ಉಗ್ರರ ಮತ್ತೊಂದು ಸಂಚು ವಿಫಲ: ಸೇನಾ ಕೇಂದ್ರದ ಬಳಿ ಡ್ರೋಣ್ ಪತ್ತೆ, ಭದ್ರತಾ ಪಡೆಗಳಿಂದ ಗುಂಡಿನ ದಾಳಿ

ಮತ್ತೊಮ್ಮೆ ಡ್ರೋಣ್ ದಾಳಿಗೆ ಮುಂದಾಗಿದ್ದ ಉಗ್ರರ ಸಂಚನ್ನು ಭಾರತೀಯ ಸೇನಾಪಡೆ ಸೋಮವಾರ ವಿಫಲಗೊಳ್ಳುವಂತೆ ಮಾಡಿದೆ. ಸೇನಾ ಕೇಂದ್ರದ ಬಳಿ ಪತ್ತೆಯಾದ ಡ್ರೋಣ್'ವೊಂದರ ಮೇಲೆ ಭಾರತೀಯ ಸೇನಾಪಡೆ ಗುಂಡಿನ ದಾಳಿ ನಡೆಸಿದೆ ಎಂದು ವರದಿಗಳಿಂದ ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಶ್ರೀನಗರ: ಮತ್ತೊಮ್ಮೆ ಡ್ರೋಣ್ ದಾಳಿಗೆ ಮುಂದಾಗಿದ್ದ ಉಗ್ರರ ಸಂಚನ್ನು ಭಾರತೀಯ ಸೇನಾಪಡೆ ಸೋಮವಾರ ವಿಫಲಗೊಳ್ಳುವಂತೆ ಮಾಡಿದೆ. ಸೇನಾ ಕೇಂದ್ರದ ಬಳಿ ಪತ್ತೆಯಾದ ಡ್ರೋಣ್'ವೊಂದರ ಮೇಲೆ ಭಾರತೀಯ ಸೇನಾಪಡೆ ಗುಂಡಿನ ದಾಳಿ ನಡೆಸಿದೆ ಎಂದು ವರದಿಗಳಿಂದ ತಿಳಿದುಬಂದಿದೆ. 

ನಿನ್ನೆಯಷ್ಟೇ ಭಾರತೀಯ ವಾಯುಪಡೆ ಕೇಂದ್ರದ ಮೇಲೆ ದಾಳಿ ನಡೆಸಿದ್ದ ಉಗ್ರರು ಇಂದು ಸೇನಾ ಶಿಬಿರವನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸಲು ಮುಂದಾಗಿದ್ದಾರೆ. 

ಇಂದು ಬೆಳಗಿನ ಜಾವ 3 ಗಂಟೆಗೆ ಕಾಲೂಚಕ್ ಮಿಲಿಟರಿ ಸ್ಟೇಶನ್ ಬಳಿ ಡ್ರೋನ್ ಕಾಣಿಸಿಕೊಳ್ಳುತ್ತಿದ್ದಂತೆ ಅಲರ್ಟ್ ಆಗಿದ್ದ ಸೇನೆ, 20 ರಿಂದ 25 ಸುತ್ತು ಗುಂಡಿನ ದಾಳಿ ನಡೆಸಿದೆ ಎಂದು ತಿಳಿದುಬಂದಿದೆ. 

ಸೇನಾಪಡೆಗಳು ಗುಂಡಿನ ದಾಳಿ ನಡೆಸುತ್ತಿದ್ದಂತೆಯೇ ಡ್ರೋಣ್ ಮಾಯವಾಗದ್ದು, ಪ್ರಸ್ತುತ ಭದ್ರತಾ ಪಡೆಗಳು ಸ್ಥಳವನ್ನು ಸುತ್ತುವರೆದು ಕಾರ್ಯಾಚರಣೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ. 

ಭದ್ರತಾಪಡೆಗಳ ಗುಂಡಿನ ದಾಳಿಯಲ್ಲಿ ಡ್ರೋಣ್ ಹೊಡೆದುರುಳಿಸಲಾಗಿದೆ ಎಂದು ಹೇಳಲಾಗುತ್ತಿದ್ದು, ಈ ಬಗ್ಗೆ ಅಧಿಕೃತ ಮಾಹಿತಿಗಳು ಇನ್ನೂ ತಿಳಿದುಬಂದಿಲ್ಲ. 

ಡ್ರೋಣ್ ಗಳನ್ನು ಬಳಸಿಕೊಂಡು ಗಡಿಯಾಚೆಯಿಂದ ಜಮ್ಮು ಮತ್ತು ಕಾಶ್ಮೀರಕ್ಕೆ ಶಸ್ತ್ರಾಸ್ತ್ರ, ಸ್ಫೋಟಕ ಪದಾರ್ಥ, ಮಾದಕ ವಸ್ತುಗಳನ್ನು ಸಾಗಿಸುತ್ತಿದ್ದ ಉಗ್ರರು ಇದೀಗ ಅದೇ ಡ್ರೋಣ್ ಬಳಸಿ ಜಮ್ಮು ಏರ್ಪೋರ್ಟ್ ನ ಒಂದು ಭಾಗದಲ್ಲಿರುವ ಭಾರತೀಯ ವಾಯುಪಡೆ ಸ್ಟೇಷನ್ ಮೇಲೆ ಭಾನುವಾರ ದಾಳಿ ನಡೆಸಿದ್ದರು. ಉಗ್ರರ ಈ ದುಷ್ಕೃತ್ಯ ಇದೀಗ ತೀವ್ರ ಆತಂಕವನ್ನು ಸೃಷ್ಟಿಸಿದೆ. 

ಭಾನುವಾರ ನಸುಕಿನ ಜಾವ 1.40ರ ಸುಮಾರಿಗೆ ಸ್ಫೋಟಕಗಳನ್ನು ಕಟ್ಟಲಾಗಿದ್ದ 2 ಡ್ರೋಣ್'ಗಳು ವಾಯುಪಡೆ ಕೇಂದ್ರದ ಮೇಲೆ ದಾಳಿ ನಡೆಸಿದ್ದವು. 

ಪಾಸ್ ಸೇನೆ ಹಾಗೂ ಪಾಕ್ ಗುಪ್ತಚರ ಸಂಸ್ಥೆ ಐಎಸ್ಐ ಕುಮ್ಮಕ್ಕಿನಿಂದ ಜಿಪಿಎಸ್ ಹೊಂದಿದ್ದ ಡ್ರೋಣ್ ಗಳನ್ನು ಉಗ್ರರು ಬಳಸಿ ಸ್ಫೋಟಕ ಕಳಿಸಿರುವ ಶಂಕೆಗಳು ವ್ಯಕ್ತವಾಗಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com