ಮಹಾನಗರಿ ಮುಂಬೈಯಲ್ಲಿ ದುರಂತ: ವಸತಿ ಸಮುಚ್ಛಯ ಕುಸಿದು ಬಿದ್ದು 11 ಮಂದಿ ಸಾವು, 7 ಮಂದಿಗೆ ಗಾಯ

ಮಹಾನಗರಿ ಮುಂಬೈಯಲ್ಲಿ ಮತ್ತೊಂದು ದುರಂತ ಸಂಭವಿಸಿದೆ. ಮುಂಬೈಯ ಮಲಡ್ ಪಶ್ಚಿಮ ಪ್ರದೇಶದ ನ್ಯೂ ಕಲೆಕ್ಟರ್ ಕಂಪೌಂಡ್ ನಲ್ಲಿ ಮನೆಗಳು ಕುಸಿದು ಬಿದ್ದು ಅವಶೇಷಗಳಡಿಯಲ್ಲಿ ಸಿಲುಕಿ ಇದುವರೆಗೆ 11 ಮಂದಿ ಮೃತಪಟ್ಟಿದ್ದಾರೆ.
ಇಂದು ಬೆಳಗ್ಗೆಯಿಂದ ಮುಂದುವರಿದ ರಕ್ಷಣಾ ಕಾರ್ಯ
ಇಂದು ಬೆಳಗ್ಗೆಯಿಂದ ಮುಂದುವರಿದ ರಕ್ಷಣಾ ಕಾರ್ಯ

ಮುಂಬೈ: ಮಹಾನಗರಿ ಮುಂಬೈಯಲ್ಲಿ ಮತ್ತೊಂದು ದುರಂತ ಸಂಭವಿಸಿದೆ. ಮುಂಬೈಯ ಮಾಲ್ವನಿ ಪ್ರದೇಶದಲ್ಲಿ ಮೂರು ಅಂತಸ್ತಿನ ಕಟ್ಟಡ ಕುಸಿದು ಬಿದ್ದು ಅವಶೇಷಗಳಡಿಯಲ್ಲಿ ಸಿಲುಕಿ ಇದುವರೆಗೆ 11 ಮಂದಿ ಮೃತಪಟ್ಟಿದ್ದಾರೆ. ಅವರಲ್ಲಿ 8 ಮಂದಿ ಮಕ್ಕಳು ಮತ್ತು ಮೂವರು ವಯಸ್ಕರು ಸೇರಿದ್ದಾರೆ.

ದುರ್ಘಟನೆಯಲ್ಲಿ 7 ಮಂದಿಗೆ ಗಾಯವಾಗಿದ್ದು ಅವರನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಕಳೆದ ರಾತ್ರಿ 11.15ರ ಸುಮಾರಿಗೆ ಮಾಲ್ವನಿ ಪ್ರದೇಶದ ಅಬ್ದುಲ್ ಹಮೀದ್ ರಸ್ತೆಯ ನ್ಯೂ ಕಲೆಕ್ಟರ್ ಕಂಪೌಂಡ್ ನಲ್ಲಿ ದುರ್ಘಟನೆ ಸಂಭವಿಸಿದೆ.

ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ಮತ್ತು ರಕ್ಷಣಾ ತಂಡ ಕೂಡಲೇ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯ ಆರಂಭಿಸಿತು. ಕಟ್ಟಡ ಕುಸಿದು ಬಿದ್ದ ಹಿನ್ನೆಲೆಯಲ್ಲಿ ಪಕ್ಕದ 3 ಮನೆಗಳ ನಿವಾಸಿಗಳನ್ನು ಸ್ಥಳಾಂತರಿಸಲಾಗಿದೆ. ಇನ್ನೂ ಹಲವರು ಸಿಲುಕಿ ಹಾಕಿಕೊಂಡಿದ್ದು ಅವರ ಶೋಧ ಕಾರ್ಯ ನಡೆಯುತ್ತಿದೆ ಎಂದು ಬೃಹನ್ ಮುಂಬೈ ಮಹಾನಗರ ಪಾಲಿಕೆ ತಿಳಿಸಿದೆ. 

ಪೊಲೀಸರಿಂದ ತನಿಖೆ: ಇದೊಂದು ದುರದೃಷ್ಟಕರ ಘಟನೆಯಾಗಿದೆ. ನೆಲಮಹಡಿ ಸೇರಿದಂತೆ ಮೂರು ಮಹಡಿಗಳಿರುವ ಕಟ್ಟಡ ಮತ್ತೊಂದು ಕಟ್ಟಡದ ಮೇಲೆ ಕುಸಿದುಬಿದ್ದಿದೆ. ಕಾರ್ಯಾಚರಣೆಯಲ್ಲಿ ಇದುವರೆಗೆ 18 ಮಂದಿಯನ್ನು ರಕ್ಷಿಸಲಾಗಿದೆ. 11 ಮಂದಿ ಮೃತಪಟ್ಟಿದ್ದಾರೆ. ಕಟ್ಟಡ ಕುಸಿದು ಬಿದ್ದ ಬಗ್ಗೆ ಸಮಗ್ರವಾಗಿ ತನಿಖೆ ಮಾಡಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ದಿಲೀಪ್ ಸಾವಂತ್ ತಿಳಿಸಿದ್ದಾರೆ.

ಮುಂಬೈಯಲ್ಲಿ ಕಟ್ಟಡ ಕುಸಿದು ಬಿದ್ದು ಜನರು ಮೃತಪಟ್ಟಿರುವ ಘಟನೆ ಬಗ್ಗೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಸಂತಾಪ ಸೂಚಿಸಿದ್ದಾರೆ. ಮೃತರ ಕುಟುಂಬಸ್ಥರಿಗೆ ನನ್ನ ಸಂತಾಪಗಳು, ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಆಶಿಸಿದ್ದಾರೆ.

ಪ್ರಧಾನಿ ಕಂಬನಿ, ಪರಿಹಾರ: ಮುಂಬೈಯ ಮಲಾಡ್ ವೆಸ್ಟ್ ನಲ್ಲಿ ಕಟ್ಟಡ ಕುಸಿದು ಮೃತಪಟ್ಟವರ ಬಗ್ಗೆ ಕಂಬನಿ ಮಿಡಿದಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಪ್ರಧಾನ ಮಂತ್ರಿ ವಿಪತ್ತು ಪರಿಹಾರ ನಿಧಿಯಿಂದ ಮೃತರ ಕುಟುಂಬಸ್ಥರಿಗೆ ತಲಾ 2 ಲಕ್ಷ ರೂಪಾಯಿ ಹಾಗೂ ಗಾಯಗೊಂಡವರಿಗೆ ತಲಾ 50 ಸಾವಿರ ರೂಪಾಯಿ ಧನಸಹಾಯ ಘೋಷಿಸಿದ್ದಾರೆ.

ಕೇಸು ದಾಖಲು: ಮುಂಬೈ ಪೊಲೀಸರು ಘಟನೆ ನಡೆದ ಬಳಿಕ ಕಟ್ಟಡದ ಮಾಲೀಕ ಮತ್ತು ಗುತ್ತಿಗೆದಾರರ ವಿರುದ್ಧ ಐಪಿಸಿ ಸೆಕ್ಷನ್ ಯು/ಎಸ್ 304(2)ರಡಿ ಕೇಸು ದಾಖಲಿಸಿಕೊಂಡಿದ್ದಾರೆ. ಟೌಕ್ಟೇ ಚಂಡಮಾರುತ ನಂತರ ಕಟ್ಟಡ ಮಾಲೀಕರು ಕೆಲವು ಬದಲಾವಣೆಗಳನ್ನು ಮಾಡಿಕೊಂಡಿದ್ದರು ಎಂದು ತಿಳಿದುಬಂದಿದೆ ಎಂದು ಜಂಟಿ ಪೊಲೀಸ್ ಆಯುಕ್ತ ವಿಶ್ವಾಸ್ ನಂಗ್ರೆ ಪಾಟೀಲ್ ತಿಳಿಸಿದ್ದಾರೆ.

ಮಹಾರಾಷ್ಟ್ರ ಸರ್ಕಾರ ಪರಿಹಾರ ಘೋಷಣೆ: ಮಹಾರಾಷ್ಟ್ರ ಸಚಿವ ಅಸ್ಲಮ್ ಶೈಖ್ ಮಾತನಾಡಿ ಮೃತರ ಕುಟುಂಬಸ್ಥರಿಗೆ ಸರ್ಕಾರ ತಲಾ 5 ಲಕ್ಷ ರೂಪಾಯಿ ಪರಿಹಾರ ನೀಡಲಿದೆ ಎಂದು ಘೋಷಿಸಿದ್ದಾರೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com