ರೆಡ್ಡೀಸ್‌ ಲ್ಯಾಬ್‌ ನ 2 ಡಿಜಿ ಕೋವಿಡ್ ಔಷಧಿ ವಾಣಿಜ್ಯ ಬಳಕೆಗೆ ಬಿಡುಗಡೆ: ದರ ನಿಗದಿ ಮಾಡಿದ ಸಂಸ್ಥೆ

ದೇಶದ ಪ್ರಮುಖ ಔಷಧ ತಯಾರಿಕಾ ಸಂಸ್ಥೆಗಳ ಪೈಕಿ ಒಂದಾಗಿರುವ ಹೈದರಾಬಾದ್ ಮೂಲದ ಡಾ.ರೆಡ್ಡೀಸ್ ಲ್ಯಾಬ್ ತನ್ನ 2 ಡಿಜಿ ಕೋವಿಡ್ ಔಷಧಿಯನ್ನು ವಾಣಿಜ್ಯ ಬಳಕೆಗೆ ಬಿಡುಗಡೆ ಮಾಡಿದ್ದು, ದರ ನಿಗದಿ ಮಾಡಿದೆ.
2 ಡಿಜಿ ಕೋವಿಡ್ ಔಷಧಿ
2 ಡಿಜಿ ಕೋವಿಡ್ ಔಷಧಿ

ಹೈದರಾಬಾದ್‌: ದೇಶದ ಪ್ರಮುಖ ಔಷಧ ತಯಾರಿಕಾ ಸಂಸ್ಥೆಗಳ ಪೈಕಿ ಒಂದಾಗಿರುವ ಹೈದರಾಬಾದ್ ಮೂಲದ ಡಾ.ರೆಡ್ಡೀಸ್ ಲ್ಯಾಬ್ ತನ್ನ 2 ಡಿಜಿ ಕೋವಿಡ್ ಔಷಧಿಯನ್ನು ವಾಣಿಜ್ಯ ಬಳಕೆಗೆ ಬಿಡುಗಡೆ ಮಾಡಿದ್ದು, ದರ ನಿಗದಿ ಮಾಡಿದೆ.

ಹೌದು.. ಡಾ. ರೆಡ್ಡೀಸ್‌ ಲ್ಯಾಬ್‌ನ ಸಹಯೋಗದಲ್ಲಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು (ಡಿಆರ್‌ಡಿಒ) ಇನ್‌ಸ್ಟಿಟ್ಯೂಟ್‌ ಆಫ್‌ ನ್ಯೂಕ್ಲಿಯರ್‌ ಮೆಡಿಸಿನ್‌ ಅಂಡ್ ಅಲೈಡ್ ಸೈನ್ಸಸ್‌ (ಐಎನ್‌ಎಂಎಎಸ್‌) ಪ್ರಯೋಗಾಲಯದಲ್ಲಿ ಕೋವಿಡ್‌ ಸೋಂಕಿತರಿಗಾಗಿ ಅಭಿವೃದ್ಧಿಪಡಿಸಿರುವ 2–ಡಯಾಕ್ಸಿ–ಡಿ–ಗ್ಲೂಕೋಸ್‌  (2–ಡಿಜಿ) ಔಷಧವನ್ನು ವಾಣಿಜ್ಯ ಬಳಕೆಗೆ ಬಿಡುಗಡೆ ಮಾಡಿರುವುದಾಗಿ ರೆಡ್ಡೀಸ್‌ ಲ್ಯಾಬ್‌ ಸೋಮವಾರ ಪ್ರಕಟಿಸಿದೆ. ಅಲ್ಲದೆ ಈ ನೂತನ ಔಷಧಿಗೆ ದರ ಕೂಡ ನಿಗದಿ ಮಾಡಿದೆ.

ಕೋವಿಡ್‌ ಸೋಂಕು ನಿಗ್ರಹಿಸುವ ಈ ಔಷದದ ತುರ್ತು ಬಳಕೆಗಾಗಿ ಮೇ 1 ರಂದು ಭಾರತೀಯ ಔಷಧ ಮಹಾನಿಯಂತ್ರಕ ಸಂಸ್ಥೆ (ಡಿಸಿಜಿಐ) ಅನುಮತಿ ನೀಡಿತ್ತು. ಇದೀಗ ಈ ಈ ಔಷಧವನ್ನು 2ಡಿಜಿ ಬ್ರ್ಯಾಂಡ್ ಹೆಸರಿನಲ್ಲಿ ವಾಣಿಜ್ಯಾತ್ಮಕವಾಗಿ ಮಾರಾಟ ಮಾಡಲಾಗುತ್ತದೆ. ಈ ಕುರಿತಂತೆ ಮಾಹಿತಿ ನೀಡಿರುವ ಡಾ.  ರೆಡ್ಡೀಸ್‌ ಲ್ಯಾಬ್‌, ಪ್ರತಿ ಸ್ಯಾಚೆಟ್‌ನ ಗರಿಷ್ಠ ಬೆಲೆ 990 ರೂ ಎಂದು ನಿಗದಿಪಡಿಸಿದೆ. ಸರ್ಕಾರಿ ಸಂಸ್ಥೆಗಳಿಗೆ ಸಬ್ಸಿಡಿ ದರದಲ್ಲಿ ಈ ಔಷಧವನ್ನು ಪೂರೈಸಲಾಗುತ್ತದೆ ಎಂದೂ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

ಸಾಧಾರಣ ಅಥವಾ ಗಂಭೀರವಾಗಿ ಕೋವಿಡ್‌-19 ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ ಪಡೆಯುತ್ತಿರುವ ರೋಗಿಗೆ, ತಜ್ಞ ವೈದ್ಯರ ಸಲಹೆ ಮೇರೆಗೆ, ಈಗಿರುವ ಆರೈಕೆಯ ಮಾನದಂಡಗಳನ್ನು ಅನುಸರಿಸಿ, ಸಹಾಯಕ ಚಿಕಿತ್ಸೆಯಾಗಿ ಈ ಔಷಧವನ್ನು ನೀಡಬಹುದು ಎಂದು ಹೇಳಲಾಗಿದೆ. 

ಡಾ. ರೆಡ್ಡಿ ಪ್ರಯೋಗಾಲಯ ಈ ಔಷಧವನ್ನು ಭಾರತದಾದ್ಯಂತವಿರುವ ಪ್ರಮುಖ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಸರಬರಾಜು ಮಾಡುತ್ತಿದೆ. ಆರಂಭಿಕ ವಾರಗಳಲ್ಲಿ, ಕಂಪನಿಯು ಮಹಾನಗರಗಳು ಮತ್ತು ಮೊದಲ ಹಂತದ (ಎ ಗ್ರೇಡ್‌) ನಗರಗಳಲ್ಲಿನ ಆಸ್ಪತ್ರೆಗಳಿಗೆ ಪೂರೈಕೆ ಮಾಡುತ್ತಾರೆ. ನಂತರ ಭಾರತದ  ಉಳಿದ ಭಾಗಗಳಿಗೆ ವಿಸ್ತರಿಸುವುದಾಗಿ ಔಷಧ ಕಂಪನಿ ಸೋಮವಾರ ತಿಳಿಸಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಡಾ.ರೆಡ್ಡೀಸ್‌ ಲ್ಯಾಬ್ ನ ಅಧ್ಯಕ್ಷ ಸತೀಶ್ ರೆಡ್ಡಿ ಅವರು, '2-ಡಿಜಿ ನಮ್ಮ ಕೋವಿಡ್-19 ಔಷಧಿಗಳ ಪೋರ್ಟ್ ಫೋಲಿಯೋಗೆ ಮತ್ತೊಂದು ಸೇರ್ಪಡೆಯಾಗಿದ್ದು, ಇದು ಈಗಾಗಲೇ ಸೌಮ್ಯದಿಂದ ಮಧ್ಯಮ ಮತ್ತು ತೀವ್ರವಾದ ಪರಿಸ್ಥಿತಿಗಳಲ್ಲಿ ಬಳಲುತ್ತಿರುವ ರೋಗಿಗಳಿಗೆ ನೀಡಬಹುದಾದ  ಔಷಧಿಯಾಗಿದೆ. ಇದು ಔಷಧಿ ಮತ್ತು ಲಸಿಕೆಯನ್ನು ಒಳಗೊಂಡಿದೆ. ಕೋವಿಡ್ ಸಾಂಕ್ರಾಮಿಕ ರೋಗದ ವಿರುದ್ಧದ ನಮ್ಮ ಸಾಮೂಹಿಕ ಹೋರಾಟದಲ್ಲಿ ಡಿಆರ್‌ಡಿಒ ಜೊತೆ ಸಹಭಾಗಿತ್ವ ವಹಿಸಿದ್ದಕ್ಕಾಗಿ ನಾವು ತುಂಬಾ ಸಂತೋಷಪಡುತ್ತೇವೆ ಎಂದು ಹೇಳಿದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com