2020 ದೆಹಲಿ ಗಲಭೆ: ಜೆಎನ್ ಯು, ಜಾಮಿಯಾ ವಿದ್ಯಾರ್ಥಿ ಹೋರಾಟಗಾರರ ತಕ್ಷಣದ ಬಿಡುಗಡೆಗೆ ಕೋರ್ಟ್ ಆದೇಶ!
2020ರಲ್ಲಿ ನಡೆದಿದ್ದ ದೆಹಲಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿದ್ದ ಜೆಎನ್ ಯು, ಜಾಮಿಯಾ ವಿದ್ಯಾರ್ಥಿ ಹೋರಾಟಗಾರರನ್ನು ಕೂಡಲೇ ಬಿಡುಗಡೆ ಮಾಡುವಂತೆ ದೆಹಲಿ ಕೋರ್ಟ್ ಆದೇಶ ನೀಡಿದೆ.
Published: 17th June 2021 01:50 PM | Last Updated: 17th June 2021 01:54 PM | A+A A-

ನತಾಶಾ ನರ್ವಾಲ್ ಮತ್ತು ದೇವಂಗನಾ ಕಲಿತಾ
ನವದೆಹಲಿ: 2020ರಲ್ಲಿ ನಡೆದಿದ್ದ ದೆಹಲಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿದ್ದ ಜೆಎನ್ ಯು, ಜಾಮಿಯಾ ವಿದ್ಯಾರ್ಥಿ ಹೋರಾಟಗಾರರನ್ನು ಕೂಡಲೇ ಬಿಡುಗಡೆ ಮಾಡುವಂತೆ ದೆಹಲಿ ಕೋರ್ಟ್ ಆದೇಶ ನೀಡಿದೆ.
ಕಳೆದ ವರ್ಷದ ಫೆಬ್ರುವರಿಯಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದ್ದ ಜವಾಹರ್‌ಲಾಲ್ ನೆಹರು ವಿಶ್ವವಿದ್ಯಾಲಯ (ಜೆಎನ್‌ಯು) ವಿದ್ಯಾರ್ಥಿಗಳಾದ ನತಾಶಾ ನರ್ವಾಲ್ ಮತ್ತು ದೇವಂಗನಾ ಕಲಿತಾ ಮತ್ತು ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾಲಯದ ವಿದ್ಯಾರ್ಥಿ ಆಸಿಫ್ ಇಕ್ಬಾಲ್ ತನ್ಹಾ ಅವರಿಗೆ ದೆಹಲಿ ಹೈಕೋರ್ಟ್ ಮಂಗಳವಾರ ಜಾಮೀನು ನೀಡಿತ್ತು. ಆದರೆ ಜಾಮೀನು ನೀಡಿ 2 ದಿನಗಳಾದರೂ ಬಿಡುಗಡೆಯಾಗದ ಹಿನ್ನಲೆಯಲ್ಲಿ ದೆಹಲಿ ಕೋರ್ಟ್ ಕೂಡಲೇ ಅವರನ್ನು ಬಿಡುಗಡೆ ಮಾಡುವಂತೆ ಆದೇಶಿಸಿದೆ.
ಇದನ್ನೂ ಓದಿ: ಉಮರ್ ಖಾಲಿದ್ ಗೆ ಕೊರೋನಾ ಪಾಸಿಟಿವ್, ತಿಹಾರ್ ಜೈಲಿನಲ್ಲಿಯೇ ಕ್ವಾರಂಟೈನ್
ಮೂವರು ವಿದ್ಯಾರ್ಥಿ ಕಾರ್ಯಕರ್ತರನ್ನು ಅವರ ವಿಳಾಸಗಳು ಮತ್ತು ಜಾಮೀನುಗಳ ಪರಿಶೀಲನಾ ವಿವರಗಳ ಕೊರತೆಯನ್ನು ಉಲ್ಲೇಖಿಸಿ ಸಮಯಕ್ಕೆ ಸರಿಯಾಗಿ ಜೈಲಿನಿಂದ ಬಿಡುಗಡೆ ಮಾಡಲಾಗಿರಲಿಲ್ಲ. ಆದರೆ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಕೋರ್ಟ್ ಕೂಡಲೇ ಅವರನ್ನು ಬಿಡುಗಡೆ ಮಾಡುವಂತೆ ಆದೇಶ ನೀಡಿದೆ.
ಈ ಹಿಂದೆ ಈ ಮೂವರು ವಿದ್ಯಾರ್ಥಿಗಳನ್ನು ಕಳೆದ ವರ್ಷ ಮೇ ತಿಂಗಳಲ್ಲಿ ‘ಕಠಿಣ ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ‘ ಅಡಿ ಪೊಲೀಸರು ಬಂಧಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳಿಗೆ ಜಾಮೀನು ನೀಡಲು ವಿಚಾರಣಾ ನ್ಯಾಯಾಲಯ ನಿರಾಕರಿಸಿತ್ತು. ಈ ಆದೇಶದ ವಿರುದ್ಧ ದೆಹಲಿ ಹೈಕೋರ್ಟ್‌ನಲ್ಲಿ ಆರೋಪಿಗಳು ಮೇಲ್ಮನವಿ ಸಲ್ಲಿಸಿದ್ದರು. ಈ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸಿದ್ಧಾರ್ಥ್ ಮೃದುಲ್ ಮತ್ತು ಅನೂಪ್ ಜೈರಾಮ್ ಬಂಭಾನಿ ಅವರನ್ನೊಳಗೊಂಡ ನ್ಯಾಯಪೀಠ, ಮೂವರು ಆರೋಪಿಗಳಿಗೆ ಜಾಮೀನು ನೀಡಿತ್ತು.
ಇದನ್ನೂ ಓದಿ: ದೆಹಲಿ ಗಲಭೆ: ಉಮರ್ ಖಾಲಿದ್, ತಾಹಿರ್ ಹುಸೇನ್ ಇತರರಿಂದ ಸಂಚು ಮೇಲ್ನೋಟಕ್ಕೆ ಕಂಡಿದೆ: ಕೋರ್ಟ್
ಜಾಮೀನು ನೀಡುವ ವೇಳೆ ನ್ಯಾಯಾಲಯ, ಪಿಂಜ್ರಾ ಟೊಡ್ ಸಂಘಟನೆಯ ಕಾರ್ಯಕರ್ತರಾಗಿರುವ ನರ್ವಾಲಾ ಮತ್ತು ಕಾಳಿತಾ ಮತ್ತು ತನ್ಹಾ ಅವರಿಗೆ ತಮ್ಮ ಪಾಸ್‌ಪೋರ್ಟ್‌ಗಳನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ನಿರ್ದೇಶನ ನೀಡಿತು. ಜತೆಗೆ, ಸಾಕ್ಷ್ಯಗಳನ್ನು ಪ್ರಚೋದಿಸಬಾರದು ಮತ್ತು ನಾಶ ಮಾಡಬಾರದು ಎಂದು ಸೂಚಿಸಿತು.
ಪೌರತ್ವ ತಿದ್ದುಪಡಿ ಕಾಯ್ದೆಯನ್ನು (ಸಿಎಎ) ಬೆಂಬಲಿಸುವವರು ಮತ್ತು ವಿರೋಧಿಸುವವರ ನಡುವೆ ಫೆಬ್ರುವರಿ 24ರಂದು ನಡೆದ ಘರ್ಷಣೆ ಹಿಂಸಾರೂಪ ಪಡೆದಿತ್ತು. ಹಿಂಸಾಚಾರದಲ್ಲಿ 53 ಮಂದಿ ಸಾವಿಗೀಡಾಗಿದ್ದರು ಮತ್ತು 200 ಮಂದಿ ಗಾಯಗೊಂಡಿದ್ದರು.