ದೇಶದ ಹಲವೆಡೆ ಕೋವಿಡ್ ಲಾಕ್ಡೌನ್ ತೆರವು: 3ಟಿ ಸೂತ್ರ, ಲಸಿಕೆ ನಿಯಮ ಅನುಸರಿಸುವಂತೆ ರಾಜ್ಯಗಳಿಗೆ ಕೇಂದ್ರ ಸರ್ಕಾರ ಸೂಚನೆ

ಹಲವು ರಾಜ್ಯಗಳು ಲಾಕ್ಡೌನ್ ತೆರವುಗೊಳಿಸುತ್ತಿದ್ದು, ಇದರಿಂತ ಸೋಂಕು ಹೆಚ್ಚಾಗುವ ಆತಂಕ ಶುರುವಾಗಿದ್ದು, ಈ ಹಿನ್ನೆಲೆಯಲ್ಲಿ ಟೆಸ್ಟ್, ಟ್ರ್ಯಾಕ್, ಟ್ರೀಟ್, ಲಸಿಕೆ ಹಾಗೂ ಕೊರೋನಾ ಮಾರ್ಗಸೂಚಿ ಕಠಿಣವಾಗಿ ಪಾಲನೆ ಮಾಡುವಂತೆ ಎಲ್ಲಾ ರಾಜ್ಯಗಳಿಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಕೋವಿಡ್ ಸೋಂಕು ಇಳಿಕೆಯಾಗುತ್ತಿರುವ ಬೆನ್ನಲ್ಲೇ ಹಲವು ರಾಜ್ಯಗಳು ಲಾಕ್ಡೌನ್ ತೆರವುಗೊಳಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಮಾರುಕಟ್ಟೆ ಹಾಗೂ ಕೆಲವು ಪ್ರದೇಶಗಳಲ್ಲಿ ಹೆಚ್ಚೆಚ್ಚು ಸಂಖ್ಯೆಯಲ್ಲಿ ಜನ ಸೇರುತ್ತಿದ್ದಾರೆ. ಇದರಿಂತ ಸೋಂಕು ಹೆಚ್ಚಾಗುವ ಆತಂಕ ಶುರುವಾಗಿದ್ದು, ಈ ಹಿನ್ನೆಲೆಯಲ್ಲಿ ಟೆಸ್ಟ್, ಟ್ರ್ಯಾಕ್, ಟ್ರೀಟ್, ಲಸಿಕೆ ಹಾಗೂ ಕೊರೋನಾ ಮಾರ್ಗಸೂಚಿ ಕಠಿಣವಾಗಿ ಪಾಲನೆ ಮಾಡುವಂತೆ ಎಲ್ಲಾ ರಾಜ್ಯಗಳಿಗೆ ಕೇಂದ್ರ ಸರ್ಕಾರ ಶನಿವಾರ ಸೂಚನೆ ನೀಡಿದೆ. 

ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲ ಅವರು ಈ ಕುರಿತು ಎಲ್ಲಾ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಮಾತುಕತೆ ನಡೆಸಿ ಸೂಚನೆ ನೀಡಿದ್ದಾರೆಂದು ತಿಳಿದುಬಂದಿದೆ. 

ಪ್ರಸ್ತುತದ ಪರಿಸ್ಥಿತಿಯನ್ನು ಗಮನಿಸಿದರೆ, ಕೊರೋನಾ ಸೋಂಕು ಸರಪಳಿಯನ್ನು ಮುರಿಯುವುದು ಕಷ್ಟಕರವಾಗಿದೆ. ಹೀಗಾಗಿ ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿ ಪ್ರದೇಶಗಳು ಲಸಿಕೆಯನ್ನು ಸಾಧ್ಯವಾದಷ್ಟು ಶೀಘ್ರಗತಿಯಲ್ಲಿ ಹೆಚ್ಚೆಚ್ಚು ಜನರಿಗೆ ನೀಡಬೇಕೆಂದು ತಿಳಿಸಿದ್ದಾರೆಂದು ವರದಿಗಳು ತಿಳಿಸಿವೆ. 

ಕೊರೋನಾ ಎರಡನೇ ಅಲೆಯಲ್ಲಿ ಹಲವು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಸೋಂಕು ಭಾರೀ ಸಂಖ್ಯೆಯಲ್ಲಿ ಏರಿಕೆಯಾಗಿತ್ತು. ಸೋಂಕು ನಿಯಂತ್ರಣಕ್ಕೆ ಸಾಕಷ್ಟು ರಾಜ್ಯಗಳು ನಿರ್ಬಂಧಗಳನ್ನು ಹೇರಿದ್ದವು. ಇದೀಗ ಸೋಂಕು ಇಳಿಕೆಯಾಗಿದ್ದು. ನಿರ್ಬಂಧಗಳನ್ನು ಸಡಿಲಗೊಳಿಸುತ್ತಿವೆ. ಪರಿಸ್ಥಿತಿ ಆಧರಿಸಿ ಆಯಾ ರಾಜ್ಯಗಳು ಲಾಕ್ಡೌನ್ ಹೇರಿಕೆ ಹಾಗೂ ನಿರ್ಬಂಧಗಳನ್ನು ಸಡಿಲಗೊಳಿಸುವ ನಿರ್ಧಾರ ಕೈಗೊಳ್ಳುತ್ತಿವೆ. 

ನಿರ್ಬಂಧಗಳನ್ನು ಸಡಿಲಗೊಳಿಸುವುದಕ್ಕೂ ಮುನ್ನ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳು ಟೆಸ್ಟ್, ಟ್ರ್ಯಾಕ್, ಟ್ರೀಸ್ ಹಾಗೂ ಲಸಿಕೆ, ಕೊರೋನಾ ಮಾರ್ಗಸೂಚಿ ಈ ಐದು ನಿಯಮಗಳನ್ನು ಪರಿಣಾಮಕಾರಿ ರೀತಿಯಲ್ಲಿ ಪಾಲನೆಯಾಗುವಂತೆ ನೋಡಿಕೊಳ್ಳಬೇಕಿದೆ.

ಈ ಸಮಯದಲ್ಲಿ ಮಾಸ್ಕ್ ಧರಿಸುವುದು, ಶುಚಿತ್ವ ಕಾಪಾಡುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮುಚ್ಚಿದ ಪ್ರದೇಶಗಳಲ್ಲಿ ಗಾಳಿಯ ವಾತಾವರಣ ಉತ್ತಮವಾಗಿರುವಂತೆ ನೋಡಿಕೊಳ್ಳುವಂತೆ ಮಾಡಬೇಕು. ಲಾಕ್ಡೌನ್ ನಿಯಮ ಸಡಿಲಗೊಳಿಸುವುದರಿಂದ ಮಾರುಕಟ್ಟೆ ಹಾಗೂ ಇತರೆ ಪ್ರದೇಶಗಳಲ್ಲಿ ಹೆಚ್ಚೆಚ್ಚು ಜನರು ಸೇರುವ ಸಾಧ್ಯತೆಗಳಿರುತ್ತವೆ. ಇಂತಹ ಸಂದರ್ಭದಲ್ಲಿ ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡುವಂತೆ ಮಾಡಬೇಕೆಂದು ಸೂಚಿಸಿದ್ದಾರೆಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com