ಸರ್ಕಾರಿ, ಖಾಸಗಿ ಆಸ್ಪತ್ರೆಗಳ ನಡುವೆ ಲಸಿಕೆ ವಿತರಣಾ ಅನುಪಾತದಲ್ಲಿ ಯಾವುದೇ ಬದಲಾವಣೆ ಇಲ್ಲ: ಕೇಂದ್ರ ಸರ್ಕಾರ
ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ನಡುವಣ ಈಗಿರುವ 75:25 ಅನುಪಾತದಿಂದ 90:10 ರವರೆಗೆ ಕೋವಿಡ್ ಲಸಿಕೆ ಹಂಚಿಕೆಯನ್ನು ಪರಿಷ್ಕರಿಸುವಂತೆ ಎರಡು ರಾಜ್ಯಗಳ ಒತ್ತಾಯದ ಹೊರತಾಗಿಯೂ, ಇದು ಯಾವುದೇ ಸಂದರ್ಭದಲ್ಲಿಯೂ ಆಗುತ್ತಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಪಪಡಿಸಿದೆ.
Published: 29th June 2021 09:55 PM | Last Updated: 29th June 2021 10:09 PM | A+A A-

ಸಾಂದರ್ಭಿಕ ಚಿತ್ರ
ನವದೆಹಲಿ: ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ನಡುವಣ ಈಗಿರುವ 75:25 ಅನುಪಾತದಿಂದ 90:10 ರವರೆಗೆ ಕೋವಿಡ್ ಲಸಿಕೆ ಹಂಚಿಕೆಯನ್ನು ಪರಿಷ್ಕರಿಸುವಂತೆ ಎರಡು ರಾಜ್ಯಗಳ ಒತ್ತಾಯದ ಹೊರತಾಗಿಯೂ, ಇದು ಯಾವುದೇ ಸಂದರ್ಭದಲ್ಲಿಯೂ ಆಗುತ್ತಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಪಪಡಿಸಿದೆ.
ಕಳೆದ ಕೆಲ ದಿನಗಳಲ್ಲಿ ಕೇಂದ್ರ ಸರ್ಕಾರಕ್ಕೆ ಪ್ರತ್ಯೇಕ ಪತ್ರ ಬರೆದಿರುವ ಒಡಿಶಾ ಮತ್ತು ತಮಿಳುನಾಡಿನ ಮುಖ್ಯಮಂತ್ರಿ ಕ್ರಮವಾಗಿ ನವೀನ್ ಪಟ್ನಾಯಕ್ ಮತ್ತು ಎಂ.ಕೆ.ಸ್ಟಾಲಿನ್, ದೇಶದಲ್ಲಿ ಕೋವಿಡ್ ಲಸಿಕೆ ವಿತರಣೆ ಬಗ್ಗೆ ಕೇಂದ್ರ ಸರ್ಕಾರ ಮತ್ತಷ್ಟು ಗಮನಹರಿಸಬೇಕು ಎಂದು ಹೇಳಿದ್ದಾರೆ.
ಪರಿಷ್ಕೃತ ಕೋವಿಡ್ ಲಸಿಕೆ ನೀತಿ ಜೂನ್ 21ರಿಂದ ಜಾರಿಗೆ ಬಂದಿರುವಂತೆಯೇ, ಕೇಂದ್ರ ಸರ್ಕಾರ ಇದೀಗ ದೇಶದಲ್ಲಿ ತಯಾರಾದ ಶೇ.75 ರಷ್ಟು ಕೋವಿಡ್ ಲಸಿಕೆಯನ್ನು ಖರೀದಿಸಿ, ಸರ್ಕಾರಿ ಆಸ್ಪತ್ರೆಗಳಲ್ಲಿ ಯುವಕರಿಗೆ ಉಚಿತವಾಗಿ ಪೂರೈಸಲು ವಿತರಿಸುತ್ತಿದೆ. ಆದರೆ, ಶೇಕಡಾ 25 ರಷ್ಟು ಲಸಿಕೆಯನ್ನು ಖಾಸಗಿ ಆಸ್ಪತ್ರೆಗಳಿಗೆ ಪೂರೈಕೆ ಮುಂದುವರೆದಿದೆ. ಅಲ್ಲದೇ, ಲಸಿಕೆ ವೆಚ್ಚ ಹೊರತುಪಡಿಸಿ ಖಾಸಗಿ ಆಸ್ಪತ್ರೆಗಳಿಗೆ ಪ್ರತಿ ಡೋಸ್‌ಗೆ 150 ರೂ. ದರ ನಿಗದಿಪಡಿಸಲು ಅವಕಾಶ ನೀಡಲಾಗಿದೆ.
ಆದಾಗ್ಯೂ, ತಮ್ಮ ರಾಜ್ಯಗಳಲ್ಲಿ ಖಾಸಗಿ ಆಸ್ಪತ್ರೆಗಳ ಭಾಗವಹಿಸುವಿಕೆ ಕಳಪೆಯಾಗಿದೆ ಎಂದು ಪಟ್ನಾಯಕ್ ಮತ್ತು ಸ್ಟಾಲಿನ್ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ. ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ಕೇವಲ ಶೇಕಡಾ 4-5 ರಷ್ಟಿದ್ದರೆ, ತಮಿಳುನಾಡಿನಲ್ಲಿ ಇದು ಸ್ಪಲ್ಪ ಉತ್ತಮವಾಗಿದ್ದು, ಶೇ.10 ರಷ್ಟಿದೆ. ಖಾಸಗಿ ಆಸ್ಪತ್ರೆಗಳ ಭಾಗವಹಿಸುವಿಕೆ ಮತ್ತಷ್ಟು ಹೆಚ್ಚಾಗಬೇಕಾದ ಅಗತ್ಯವಿದೆ ಎಂದು ಪರಾಮರ್ಶನಾ ಸಭೆಯಲ್ಲಿ ಉತ್ತರ ಪ್ರದೇಶ, ಬಿಹಾರ, ಒಡಿಶಾ ಮತ್ತಿತರ ರಾಜ್ಯಗಳು ಹೇಳಿಕೆ ನೀಡಿದ್ದವು.
ಈ ಕುರಿತಂತೆ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್, ಲಸಿಕಾ ನೀತಿಯನ್ನು ಈಗಷ್ಟೇ ಪರಿಷ್ಕರಿಸಲಾಗಿದೆ. ರಾಜ್ಯಗಳ ಪ್ರತಿಕ್ರಿಯೆ ಸ್ವಾಗರ್ತಾಹವಾಗಿದೆ. ಆದರೆ, ಮುಂದಿನ ಬದಲಾವಣೆ ಬಗ್ಗೆ ಯಾವುದೇ ಯೋಜನೆ ಹೊಂದಿಲ್ಲ ಎಂದು ಹೇಳಿದರು.
ಲಸಿಕೆ ನೀತಿ ಕುರಿತಂತೆ ರಾಜ್ಯಗಳೊಂದಿಗೆ ಚರ್ಚೆ ನಡೆಸುತ್ತಿದ್ದೇವೆ. ಅಗತ್ಯಬಿದ್ದರೆ ಸಲಹೆಗಳನ್ನು ಯಾವಾಗಲೂ ಪರಿಶೀಲಿಸುತ್ತೇವೆ ಆದರೆ, ಹೊಸ ನೀತಿ ಜೂನ್ 21 ರಿಂದ ಬಂದಿದೆ. ಇದು ಸರಾಸರಿ ದೈನಂದಿನ ಲಸಿಕೆ ನೀಡುವಿಕೆಯನ್ನು ಗಮನಾರ್ಹವಾಗಿ ಹೆಚ್ಚಿಸಿದೆ, ಅದು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ತೋರಿಸುತ್ತಿದೆ ಎಂದರು.
ಈವರೆಗೂ ದೇಶದಲ್ಲಿ 33 ಕೋಟಿ ಡೋಸ್ ಲಸಿಕೆ ನೀಡಲಾಗಿದ್ದರೆ, ಸರ್ಕಾರದಿಂದ ಒದಗಿಸಲಾದ ಕೋವಿನ್ ಡ್ಯಾಶ್‌ಬೋರ್ಡ್ ನಲ್ಲಿ ಸರ್ಕಾರಿ ಮತ್ತು ಖಾಸಗಿ ಕೇಂದ್ರಗಳಲ್ಲಿ ಪೂರೈಸಲಾದ ಡೋಸ್ ನಡುವಣ ಬಿರುಕಿನ ಬಗ್ಗೆ ಮಾಹಿತಿ ನೀಡಿಲ್ಲ, ಖಾಸಗಿ ಕ್ಷೇತ್ರಗಳ ಪಾಲುದಾರಿಕೆ ಶೇ.20ಕ್ಕಿಂತ ಕಡಿಮೆಯಾಗಿರುವ ಸಾಧ್ಯತೆ ಬಗ್ಗೆ ಇದರಿಂದ ತಿಳಿಯುತ್ತದೆ ಎಂದು ಹೇಳಿದರು.