್ರೆ ಸಾಗಿಸುವಾಗ ಬಾಲಕಿ ಮೃತಪಟ್ಟಿದ್ದಾಳೆ. ಅಜ್ಜಿಗೆ ಚಿಕಿತ್ಸೆ ಮುಂದುವರೆದಿದೆ ಎಂದು ಹೇಳಿದ್ದಾರೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com