ಡ್ರೋಣ್ ದಾಳಿ, ಪೊಲೀಸ್ ಅಧಿಕಾರಿ ಹತ್ಯೆ ಪ್ರಕರಣ: ಪಾಕ್ ವಿರುದ್ಧ ಜಮ್ಮುವಿನಲ್ಲಿ ಭುಗಿಲೆದ್ದ ಪ್ರತಿಭಟನೆ
ಜಮ್ಮುವಿನ ವಿಮಾನ ನಿಲ್ದಾಣದಲ್ಲಿ ನಡೆದ ಡ್ರೋಣ್ ದಾಳಿ ಹಾಗೂ ಪೊಲೀಸ್ ಅಧಿಕಾರಿಯನ್ನು ಉಗ್ರರು ಹತ್ಯೆ ಮಾಡಿದ ಎರಡೂ ಘಟನೆ ಇದೀಗ ಅಲ್ಲಿನ ಜನತೆಯ ಆಕ್ರೋಶಕ್ಕೆ ಕಾರಣವಾಗಿದೆ.
Published: 28th June 2021 10:49 AM | Last Updated: 28th June 2021 10:49 AM | A+A A-

ಪ್ರತಿಭಟನೆ ನಡೆಸುತ್ತಿರುವ ಜನತೆ
ಜಮ್ಮು: ಜಮ್ಮುವಿನ ವಿಮಾನ ನಿಲ್ದಾಣದಲ್ಲಿ ನಡೆದ ಡ್ರೋಣ್ ದಾಳಿ ಹಾಗೂ ಪೊಲೀಸ್ ಅಧಿಕಾರಿಯನ್ನು ಉಗ್ರರು ಹತ್ಯೆ ಮಾಡಿದ ಎರಡೂ ಘಟನೆ ಇದೀಗ ಅಲ್ಲಿನ ಜನತೆಯ ಆಕ್ರೋಶಕ್ಕೆ ಕಾರಣವಾಗಿದೆ.
ಘಟನೆಗೆ ಖಂಡನೆ ವ್ಯಕ್ತಡಿಸಿಕುವ ದೋಗ್ರಾ ಸಮುದಾಯದ ಜನರು ಇದೀಗ ಜಮ್ಮುವಿನಲ್ಲಿ ಪಾಕಿಸ್ತಾನದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಭಾರೀ ಪ್ರತಿಭಟನೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ.
ಡ್ರೋಣ್ ಗಳನ್ನು ಬಳಸಿಕೊಂಡು ಗಡಿಯಾಚೆಯಿಂದ ಜಮ್ಮು ಮತ್ತು ಕಾಶ್ಮೀರಕ್ಕೆ ಶಸ್ತ್ರಾಸ್ತ್ರ, ಸ್ಫೋಟಕ ಪದಾರ್ಥ, ಮಾದಕ ವಸ್ತುಗಳನ್ನು ಸಾಗಿಸುತ್ತಿದ್ದ ಉಗ್ರರು ಇದೀಗ ಅದೇ ಡ್ರೋಣ್ ಬಳಸಿ ಜಮ್ಮು ಏರ್ಪೋರ್ಟ್ ನ ಒಂದು ಭಾಗದಲ್ಲಿರುವ ಭಾರತೀಯ ವಾಯುಪಡೆ ಸ್ಟೇಷನ್ ಮೇಲೆ ಭಾನುವಾರ ದಾಳಿ ನಡೆಸಿದ್ದರು. ಉಗ್ರರ ಈ ದುಷ್ಕೃತ್ಯ ಇದೀಗ ತೀವ್ರ ಆತಂಕವನ್ನು ಸೃಷ್ಟಿಸಿದೆ.
ನಿನ್ನೆ ಬೆಳಗಿನ ಜಾವ 1.40ರ ವೇಳೆಗೆ ಸ್ಫೋಟಕಗಳನ್ನು ಕಟ್ಟಲಾಗಿದ್ದ 2 ಡ್ರೋಣ್ ಗಳು ವಾಯುಪಡೆ ಕೇಂದ್ರದ ಮೇಲೆ ದಾಳಿ ನಡೆಸಿದ್ದವು.
ಪಾಸ್ ಸೇನೆ ಹಾಗೂ ಪಾಕ್ ಗುಪ್ತಚರ ಸಂಸ್ಥೆ ಐಎಸ್ಐ ಕುಮ್ಮಕ್ಕಿನಿಂದ ಜಿಪಿಎಸ್ ಹೊಂದಿದ್ದ ಡ್ರೋಣ್ ಗಳನ್ನು ಉಗ್ರರು ಬಳಸಿ ಸ್ಫೋಟಕ ಕಳಿಸಿರುವ ಶಂಕೆಗಳು ವ್ಯಕ್ತವಾಗಿವೆ.
ಈ ಘಟನೆಯ ಬೆನ್ನಲ್ಲೇ ಜಮ್ಮುವಿನ ಆವಂತಿಪೋರಾದ ಹರಿಪರಿಗಂನಲ್ಲಿ ಮಾಜಿ ಪೊಲೀಸ್ ಅಧಿಕಾರಿಯೊಬ್ಬರ ಮನೆಗೆ ನುಗ್ಗಿರುವ ಉಗ್ರರು, ಅಧಿಕಾರಿ, ಅವರ ಪತ್ನಿ ಹಾಗೂ ಮಗಳ ಮೇಲೆ ಮನಬಂದಂತೆ ಗುಂಡಿನ ದಾಳಿ ನಡೆಸಿ ಹತ್ಯೆ ನಡೆಸಿದ್ದಾರೆ.