'ಸರ್ಕಾರಿ ಯೋಜನೆಗಳ ಲಾಭ ಬೇಕೆ? ಎರಡೇ ಮಕ್ಕಳ ನಿಯಮ ಪಾಲಿಸಿ': ಅಸ್ಸಾಂನಲ್ಲಿ ಶೀಘ್ರ ಜನಸಂಖ್ಯಾ ನೀತಿ ಜಾರಿ!
ಸರ್ಕಾರಿ ಯೋಜನೆಗಳ ಲಾಭ ಪಡೆಯಬೇಕು ಎಂದರೆ ಇನ್ನು ಮುಂದೆ ಸರ್ಕಾರದ ಜನಸಂಖ್ಯಾ ನೀತಿಯನ್ನು ಎಲ್ಲರೂ ಕಡ್ಡಾಯವಾಗಿ ಪಾಲಿಸಬೇಕು ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.
Published: 19th June 2021 04:23 PM | Last Updated: 19th June 2021 05:25 PM | A+A A-

ಅಸ್ಸಾಂ ಜನಸಂಖ್ಯಾ ನೀತಿ
ಗುವಾಹತಿ: ಸರ್ಕಾರಿ ಯೋಜನೆಗಳ ಲಾಭ ಪಡೆಯಬೇಕು ಎಂದರೆ ಇನ್ನು ಮುಂದೆ ಸರ್ಕಾರದ ಜನಸಂಖ್ಯಾ ನೀತಿಯನ್ನು ಎಲ್ಲರೂ ಕಡ್ಡಾಯವಾಗಿ ಪಾಲಿಸಬೇಕು ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.
ಹೌದು.. ದೇಶದಲ್ಲಿ ಜನಸಂಖ್ಯಾ ಸ್ಫೋಟ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಸಾಕಷ್ಟು ಕಾರ್ಯಕ್ರಮಗಳನ್ನು ಜಾರಿಗೆ ತರುತ್ತಿದೆ. ಇದೇ ನಿಟ್ಟಿನಲ್ಲಿ ಇದೀಗ ಅಸ್ಸಾಂ ಸರ್ಕಾರ ಕೂಡ ಜನಸಂಖ್ಯಾ ನೀತಿಯನ್ನು ಜಾರಿಗೆ ತರಲು ಮುಂದಾಗಿದ್ದು, ರಾಜ್ಯ ಸರ್ಕಾರದ ಯೋಜನೆಗಳ ಲಾಭ ಪಡೆಯಲು ಇನ್ನು ಮುಂದೆ 2 ಮಕ್ಕಳ ಕಡ್ಡಾಯವಿರುವ ಜನಸಂಖ್ಯಾ ನೀತಿಯನ್ನು ಪಾಲಿಸಬೇಕು ಎಂದು ಹೇಳಿದ್ದಾರೆ.
CM @himantabiswa says that population policy to be followed while implementing govt schemes. Two-child norms to be made mandatory for availing benefits of these schemes except for SC, ST and Tea Tribe people.
— atanu bhuyan (@atanubhuyan) June 18, 2021
ಅಸ್ಸಾಂ ಸರ್ಕಾರ ಶೀಘ್ರದಲ್ಲೇ ಜನಸಂಖ್ಯಾ ನೀತಿಯನ್ನು ಜಾರಿಗೆ ತರಲಿದ್ದು, ಸರ್ಕಾರದ ಯೋಜನೆಗಳನ್ನು ಜಾರಿಗೆ ತರುವಾಗ ರಾಜ್ಯವು ಜನಸಂಖ್ಯಾ ನೀತಿಯನ್ನು ಕಟ್ಟುನಿಟ್ಟಾಗಿ ಪಾಲಿಸುತ್ತದೆ. ಸರ್ಕಾರಿ ಯೋಜನೆಗಳ ಲಾಭ ಪಡೆಯಲು ಇಬ್ಬರು ಮಕ್ಕಳ ನಿಯಮವನ್ನು ಕಡ್ಡಾಯಗೊಳಿಸಲಾಗುವುದು. ಆದರೆ, ಪರಿಶಿಷ್ಟ ಜಾತಿ (ಎಸ್‌ಸಿ), ಪರಿಶಿಷ್ಟ ಪಂಗಡ (ಎಸ್‌ಟಿ) ಮತ್ತು ಚಹಾ ಬುಡಕಟ್ಟು ಜನಾಂಗದವರಿಗೆ ಎರಡು ಮಕ್ಕಳ ಮಾನದಂಡಗಳಲ್ಲಿ ರಾಜ್ಯ ಸರ್ಕಾರದ ಯೋಜನೆಗಳ ಲಾಭ ಪಡೆಯಲು ವಿನಾಯಿತಿ ನೀಡಲಾಗುತ್ತದೆ ಎಂದು ಹೇಳಿದರು.
ಸರ್ಕಾರಿ ಉದ್ಯೋಗಗಳಿಗೆ ಅರ್ಹರಲ್ಲ
"ಅಸ್ಸಾಂನ ಜನಸಂಖ್ಯೆ ಮತ್ತು ಮಹಿಳಾ ಸಬಲೀಕರಣ ನೀತಿ" ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ವ್ಯಕ್ತಿಗಳು ಸರ್ಕಾರಿ ಉದ್ಯೋಗಗಳಿಗೆ ಅರ್ಹರಾಗುವುದಿಲ್ಲ ಮತ್ತು ಅವರು ಪಂಚಾಯತ್ ಮತ್ತು ನಾಗರಿಕ ಸಂಸ್ಥೆಗಳ ಸದಸ್ಯರಾಗಲೂ ಸಾಧ್ಯವಿಲ್ಲ. ಅಂತಹ ಕುಟುಂಬಗಳನ್ನು ಸರ್ಕಾರದ ಯೋಜನೆಗಳ ಅಡಿಯಲ್ಲಿ ವಿವಿಧ ಪ್ರಯೋಜನಗಳಿಗಾಗಿ ಪರಿಗಣಿಸಲಾಗುವುದಿಲ್ಲ. ಈ ನೀತಿ ಜನವರಿ 1 ರಿಂದ ಜಾರಿಗೆ ಬಂದಿದೆ.
ಕಳೆದ ವಾರ, ಸಣ್ಣ ಕುಟುಂಬಗಳನ್ನು ಹೊಂದುವಂತೆ ಅಸ್ಸಾಂಗೆ ವಲಸೆ ಬಂದ ಮುಸ್ಲಿಮರಿಗೆ ಶರ್ಮಾ ಮನವಿ ಮಾಡಿದ್ದರು. ರಾಜ್ಯದ ಜನಸಂಖ್ಯೆಯು ನಿರಂತರವಾಗಿ ಸ್ಫೋಟಗೊಳ್ಳುತ್ತಿದ್ದರೆ, ವಾಸಿಸಲು ಸ್ಥಳಾವಕಾಶದ ಬಗ್ಗೆ ಘರ್ಷಣೆಗಳು ಉಂಟಾಗುತ್ತವೆ ಮತ್ತು ಕಾಮಾಕ್ಯ ದೇವಸ್ಥಾನ ಜಾಗ ಅತಿಕ್ರಮಣ ಮತ್ತು ಭೂಮಿ ಒತ್ತುವರಿ ತೆರವು ಮಾಡುವಂತೆ ಎಚ್ಚರಿಸಿದ್ದರು.
ಟಿಎಫ್‌ಆರ್ ಕುಸಿತ: ಕಾಂಗ್ರೆಸ್
ಇದೇ ವೇಳೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಕೈಗೊಂಡ ಮತ್ತು 2020 ರ ಡಿಸೆಂಬರ್‌ನಲ್ಲಿ ಬಿಡುಗಡೆಯಾದ ಇತ್ತೀಚಿನ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ಡೇಟಾವನ್ನು ಹಂಚಿಕೊಂಡಿದ್ದ ಕಾಂಗ್ರೆಸ್ ಪಕ್ಷ, ಕಳೆದ ಐದು ವರ್ಷಗಳಲ್ಲಿ ಹೆಚ್ಚಿನ ಭಾರತೀಯ ರಾಜ್ಯಗಳಲ್ಲಿ ಒಟ್ಟು ಫಲವತ್ತತೆ ಪ್ರಮಾಣ (ಟಿಎಫ್‌ಆರ್) ಕುಸಿದಿದೆ ಎಂದು ಹೇಳಿದೆ.
ಅದೇ ಸಮೀಕ್ಷೆಯ ಪ್ರಕಾರ, ಅಸ್ಸಾಂನಲ್ಲಿ ಮಹಿಳೆಯರ ಫಲವತ್ತತೆ ಪ್ರಮಾಣವು 2015-16ರಲ್ಲಿ 2.2 ರಿಂದ 2020-21ರಲ್ಲಿ 1.9 ಕ್ಕೆ ಇಳಿದಿದೆ ಮತ್ತು 1.9 2.1 ಕ್ಕಿಂತ ಕಡಿಮೆಯಾಗಿದೆ, ಅಂದರೆ ಅಸ್ಸಾಂನ ಭವಿಷ್ಯದ ಜನಸಂಖ್ಯೆಯು ಪ್ರಸ್ತುತ ಜನಸಂಖ್ಯೆಗಿಂತ ಕಡಿಮೆಯಿರುತ್ತದೆ ಎಂದು ಕಾಂಗ್ರೆಸ್ ಹೇಳಿದೆ.
ಟಿಎಫ್ಆರ್ ಅನ್ನು ಹೆರಿಗೆ ಮಾಡುವುದನ್ನು ಕೊನೆಗೊಳಿಸುವ ಹೊತ್ತಿಗೆ ಮಹಿಳೆಗೆ ಜನಿಸುವ ಸರಾಸರಿ ಮಕ್ಕಳ ಸಂಖ್ಯೆಯಾಗಿದೆ.