ಎರಡೂ ಅಲೆಗಳಲ್ಲಿ 1-20 ವಯಸ್ಸಿನ ಶೇ.12 ಮಂದಿಗಷ್ಟೇ ಕೋವಿಡ್-19 ಸೋಂಕು: ಕೇಂದ್ರ 

ಎರಡೂ ಅಲೆಗಳಲ್ಲಿ 1-20 ವಯಸ್ಸಿನವ ಶೇ.12 ಮಂದಿಗಿಂತ ಕಡಿಮೆ ಜನರಲ್ಲಿ ಕೊರೋನಾ ಸೋಂಕು ವರದಿಯಾಗಿದೆ ಎಂದು  ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.

Published: 15th June 2021 09:29 PM  |   Last Updated: 15th June 2021 09:29 PM   |  A+A-


A vegetable vendor receives a dose of COVID-19 vaccine. (Photo | PTI)

ಕೋವಿಡ್-19 ಲಸಿಕೆ ಪಡೆಯುತ್ತಿರುವ ತರಕಾರಿ ಮಾರಾಟಗಾರ (ಸಂಗ್ರಹ ಚಿತ್ರ)

Posted By : Srinivas Rao BV
Source : The New Indian Express

ನವದೆಹಲಿ: ಕೋವಿಡ್-19 ನ ಎರಡನೇ ಅಲೆಯಲ್ಲಿ ಮಕ್ಕಳು ಹಾಗೂ ಯುವಕರಿಗೆ ಸೋಂಕು ಅತಿ ಹೆಚ್ಚು ಬಾಧಿಸಿದೆ ಎಂಬ ಊಹೆಗಳನ್ನು ತಳ್ಳಿಹಾಕಿರುವ ಕೇಂದ್ರ ಆರೋಗ್ಯ ಸಚಿವಾಲಯ ಎರಡೂ ಅಲೆಗಳಲ್ಲಿ 1-20 ವಯಸ್ಸಿನವ ಶೇ.12 ಮಂದಿಗಿಂತ ಕಡಿಮೆ ಜನರಲ್ಲಿ ಕೊರೋನಾ ಸೋಂಕು ವರದಿಯಾಗಿದೆ ಎಂದು ಹೇಳಿದೆ.

ಎರಡನೇ ಅಲೆಯಲ್ಲಿ 1-20 ವರ್ಷದ ಶೇ.11.62 ಮಂದಿಗೆ ಸೋಂಕು ತಗುಲಿದ್ದರೆ (ಮಾರ್ಚ್ 15- ಮೇ 25 ವರೆಗೆ) ಮೊದಲ ಅಲೆಯಲ್ಲಿ (ಜುಲೈ 1-ಡಿಸೆಂಬರ್-31) ವರೆಗೆ ಇದೇ ವಯಸ್ಸಿನ ಶೇ.11.31 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಎರಡೂ ಅಲೆಯಲ್ಲಿ ಈ ವಯಸ್ಸಿನ ಗುಂಪಿನ ಜನರಿಗೆ ಸೋಂಕು ತಗುಲಿರುವ ಪ್ರಮಾಣದಲ್ಲಿ ಹೆಚ್ಚಿನ ಅಂತರವಿಲ್ಲ ಎಂದು ಸರ್ಕಾರ ಅಂಕಿ-ಅಂಶ ಸಹಿತವಾಗಿ ಮಾಹಿತಿ ನೀಡಿದೆ.

ಸರ್ಕಾರಿ ಅಂಕಿ-ಅಂಶಗಳ ಪ್ರಕಾರ 21-50 ವಯಸ್ಸಿನವರೇ ಎರಡೂ ಅಲೆಗಳಲ್ಲಿ ಅತಿ ಹೆಚ್ಚು ಬಾಧಿತರು ಎಂದು ತಿಳಿದುಬಂದಿದ್ದು ಈ ವಯಸ್ಸಿನ ಶೇ.59.74 ರಷ್ಟು ಮಂದಿಗೆ ಮೊದಲ ಅಲೆಯಲ್ಲಿ ಸೋಂಕು ತಗುಲಿತ್ತು, ಎರಡನೇ ಅಲೆಯಲ್ಲಿ ಇದೇ ವಯಸ್ಸಿನ ಶೇ.62.45 ರಷ್ಟು ಮಂದಿಗೆ ಸೋಂಕು ತಗುಲಿದೆ. 61 ರ ವಯಸ್ಸಿನ ಮೇಲ್ಪಟ್ಟ ಜನರಲ್ಲಿ ಶೇ.13.89 ರಷ್ಟು ಮಂದಿಗೆ ಮೊದಲ ಅಲೆಯಲ್ಲಿ ಸೋಂಕು ಬಾಧಿಸಿದ್ದರೆ ಶೇ.12.58 ರಷ್ಟು ಮಂದಿಗೆ ಎರಡನೇ ಅಲೆಯಲ್ಲಿ ಕೊರೋನಾ ಸೋಂಕು ತಗುಲಿದೆ.

ಮೊದಲ ಹಾಗೂ ಎರಡನೇ ಅಲೆಯಲ್ಲಿ ಸೋಂಕಿಗೆ ಗುರಿಯಾದವರ ವಯಸ್ಸಿನ ಅಂಕಿ-ಅಂಶಗಳನ್ನು ವಿಶ್ಲೇಷಿಸಿರುವ ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್, 1-10 ವರ್ಷದ ಶೇ.3.28 ರಷ್ಟು ಮಂದಿಗೆ ಮೊದಲ ಅಲೆಯಲ್ಲಿ ಕೊರೋನಾ ಬಂದಿತ್ತು, ಎರಡನೇ ಅಲೆಯಲ್ಲಿ ಈ ವಿಭಾಗದ ಶೇ.3.05 ಮಂದಿಗೆ ಕೊರೋನಾ ಬಂದಿದೆ ಎಂದು ಹೇಳಿದ್ದಾರೆ.

ಇನ್ನು 11-20 ವಯಸ್ಸಿನ ಶೇ.8.03 ಮಂದಿ ಮೊದಲ ಅಲೆಯಲ್ಲಿ ಕೊರೋನಾ ಪೀಡಿತರಾಗಿದ್ದರೆ, ಎರಡನೇ ಅಲೆಯಲ್ಲಿ ಶೇ.8.57 ರಷ್ಟು ಮಂದಿ ಕೊರೋನಾ ಪೀಡಿತರಾಗಿದ್ದಾರೆ.

ಮೂರನೇ ಅಲೆಯಲ್ಲಿ ಮಕ್ಕಳು ಅತಿ ಹೆಚ್ಚು ಕೊರೋನಾ ಸೋಂಕಿಗೆ ಗುರಿಯಾಗಲಿದ್ದಾರೆ ಎಂಬ ಭೀತಿಯ ಬಗ್ಗೆ ಮಾಹಿತಿ ನೀಡಿರುವ ಲವ್ ಅಗರ್ವಾಲ್, ಇದಕ್ಕೆ ಯಾವುದೇ ಸೂಕ್ತ ಸಾಕ್ಷ್ಯಾಧಾರಗಳೂ ಇಲ್ಲ ಎಂದು ಹೇಳಿದ್ದಾರೆ. ಆದರೆ ಎಲ್ಲಾ ವಯಸ್ಸಿನವರೂ ಮೂರನೇ ಅಲೆಯ ಬಗ್ಗೆ ಎಚ್ಚರದಿಂದ ಇರಬೇಕೆಂದು ಹೇಳಿದ್ದಾರೆ. ಇನ್ನು ದೇಶದಲ್ಲಿ ಕೋವಿಡ್-19 ಪರಿಸ್ಥಿತಿ ಸುಧಾರಣೆಯಾಗುತ್ತಿದ್ದು, ದಿನನಿತ್ಯದ ಪ್ರಕರಣಗಳಲ್ಲಿ ಶೇ.85 ರಷ್ಟು ಇಳಿಕೆ ಕಂಡಿದೆ. 

ಮೇ.10 ರಂದು ದೇಶಾದ್ಯಂತ ವರದಿಯಾಗಿದ್ದ ಅತಿ ಹೆಚ್ಚು ಕೊರೋನಾ ಪ್ರಕರಣಗಳ ಪೈಕಿ ಸಕ್ರಿಯ ಪ್ರಕರಣಗಳಲ್ಲಿ ಶೇ.75.6 ರಷ್ಟು ಕುಸಿತ ಕಂಡಿದೆ ಎಂದು ಸರ್ಕಾರ ಹೇಳಿದೆ.


Stay up to date on all the latest ರಾಷ್ಟ್ರೀಯ news
Poll
Yediyurappa

ಕರ್ನಾಟಕ ಸಿಎಂ ಆಗಿ ಬಿ.ಎಸ್. ಯಡಿಯೂರಪ್ಪ ನಿರ್ಗಮನವು ರಾಜ್ಯದಲ್ಲಿ ಬಿಜೆಪಿಯ ಚುನಾವಣಾ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆಯೇ?


Result
ಹೌದು
ಇಲ್ಲ
flipboard facebook twitter whatsapp