ಕೋವಿಡ್ ನಿರ್ವಹಣೆ ಕುರಿತು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಪ್ರಶಂಸಿಸಿ ಬಾಲಕಿ ಪತ್ರ: ಸ್ಪೂರ್ತಿಗೊಂಡ ಸಿಜೆಐ ಹೇಳಿದ್ದೇನು?

ಕೋವಿಡ್-19 ನಿರ್ವಹಣೆ ವಿಚಾರವಾಗಿ ನಿರಂತರವಾಗಿ ಶ್ರಮಿಸಿ ಸರ್ಕಾರಕ್ಕೆ ಬಿಸಿ ಮುಟ್ಟಿಸಿದ್ದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಕಾರ್ಯವನ್ನು ಶ್ಲಾಘಿಸಿ 5ನೇ ತರಗತಿ ಬಾಲಕಿ ಬರೆದ ಪತ್ರ ಇದೀಗ ವೈರಲ್ ಆಗಿದ್ದು, ಈ ಪತ್ರಕ್ಕೆ ಅಷ್ಟೇ ಪ್ರೀತಿಯಿಂದ ಸಿಜಿಐ ಎನ್ ವಿ ರಮಣ ಪ್ರತಿಕ್ರಿಯೆ  ನೀಡುವ ಮೂಲಕ ಗಮನ ಸೆಳೆದಿದ್ದಾರೆ.
ಸಿಜಿಐ ಎನ್ ವಿ ರಮಣ
ಸಿಜಿಐ ಎನ್ ವಿ ರಮಣ

ನವದೆಹಲಿ: ಕೋವಿಡ್-19 ನಿರ್ವಹಣೆ ವಿಚಾರವಾಗಿ ನಿರಂತರವಾಗಿ ಶ್ರಮಿಸಿ ಸರ್ಕಾರಕ್ಕೆ ಬಿಸಿ ಮುಟ್ಟಿಸಿದ್ದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಕಾರ್ಯವನ್ನು ಶ್ಲಾಘಿಸಿ 5ನೇ ತರಗತಿ ಬಾಲಕಿ ಬರೆದ ಪತ್ರ ಇದೀಗ ವೈರಲ್ ಆಗಿದ್ದು, ಈ ಪತ್ರಕ್ಕೆ ಅಷ್ಟೇ ಪ್ರೀತಿಯಿಂದ ಸಿಜಿಐ ಎನ್ ವಿ ರಮಣ ಪ್ರತಿಕ್ರಿಯೆ  ನೀಡುವ ಮೂಲಕ ಗಮನ ಸೆಳೆದಿದ್ದಾರೆ.

ಭಾರತದ ಸುಪ್ರೀಂಕೋರ್ಟ್‌ ನ ಮುಖ್ಯ ನ್ಯಾಯಮೂರ್ತಿ ಎನ್.ವಿ ರಮಣರವರಿಗೆ ಕೇರಳದ 5ನೇ ತರಗತಿಯ ವಿದ್ಯಾರ್ಥಿನಿ ಪತ್ರ ಬರೆದು ಪ್ರಶಂಸೆ ವ್ಯಕ್ತಪಡಿಸಿದ್ದಾಳೆ. ಆಮ್ಲಜನಕ ಪೂರೈಕೆಗೆ ಸಂಬಂಧಿಸಿದಂತೆ ಇತ್ತೀಚೆಗೆ ನ್ಯಾಯಾಲಯವು ನೀಡಿದ್ದ ಆದೇಶಗಳ ಕುರಿತಾದಂತೆ ಬಾಲಕಿ ಮುಖ್ಯ ನ್ಯಾಯಮೂರ್ತಿಗೆ  ಪತ್ರ ಬರೆಯುವ ಮೂಲಕ ಧನ್ಯವಾದ ತಿಳಿಸಿದ್ದಾಳೆ. ಸುಪ್ರೀಂಕೋರ್ಟ್ ಮಧ್ಯ ಪ್ರವೇಶದಿಂದಾಗಿ ಸೂಕ್ತ ಚಿಕಿತ್ಸೆ ಮತ್ತು ವೈದ್ಯಕೀಯ ಮೂಲಭೂತ ಸೌಕರ್ಯವಿಲ್ಲದೇ ಪರದಾಡುತ್ತಿದ್ದ ಲಕ್ಷಾಂತರ ಸೋಂಕಿತರ ಪ್ರಾಣ ಉಳಿದಿದೆ ಎಂದು ತ್ರಿಶೂರ್‌ ನ ಕೇಂದ್ರೀಯ ವಿದ್ಯಾಲಯದ ವಿದ್ಯಾರ್ಥಿನಿ ಲಿಡ್ವಿನಾ ಜೋಸೆಫ್‌ ಎಂಬ  5ನೇ ತರಗತಿಯ ಬಾಲಕಿಯು ತನ್ನ ಮೆಚ್ಚುಗೆ ಸೂಚಿಸಿದ್ದಾಳೆ. ಅಲ್ಲದೆ ಅದೇ ಪತ್ರದಲ್ಲಿ ಸಿಜೆಐ ಎನ್ ವಿ ರಮಣ ಅವರ ಚಿತ್ರವೊಂದನ್ನೂ ರಚಿಸಿದ್ದಾಳೆ. 

ಸ್ಪೂರ್ತಿಗೊಂಡ ಸಿಜೆಐ ಹೇಳಿದ್ದೇನು?
ಇನ್ನು ಈ ಪುಟ್ಟ ಪೋರಿಯ ಈ ವಿಶೇಷ ಪತ್ರ ವೈರಲ್ ಆಗುತ್ತಲೇ ಈ ಪತ್ರಕ್ಕೆ ಪ್ರತಿಕ್ರಿಯೆ ನೀಡಿರುವ ಸಿಜಿಐ ಎನ್ ವಿ ರಮಣ ಅವರು, 'ನನ್ನ ಪ್ರೀತಿಯ ಲಿಡ್ವಿನಾ, ತಮ್ಮ ಕಾರ್ಯಗಳಲ್ಲಿ ನಿರತರಾಗಿರುವ ನ್ಯಾಯಾಧೀಶರ ಸುಂದರವಾದ ಚಿತ್ರದೊಂದಿಗೆ ನಿನ್ನ ಪತ್ರವನ್ನು ಸ್ವೀಕರಿಸಿದ್ದೇನೆ. ದೇಶದಲ್ಲಿ ನಡೆಯುತ್ತಿರುವ  ಘಟನೆಗಳ ಬಗ್ಗೆ ನೀವು ನಿಗಾ ಇಟ್ಟಿರುವ ರೀತಿ ಮತ್ತು ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಜನರ ಯೋಗಕ್ಷೇಮದ ಕುರಿತು ನಿಮಗಿರುವ ಕಾಳಜಿಯಿಂದ ನಾನು ಪ್ರಭಾವಿತನಾಗಿದ್ದೇನೆ. ನೀವು ತುಂಬಾ ಜಾಗರೂಕರಾಗಿ, ತಿಳುವಳಿಕೆಯಿಂದ ಜವಾಬ್ದಾರಿತ ಪ್ರಜೆಯಾಗಿ ಬೆಳೆಯುವಿರಿ ಹಾಗೂ ರಾಷ್ಟ್ರ ನೀರ್ಮಾಣಕ್ಕೆ ಕೊಡುಗೆ  ನೀಡುವಿರಿ ಎಂಬ ಖಾತರಿ ನನಗಿದೆ. ನಿಮ್ಮ ಸರ್ವತೋಮುಖ ಯಶಸ್ಸಿಗೆ ನನ್ನ ಶುಭಾಶಯಗಳು" ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಬಾಲಕಿಗೆ ವಿಶೇಷ ಉಡುಗೊರೆ ನೀಡಿದ ಸಿಜಿಐ
ಇದೇ ವೇಳೆ ತಮ್ಮ ಮೆಚ್ಚುಗೆಗೆ ಪಾತ್ರವಾದ ಬಾಲಕಿಗೆ ಸಿಜಿಐ ವಿಶೇಷ ಉಡುಗೊರೆಯೊಂದನ್ನು ನೀಡಿದ್ದು, ಈ ಪತ್ರದ ಜೊತೆಗೆ ಭಾರತೀಯ ಸಂವಿಧಾನದ ಪ್ರತಿಯೊಂದನ್ನು ಹಸ್ತಾಕ್ಷರ ಸಹಿತ ಬಾಲಕಿಗೆ ಕಳಿಹಿಸಲಾಗಿದೆ ಎಂದು ತಿಳಿದು ಬಂದಿದೆ.

ವಿವಿಧ ರಾಜ್ಯಗಳು ಸಲ್ಲಿಸಿದ್ದ ಮನವಿಯಂತೆ ಮೇ ತಿಂಗಳಲ್ಲಿ ಸುಪ್ರೀಂ ಕೋರ್ಟ್‌ ಕೋವಿಡ್‌ ಪರಿಸ್ಥಿತಿಯ ಕುರಿತಾದಂತೆ ಕೆಲ ಆದೇಶಗಳನ್ನು ನೀಡಿತ್ತು. ಭಾರತದಾದ್ಯಂತ ಆಮ್ಲಜನಕ ಹಂಚಿಕೆಯನ್ನು ಪುನರುಜ್ಜೀವನಗೊಳಿಸಲು ಹಾಗೂ ವಿತರಣಾ ವ್ಯವಸ್ಥೆಯ ಲೆಕ್ಕ ಪರಿಶೋಧನೆ ನಡೆಸಲು ಸುಪ್ರೀಂ ಕೋರ್ಟ್‌  ಕೋರಿತ್ತು. ಸುಪ್ರೀಂಕೋರ್ಟ್‌ ಮಧ್ಯಪ್ರವೇಶದ ಬಳಿಕ ಆಕ್ಸಿಜನ್‌ ಕೊರತೆ ಪ್ರಕರಣಗಳಲ್ಲಿ ಭಾರೀ ಇಳಿಕೆ ಕಂಡು ಬಂದಿತ್ತು. ಅಂತೆಯೇ ನಿನ್ನೆಯಷ್ಟೇ ಪ್ರಧಾನಿ ಮೋದಿ ಉಚಿತ ಲಸಿಕೆ ಘೋಷಣೆ ಮಾಡಿದ್ದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com