ಮಾತುಕತೆಗಾಗಿ ಮೆಹಬೂಬಾರನ್ನು ಕೇಂದ್ರ ಸರ್ಕಾರ ಕರೆದ ನಂತರ ಪಿಡಿಪಿ ಮುಖಂಡ ಬಂಧನದಿಂದ ಬಿಡುಗಡೆ
ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮತ್ತು ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಅವರನ್ನು ಮಾತುಕತೆಗಾಗಿ ಕೇಂದ್ರ ಸರ್ಕಾರ ಕರೆದ ನಂತರ ಸುಮಾರು ಆರು ತಿಂಗಳುಗಳಿಂದ ಬಂಧನದಲ್ಲಿ ಪಿಡಿಪಿ ಮುಖಂಡ ಸರ್ತಾಜ್ ಮದ್ನಿ ಅವರನ್ನು ಶನಿವಾರ ಬಿಡುಗಡೆ ಮಾಡಲಾಗಿದೆ.
Published: 19th June 2021 04:37 PM | Last Updated: 19th June 2021 04:39 PM | A+A A-

ಮೆಹಬೂಬಾ ಮುಫ್ತಿ
ಶ್ರೀನಗರ: ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮತ್ತು ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಅವರನ್ನು ಮಾತುಕತೆಗಾಗಿ ಕೇಂದ್ರ ಸರ್ಕಾರ ಕರೆದ ನಂತರ ಸುಮಾರು ಆರು ತಿಂಗಳುಗಳಿಂದ ಬಂಧನದಲ್ಲಿ ಪಿಡಿಪಿ ಮುಖಂಡ ಸರ್ತಾಜ್ ಮದ್ನಿ ಅವರನ್ನು ಶನಿವಾರ ಬಿಡುಗಡೆ ಮಾಡಲಾಗಿದೆ.
ಪಿಡಿಪಿಯ ಮಾಜಿ ಉಪಾಧ್ಯಕ್ಷ ಹಾಗೂ ಮೆಹಬೂಬಾ ಮುಫ್ತಿ ಅವರ ಸೋದರ ಮಾವನಾಗಿರುವ ಸರ್ಜಾತ್ ಮದ್ನಿ ಅವರನ್ನು ಜಮ್ಮು-ಕಾಶ್ಮೀರದ ಡಿಡಿಸಿ ಚುನಾವಣೆ ಮತ ಎಣಿಕೆಗೂ ಒಂದು ದಿನ ಮುನ್ನ ಕಳೆದ ವರ್ಷ ಡಿಸೆಂಬರ್ 21 ರಂದು ಪೊಲೀಸರು ಬಂಧಿಸಿದ್ದರು.
2019 ಆಗಸ್ಟ್ 5 ರಂದು ಸಂವಿಧಾನದ 370ನೇ ರದ್ಧುಗೊಳಿಸಿ ಜಮ್ಮು-ಕಾಶ್ಮೀರ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ವಿಭಜಿಸಿದ ನಂತರ ಮದ್ನಿ ಸೇರಿದಂತೆ ಹಲವು ಮುಂಚೂಣಿ ನಾಯಕರನ್ನು ಬಂಧಿಸಲಾಗಿತ್ತು.
ಮೆಹಬೂಬಾ ಮುಫ್ತಿ, ಫಾರೂಖ್ ಅಬ್ದುಲ್ಲಾ ಮತ್ತು ಒಮರ್ ಅಬ್ದುಲ್ಲಾ, ಮದ್ನಿ ಸೇರಿದಂತೆ ಒಂದು ಡಜನ್ ನಾಯಕರ ವಿರುದ್ಧ ಸಾರ್ವಜನಿಕ ಸುರಕ್ಷತಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು. ಆದಾಗ್ಯೂ, ಕಳೆದ ವರ್ಷ ಜೂನ್ ನಲ್ಲಿ ಸಾರ್ವಜನಿಕ ಸುರಕ್ಷತಾ ಕಾಯ್ದೆಯಡಿ ಮದ್ನಿ ಬಂಧನವನ್ನು ರದ್ದುಪಡಿಸಲಾಗಿತ್ತು.
ಜೂನ್ 24 ರಂದು ಜಮ್ಮು- ಕಾಶ್ಮೀರ ಕುರಿತಂತೆ ಮಾತುಕತೆಗಾಗಿ ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಅವರನ್ನು ಮಾತುಕತೆಗಾಗಿ ಕೇಂದ್ರ ಸರ್ಕಾರ ನವದೆಹಲಿಗೆ ಕರೆದ ನಂತರ ಮದ್ನಿಯನ್ನು ಬಂಧನದಿಂದ ಬಿಡುಗಡೆ ಮಾಡಲಾಗಿದೆ.
ಜಮ್ಮು-ಕಾಶ್ಮೀರಕ್ಕೆ ಮತ್ತೆ ರಾಜ್ಯ ಸ್ಥಾನಮಾನ, ಚುನಾವಣೆ ಮತ್ತಿತರ ವಿಚಾರ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನವದೆಹಲಿಯಲ್ಲಿ ಜೂನ್ 24 ರಂದು ಜಮ್ಮು ಮತ್ತು ಕಾಶ್ಮೀರದ ರಾಜಕೀಯ ಮುಖಂಡರನ್ನೊಳಗೊಂಡ ಸರ್ವ ಪಕ್ಷ ಸಭೆ ನಡೆಯುವ ಸಾಧ್ಯತೆಯಿರುವುದಾಗಿ ಮೂಲಗಳು ಹೇಳಿವೆ.