ಉತ್ತರ ಪ್ರದೇಶ: ಮದ್ಯ ಮಾಫಿಯಾ ಕುರಿತು ವರದಿ ಮಾಡಿದ್ದ ಟಿವಿ ಪತ್ರಕರ್ತ ನಿಗೂಢ ಸಾವು!

ಉತ್ತರ ಪ್ರದೇಶ ಮೂಲದ ಟಿವಿ ಪತ್ರಕರ್ತರೊಬ್ಬರು ಪ್ರತಾಪಘರ್ ಜಿಲ್ಲೆಯಲ್ಲಿ ನಿಗೂಢ ರೀತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಸುಲಭ್ ಶ್ರೀವಾಸ್ತವ
ಸುಲಭ್ ಶ್ರೀವಾಸ್ತವ

ಲಖನೌ: ಉತ್ತರ ಪ್ರದೇಶ ಮೂಲದ ಟಿವಿ ಪತ್ರಕರ್ತರೊಬ್ಬರು ಪ್ರತಾಪಘರ್ ಜಿಲ್ಲೆಯಲ್ಲಿ ನಿಗೂಢ ರೀತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ಎಬಿಪಿ ನ್ಯೂಸ್ ಮತ್ತು ಎಬಿಪಿ ಗಂಗಾದಲ್ಲಿ ಕೆಲಸ ಮಾಡುತ್ತಿದ್ದ ಸುಲಭ್ ಶ್ರೀವಾಸ್ತವ ಹೀಗೆ ನಿಗೂಢವಾಗಿ ಸಾವನ್ನಪ್ಪಿರುವ ಪತ್ರಕರ್ತರಾಗಿದ್ದು ಇವರು ಮೃತಪಡುವ ಒಂದು ದಿನದ ಮುನ್ನ ಜಿಲ್ಲೆಯಲ್ಲಿ ಮದ್ಯ ಮಾಫಿಯಾಗಳ ಕುರಿತು ವರದಿ ಮಾಡಿದ್ದರು. ಆ ನಂತರ ಅವರಿಗೆ ಜೀವ ಬೆದರಿಕೆ ಬಂದಿರುವುದಾಗಿ ಉತ್ತರ ಪ್ರದೇಶ ಪೊಲೀಸರಿಗೆ ಪತ್ರ ಬರೆದಿದ್ದರು

ಶ್ರೀವಾಸ್ತವ ಅವರು ತಮ್ಮ ವರದಿಯನ್ನು ಪ್ರಕಟಿಸಿದ ನಂತರ ಮದ್ಯ ಮಾಫಿಯಾ ದಂಧೆಕೋರರು ಅವರ ಮೇಲೆ ಆಕ್ರೋಶಗೊಂಡಿದ್ದು ಜೀವ ಬೆದರಿಕೆ ಹಾಕಿದ್ದಾರೆ. ನನಗೆ ಅಥವಾ ನನ್ನ ಕುಟುಂಬಕ್ಕೆ ಘಾಸಿ ಮಾಡಲು ಬಯಸುತ್ತಿದ್ದಾರೆ ನಮಗೆ ರಕ್ಷಣೆ ನೀಡಿ ಎಂದು ಶ್ರೀವಾಸ್ತವ ಪೋಲೀಸರಿಗೆ ಬರೆದ ಪತ್ರದಲ್ಲಿ ಕೇಳಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಬೈಕ್ ಅಪಘಾತದಲ್ಲಿ ಸಾವು: ಪೋಲೀಸರ ಹೇಳಿಕೆ

ಟಿವಿ ಪತ್ರಕರ್ತ ಸುಲಭ್ ಶ್ರೀವಾಸ್ತವ ಬೈಕ್ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ಪ್ರತಾಪಘರ್ ಪೋಲೀಸರು ಹೇಳಿದ್ದಾರೆ.

"ಶ್ರೀವಾಸ್ತವ ಅವರು ಭಾನುವಾರ ರಾತ್ರಿ 11 ಗಂಟೆ ಸುಮಾರಿಗೆ ಕೆಲಸ ಮುಗಿಸಿದ ನಂತರ ತಮ್ಮ ಬೈಕ್ ನಲ್ಲಿ ಹಿಂದಿರುಗುತ್ತಿದ್ದರು. ಅವರು ತಮ್ಮ ಬೈಕ್ ಅನ್ನು ಇಟ್ಟಿಗೆ ಗೂಡುಗಳ ಸಮೀಪ ಚಲಾಯಿಸುತ್ತಿದ್ದಾಗ ಬಿದ್ದಿದ್ದಾರೆ. ಆ ವೇಳೆ ಅಲ್ಲಿದ್ದ ಕೆಲ ಕಾರ್ಮಿಕರು ಅವರನ್ನು ಮೇಲಕ್ಕೆತ್ತಿ ನಂತರ ಅವರ ಫೋನ್ ಬಳಸಿ ಸ್ನೇಹಿತರಿಗೆ ಕರೆ ಮಾಡಿದರು.

"ಅವರನ್ನು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ವೈದ್ಯರು ಪತ್ರಕರ್ತ ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದಾರೆ" ಎಂದು ಪ್ರತಾಪಘರ್ ಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಶ್ರೀವಾಸ್ತವ ಅವರ "ಬೈಕು ರಸ್ತೆಯ ಹ್ಯಾಂಡ್‌ಪಂಪ್‌ಗೆ ಡಿಕ್ಕಿ ಹೊಡೆದ ನಂತರ" ಬಿದ್ದಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ವಿಷಯದಲ್ಲಿ ಅವರು ಇತರ ದೃಷ್ಟಿಕೋನದಿಂಡಲೂ ಪರಿಶೀಲಿಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಸರ್ಕಾರವನ್ನು ಟೀಕಿಸಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ, "ಮದ್ಯ ಮಾಫಿಯಾವು ಅಲಿಘರ್ ನಿಂದ ಪ್ರತಾಪಘರ್ ವರೆಗೆ ಹತ್ಯೆಯ ಕೈಚಾಚಿದೆ. ಆದರೆ ಉತ್ತರ ಪ್ರದೇಶ ಸರ್ಕಾರ ಮೌನವಾಗಿದೆ" ಎಂದು ಹೇಳಿದ್ದಾರೆ.

"ಜಂಗಲ್ ರಾಜ್" ಅನ್ನು ಪೋಷಿಸುವ ಉತ್ತರ ಪ್ರದೇಶ ಸರ್ಕಾರದಲ್ಲಿ ಪತ್ರಕರ್ತ ಸುಲಭ್ ಶ್ರೀವಾಸ್ತವ ಅವರ ಕುಟುಂಬ ಸದಸ್ಯರ ಕಣ್ಣೀರಿಗೆ ಏನಾದರೂ ಉತ್ತರವಿದೆಯೇ ಎಂದು ಅವರು ಟ್ವೀಟ್ ನಲ್ಲಿ ಕೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com