ಕೋವಿಡ್ ಸಾಂಕ್ರಾಮಿಕದಿಂದ ಕೆಲಸಕ್ಕೆ ಕುತ್ತು: ತನ್ನ 10 ತಿಂಗಳ ಮಗುವನ್ನು 5 ಸಾವಿರ ರೂ. ಗೆ ಮಾರಿದ ತಾಯಿ!

ಮಾರಕ ಕೊರೋನಾ ಸಾಂಕ್ರಾಮಿಕದಿಂದಾಗಿ ಕೆಲಸ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ತಾಯಿಯೊಬ್ಬಳು ತನ್ನ 10 ತಿಂಗಳ ಮಗುವನ್ನು 5 ಸಾವಿರ ರೂಗೆ ಮಾರಾಟ ಮಾಡಿರುವ ವಿದ್ರಾವಕ ಘಟನೆ ಒಡಿಶಾದಲ್ಲಿ ನಡೆದಿದೆ.
ಅಧಿಕಾರಿಗಳ ವಶದಲ್ಲಿರುವ ಮಗು
ಅಧಿಕಾರಿಗಳ ವಶದಲ್ಲಿರುವ ಮಗು

ಭುವನೇಶ್ವರ: ಮಾರಕ ಕೊರೋನಾ ಸಾಂಕ್ರಾಮಿಕದಿಂದಾಗಿ ಕೆಲಸ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ತಾಯಿಯೊಬ್ಬಳು ತನ್ನ 10 ತಿಂಗಳ ಮಗುವನ್ನು 5 ಸಾವಿರ ರೂಗೆ ಮಾರಾಟ ಮಾಡಿರುವ ವಿದ್ರಾವಕ ಘಟನೆ ಒಡಿಶಾದಲ್ಲಿ ನಡೆದಿದೆ.

ಒಡಿಶಾದ ಕೇಂದ್ರಪಾರಾ ಜಿಲ್ಲೆಯಲ್ಲಿ ಭಾನುವಾರ ಈ ಘಟನೆ ಸಂಭವಿಸಿದ್ದು, ರಾಜ್ಕನಿಕಾ ಪೊಲೀಸ್ ವ್ಯಾಪ್ತಿಯ ಮಾಹುರಿಯ ನಿವಾಸಿ ಅರುಂಧತಿ ಎಂಬ 34 ವರ್ಷದ ತಾಯಿ ತನ್ನ ಹೆಣ್ಣು ಮಗುವನ್ನು ಹತ್ತಿರದ ಹಳ್ಳಿಯ ಮಕ್ಕಳಿಲ್ಲದ ದಂಪತಿಗೆ ಮಾರಿದ್ದಾಳೆ ಎಂದು ವರದಿಯಾಗಿದೆ. ವಿಷಯ  ತಿಳಿಯುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿದ ಜಿಲ್ಲಾ ಮಕ್ಕಳ ರಕ್ಷಣಾ ಕಚೇರಿ ಮತ್ತು ಪೊಲೀಸರು ಪರಿಶೀಲನೆ ನಡೆಸಿ ಮಗುವನ್ನು ರಕ್ಷಿಸಿ ಆರೈಕೆ ಕೇಂದ್ರದ ವಶದಲ್ಲಿರಿಸಿಕೊಂಡಿದ್ದಾರೆ.

ಕೋವಿಡ್ ಸಾಂಕ್ರಾಮಿಕದಿಂದಾಗಿ ಅರುಂಧತಿ ಕೆಲಸ ಕಳೆದುಕೊಂಡಿದ್ದರು. ಕೆಲಸವಿಲ್ಲದೇ ಜೀವನ ನಿರ್ವಹಣೆ ಸಾಧ್ಯವಾಗದೇ ಆರ್ಥಿಕ ಸಂಕಷ್ಟದಿಂದಾಗಿ ತಾವು ಈ ಕಠಿಣ ನಿರ್ಧಾರ ತಳೆದಿದ್ದಾಗಿ ಅರುಂಧತಿ ಹೇಳಿಕೊಂಡಿದ್ದಾರೆ. 

ಅರುಂಧತಿ ಸುಮಾರು 11 ವರ್ಷಗಳ ಹಿಂದೆ ಸಮೀರ್ ರೌಲ್ ಎಂಬುವವರನ್ನು ವಿವಾಹವಾಗಿದ್ದರು. ಪತಿ ಕಳೆದ ವರ್ಷ ಅಕೆಯನ್ನು ತೊರೆದು ಹೋಗಿದ್ದ, ನಂತರ ಆಕೆ ತನ್ನ ಹೆಣ್ಣುಮಕ್ಕಳೊಂದಿಗೆ ಮಹೂರಿಯಲ್ಲಿರುವ ತನ್ನ ಹೆತ್ತವರ ಮನೆಗೆ ವಾಪಾಸ್ ಆಗಿದ್ದರು. ಮೂವರು ಹೆಣ್ಣುಮಕ್ಕಳ  ತಾಯಿಯಾದ ಅರುಂಧತಿ ತಮ್ಮದೇ ಗ್ರಾಮದಲ್ಲಿ ಹಲವು ಮನೆಗಳಲ್ಲಿ ಮನೆ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದರು. ಆದರೆ ಕೋವಿಡ್ 2ನೇ ಅಲೆಯಿಂದಾಗಿ ಹೇರಲಾಗಿದ್ದ ಲಾಕ್ ಡೌನ್ ನಿಂದಾಗಿ ಕೆಲಸವಿಲ್ಲದೇ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು. ಮಕ್ಕಳಿಗೆ ಎರಡು  ಹೊತ್ತು ಊಟದ ವ್ಯವಸ್ಥೆ  ಮಾಡಲೂ ಕೂಡ ಪರದಾಡುವಂತಾಗಿತ್ತು. ಹೀಗಾಗಿ ತಮ್ಮ ಮಗುವನ್ನು ಪಕ್ಕದ ಗ್ರಾಮದ ಮಕ್ಕಳಿಲ್ಲದ ದಂಪತಿಗೆ ಮಾರಾಟ ಮಾಡಿ 5 ಸಾವಿರ ರೂ ಪಡೆದಿದ್ದರು.

ಈ ವಿಚಾರ ತಿಳಿದ ಅಧಿಕಾರಿಗಳು ಇದೀಗ ಪರಿಶೀಲನೆ ನಡೆಸಿ ಮಗುವನ್ನು ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ಮಹೂರಿ ಗ್ರಾಮ ಪಂಚಾಯಿತಿಯ ಸರ್ಪಂಚ್ ಮಮತಾ ಮಂಜರಿ ಮಲ್ಲಿಕ್ ಅವರು, 'ಬಡತನ ಮತ್ತು ಹಸಿವಿನ ನಿರ್ವಹಣೆಗಾಗಿ ಆಕೆ ತನ್ನ ಶಿಶುವನ್ನು ಮಾರಾಟ  ಮಾಡಿದ್ದಾಳೆ ಎಂದು ಹೇಳಿದ್ದಾರೆ. ಪ್ರಸ್ತುತ ಮಗುವನ್ನು ವಶಕ್ಕೆ ಪಡೆದಿರುವ ಅಧಿಕಾರಿಗಳು ಕೋರಾ ಗ್ರಾಮದಲ್ಲಿರುವ ಸರ್ಕಾರಿ ಮಕ್ಕಳ ಆರೈಕೆ ಸಂಸ್ಥೆಗೆ (ಸಿಸಿಐ) ಸ್ಥಳಾಂತರಿಸಿದ್ದಾರೆ.  ಮಗು ಮಾತ್ರವಲ್ಲದೇ ಅರುಂಧತಿಯ ಇತರ ಇಬ್ಬರು ಅಪ್ರಾಪ್ತ ಹೆಣ್ಣುಮಕ್ಕಳನ್ನೂ ನಾವು ಸಿಸಿಐನಲ್ಲಿ  ಪುನರ್ವಸತಿ ಮಾಡಿದ್ದೇವೆ ಅಧಿಕಾರಿಗಳು ಹೇಳಿದ್ದಾರೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com