ವಿಶ್ವದ ಅತಿ ದೊಡ್ಡ ಕುಟುಂಬದ ಮುಖ್ಯಸ್ಥ ನಿಧನ: 39 ಪತ್ನಿ, 94 ಮಕ್ಕಳನ್ನು ಅಗಲಿದ ವ್ಯಕ್ತಿ!

ವಿಶ್ವದ ಅತಿ ದೊಡ್ಡ ಕುಟುಂಬದ ಮುಖ್ಯಸ್ಥ ಎಂಬ ಖ್ಯಾತಿಗೆ ಪಾತ್ರರಾಗಿದ್ದ ಮಿಜೋರಾಮ್ ನ ಜಿಯೋನಾ ಚನಾ ಮೃತಪಟ್ಟಿದ್ದು 39 ಪತ್ನಿಯರು, 94 ಮಕ್ಕಳನ್ನು ಅಗಲಿದ್ದಾರೆ. 
ವಿಶ್ವದ ಅತಿ ದೊಡ್ಡ ಕುಟುಂಬದ ಮುಖ್ಯಸ್ಥ (ಸಂಗ್ರಹ ಚಿತ್ರ)
ವಿಶ್ವದ ಅತಿ ದೊಡ್ಡ ಕುಟುಂಬದ ಮುಖ್ಯಸ್ಥ (ಸಂಗ್ರಹ ಚಿತ್ರ)

ಗುವಾಹಟಿ: ವಿಶ್ವದ ಅತಿ ದೊಡ್ಡ ಕುಟುಂಬದ ಮುಖ್ಯಸ್ಥ ಎಂಬ ಖ್ಯಾತಿಗೆ ಪಾತ್ರರಾಗಿದ್ದ ಮಿಜೋರಾಮ್ ನ ಜಿಯೋನಾ ಚನಾ ಮೃತಪಟ್ಟಿದ್ದು 39 ಪತ್ನಿಯರು, 94 ಮಕ್ಕಳನ್ನು ಅಗಲಿದ್ದಾರೆ. 

ಅಧಿಕ ರಕ್ತದೊತ್ತಡ, ಮಧುಮೇಹದ ಸಮಸ್ಯೆ ಎದುರಿಸುತ್ತಿದ್ದ ಜಿಯೋನಾ ಚನಾ (76) ಮಿಜೋರಾಮ್ ನ ರಾಜಧಾನಿ ಐಜಾಲ್ ನಲ್ಲಿರುವ ಟ್ರಿನಿಟಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಜೂನ್ 07 ರಿಂದಲೂ ಜಿಯೋನಾ ಅವರಿಗೆ ಅನಾರೋಗ್ಯ ಕಾಡುತ್ತಿತ್ತು. ಆಹಾರ ಸೇವಿಸುವುದಕ್ಕೆ ಸಾಧ್ಯವಾಗದ ಕಾರಣ ಜೂ.11 ರಿಂದ ಪ್ರಜ್ಞೆಯಿಲ್ಲದ ಸ್ಥಿತಿಗೆ ತಲುಪಿದ್ದರು.

ಬಕ್ತಾಂಗ್ ನಲ್ಲಿದ್ದ ಜಿಯೋನಾ ಅವರ ನಿವಾಸಕ್ಕೇ ಕೆಲವು ವೈದ್ಯರು ಬಂದು ತಪಾಸಣೆ ನಡೆಸಿದ್ದರು. ರಕ್ತದ ಅಗತ್ಯತೆ ಇದ್ದ ಕಾರಣ ರಕ್ತವನ್ನೂ ನೀಡಲಾಗಿತ್ತು. ಆದರೆ ಪ್ರಜ್ಞಾಹೀನ ಸ್ಥಿತಿಯಿಂದ ಹೊರಬಾರದ  ಕಾರಣ ಜಿಯೋನಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಗೆ ದಾಖಲಿಸಿದ ಕೆಲವೇ ಕ್ಷಣಗಳಲ್ಲಿ ಅವರು ಮೃತಪಟ್ಟಿದ್ದಾರೆ.

 ಜಿಯೋನಾ ಚನಾ ಪಾವ್ಲ್ ಎಂಬ ಕ್ರೈಸ್ತ ಸಮುದಾಯಕ್ಕೆ ಸೇರಿದ ನಾಯಕರಾಗಿದ್ದು, ಈ ಸಮುದಾಯದಲ್ಲಿ ಪುರುಷರಿಗೆ ಬಹುಪತ್ನಿತ್ವಕ್ಕೆ ಅವಕಾಶವಿದೆ. ಸುಮಾರು 400 ಕುಟುಂಬಗಳು ಈ ಪ್ರದೇಶದಲ್ಲಿ ಈ ಸಮುದಾಯಕ್ಕೆ ಸೇರಿವೆ. 14 ಸೊಸೆಯರು, 33 ಮೊಮ್ಮಕ್ಕಳು, ಜೊತೆಗೆ ತಮ್ಮ ಮೂರನೇ ತಲೆಮಾರಿನ ಒಂದು ಮಗುವನ್ನೂ ಸಹ ಜಿಯೋನಾ ಕಂಡಿದ್ದರು.  

ಗುಡ್ಡಗಳ ನಡುವೆ 100 ಕೋಠಡಿಗಳಿರುವ 4 ಅಂತಸ್ತಿನ ಬೃಹತ್ ಮನೆಯಲ್ಲಿ ಜಿಯೋನಾ ಹಾಗೂ ಆತನ ಕುಟುಂಬ ವಾಸವಿದೆ. 2011 ರಲ್ಲಿ ಜಿಯೋನಾ ಅವರನ್ನು ರಿಪ್ಲೆಸ್ ನ ಬಿಲೀವ್ ಇಟ್ ಆರ್ ನಾಟ್ ಟಾಪ್ 11 ವಿಚಿತ್ರವಾದ ಕಥೆಗಳ ಎಪಿಸೋಡ್ ನಲ್ಲಿ ತೋರಿಸಲಾಗಿತ್ತು. ಜಿಯೋನಾ ಸಾವಿಗೆ ಮಿಜೋರಾಮ್ ನ ಸಿಎಂ ಜೊರಾಮ್ತಂಗ ಸಂತಾಪ ಸೂಚಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com