ಕ್ಲಬ್ ಹೌಸ್ ನಲ್ಲಿ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಯಡವಟ್ಟು: ಕಾಶ್ಮೀರ ಕುರಿತು ವಿವಾದಾಸ್ಪದ ಹೇಳಿಕೆ!

ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಆರ್ಟಿಕಲ್ 370 ರದ್ದು ಹಾಗೂ ಜಮ್ಮು-ಕಾಶ್ಮೀರದ ಬಗ್ಗೆ ಕ್ಲಬ್ ಹೌಸ್ ನಲ್ಲಿ ನೀಡಿರುವ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. 
ದಿಗ್ವಿಜಯ್ ಸಿಂಗ್
ದಿಗ್ವಿಜಯ್ ಸಿಂಗ್

ನವದೆಹಲಿ: ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಆರ್ಟಿಕಲ್ 370 ರದ್ದು ಹಾಗೂ ಜಮ್ಮು-ಕಾಶ್ಮೀರದ ಬಗ್ಗೆ ಕ್ಲಬ್ ಹೌಸ್ ನಲ್ಲಿ ನೀಡಿರುವ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. 

ಕ್ಲಬ್ ಹೌಸ್ ಎಂಬ ಸಾಮಾಜಿಕ ಜಾಲತಾಣದಲ್ಲಿ ದಿಗ್ವಿಜಯ್ ಸಿಂಗ್, ಆರ್ಟಿಕಲ್ 370 ರದ್ದುಗೊಳಿಸಿರುವುದು ಹಾಗೂ ಜಮ್ಮು-ಕಾಶ್ಮೀರದ ರಾಜ್ಯದ ಸ್ಥಾನವನ್ನು ಕಸಿದು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿರುವುದು ಅತ್ಯಂತ ಬೇಸರದ ನಿರ್ಧಾರ ಎಂದು ಹೇಳಿದ್ದಷ್ಟೇ ಅಲ್ಲದೇ ಮೋದಿ ಸರ್ಕಾರದ ಅವಧಿ ಮುಗಿದು ತಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಈ ವಿಷಯವಾಗಿ ಮರುಪರಿಶೀಲನೆ ನಡೆಸುವುದಾಗಿ ಹೇಳಿರುವುದು ಬಿಜೆಪಿ, ರಾಷ್ಟ್ರೀಯತೆ ಪ್ರತಿಪಾದಿಸುವವರ ಕೆಂಗಣ್ಣಿಗೆ ಗುರಿಯಾಗಿದೆ. 

ದಿಗ್ವಿಜಯ್ ಸಿಂಗ್ ಹೇಳಿಕೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ, ಈ ಹೇಳಿಕೆಯ ಮೂಲಕ ದಿಗ್ವಿಜಯ್ ಸಿಂಗ್ ಭಾರತದ ವಿರುದ್ಧ ಮಾತನಾಡುತ್ತಾರೆ ಹಾಗೂ ಪಾಕಿಸ್ತಾನದ ಜೊತೆ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದೆ. 

ಕ್ಲಬ್ ಹೌಸ್ ನಲ್ಲಿ ದಿಗ್ವಿಜಯ ಸಿಂಗ್ ಯಾರೊಂದಿಗೆ ಚರ್ಚಿಸುತ್ತಿದ್ದರೋ ಅವರು ಪಾಕಿಸ್ತಾನಿ ಮೂಲದ ಪತ್ರಕರ್ತ ಎಂದು ಬಿಜೆಪಿ ಆರೋಪಿಸಿದ್ದು, ಸಿಂಗ್ ಅವರ ಹೇಳಿಕೆ ಬಗ್ಗೆ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಸ್ಪಷ್ಟನೆ ನೀಡಬೇಕೆಂದು ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಆಗ್ರಹಿಸಿದ್ದಾರೆ. 

"ಆರ್ಟಿಕಲ್ 370 ರದ್ದತಿ ಹಾಗೂ ಜಮ್ಮು-ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿರುವುದು ಅತ್ಯಂತ ಬೇಸರದ ಸಂಗತಿ ಕಾಂಗ್ರೆಸ್ ಪಕ್ಷ ಈ ಬಗ್ಗೆ ಖಂಡಿತವಾಗಿಯೂ ಮರುಪರಿಶೀಲನೆ ನಡೆಸಲಿದೆ ಎಂದು ದಿಗ್ವಿಜಯ್ ಸಿಂಗ್ ಹೇಳಿರುವುದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. 

ಬಿಜೆಪಿ ತಮ್ಮ ವಿರುದ್ಧ ಆರೋಪ ಮಾಡಿರುವುದಕ್ಕೆ ಸಿಂಗ್, "ಈ ಅನಕ್ಷರಸ್ಥ ಜನರಿಗೆ ಬಹುಶಃ ಪರಿಗಣಿಸುತ್ತೇವೆ ಹಾಗೂ ಖಂಡಿತವಾಗಿಯೂ ಮಾಡುತ್ತೇವೆ ಎಂಬುದಕ್ಕೆ ವ್ಯತ್ಯಾಸ ಗೊತ್ತಿಲ್ಲ" ಎಂದು ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com