ವಾಯುನೆಲೆಯಲ್ಲಿ ಡ್ರೋಣ್ ಸ್ಫೋಟ ಪ್ರಕರಣ: ಎನ್‌ಎಸ್‌ಜಿಯ ವಿಶೇಷ ಬಾಂಬ್ ತಪಾಸಣಾ ತಂಡದಿಂದ ತನಿಖೆ ಆರಂಭ

ಭಾರತೀಯ ವಾಯುಪಡೆ ಕೇಂದ್ರದ ಮೇಲಿನ ಡ್ರೋಣ್ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನಾ ಸ್ಥಳಕ್ಕೆ ಭೇಟಿ ನೀಡಿರುವ ರಾಷ್ಟ್ರೀಯ ಭದ್ರತಾ ಸಿಬ್ಬಂದಿಯ (ಎನ್ ಎಸ್ ಜಿ) ವಿಶೇಷ ಬಾಂಬ್ ತಪಾಸಣಾ ತಂಡ ತನಿಖೆ ಆರಂಭಿಸಿದೆ ಎಂದು ಮೂಲಗಳಿಂದ ಮಂಗಳವಾರ ತಿಳಿದುಬಂದಿದೆ. 
ರಾಷ್ಟ್ರೀಯ ಭದ್ರತಾ ಸಿಬ್ಬಂದಿ (ಸಂಗ್ರಹ ಚಿತ್ರ)
ರಾಷ್ಟ್ರೀಯ ಭದ್ರತಾ ಸಿಬ್ಬಂದಿ (ಸಂಗ್ರಹ ಚಿತ್ರ)

ಜಮ್ಮು: ಭಾರತೀಯ ವಾಯುಪಡೆ ಕೇಂದ್ರದ ಮೇಲಿನ ಡ್ರೋಣ್ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನಾ ಸ್ಥಳಕ್ಕೆ ಭೇಟಿ ನೀಡಿರುವ ರಾಷ್ಟ್ರೀಯ ಭದ್ರತಾ ಸಿಬ್ಬಂದಿಯ (ಎನ್ ಎಸ್ ಜಿ) ವಿಶೇಷ ಬಾಂಬ್ ತಪಾಸಣಾ ತಂಡ ತನಿಖೆ ಆರಂಭಿಸಿದೆ ಎಂದು ಮೂಲಗಳಿಂದ ಮಂಗಳವಾರ ತಿಳಿದುಬಂದಿದೆ. 

ಭಾನುವಾರ ವಾಯುಪಡೆ ಕೇಂದ್ರದಲ್ಲಿ ಸ್ಫೋಟಕ್ಕೆ ಬಳಸಲಾದ ಡ್ರೋಣ್ ಗಳನ್ನು ಗಡಿ ಭಾಗದಲ್ಲಿಯೇ ನಿಯಂತ್ರಿಸಲಾಗುತ್ತಿತ್ತು ಎಂದು ಮೂಲಗಳು ತಿಳಿಸಿವೆ. 

ಈಗಾಗಲೇ ರಾಷ್ಟ್ರೀಯ ಭದ್ರತಾ ಸಿಬ್ಬಂದಿಯ (ಎನ್‌ಎಸ್‌ಜಿ) ವಿಶೇಷ ಬಾಂಬ್ ತಪಾಸಣಾ ತಂಡ ವಾಯುಪಡೆ ಕೇಂದ್ರಕ್ಕೆ ಭೇಟಿ ನೀಡಿದ್ದು, ಸ್ಫೋಟದ ಸ್ವರೂಪವನ್ನು ಪರಿಶೀಲಿಸುತ್ತಿದೆ. ಸ್ಫೋಟದಲ್ಲಿ ಬಳಸಲಾದ ಸ್ಫೋಟಕಗಳು ಆರ್‌ಡಿಎಕ್ಸ್‌ ಬದಲು ಟಿಎನ್‌ಟಿ ಆಗಿರಬಹುದು ಎಂದು ಹೇಳಲಾಗುತ್ತಿದ. ಗಡಿಯುದ್ದಕ್ಕೂ ಡ್ರೋಣ್'ಗಳನ್ನು ನಿಯಂತ್ರಿಸಲಾಗಿದೆ. ಸ್ಥಳಗಳ ಮಾಹಿತಿಗೆ ಗೂಗಲ್ ಮ್ಯಾಪ್ ಬಳಸಲಾಗಿದೆ. ಘಟನೆಯಲ್ಲಿ ಸ್ಥಳೀಯರ ಕೈವಾಡ ಕುರಿತಂತೆಯೂ ತನಿಖೆ ನಡೆಸಲಾಗುತ್ತಿದೆ ಎಂದು ಮೂಲಗಳು ಮಾಹಿತಿ ನೀಡಿದವೆ. 

ಈ ನಡುವೆ ಪ್ರಕರಣದ ತನಿಖೆ ನಡೆಸಲು ದೆಹಲಿ ಪೊಲೀಸರ ವಿಶೇಷ ದಳದ ಭಯೋತ್ಪಾದನಾ ನಿಗ್ರಹ ಘಟಕದ ತಂಡ ಕೂಡ ಜಮ್ಮುವಿಗೆ ಭೇಟಿ ನೀಡಲಿದ್ದು, ಪರಿಶೀಲನೆ ನಡೆಸುತ್ತಿದೆ ಎಂದು ಹೇಳಲಾಗುತ್ತಿದೆ. 

ರಾಷ್ಟ್ರ ರಾಜಧಾನಿ ದೆಹಲಿ ಮೇಲೆ ಉಗ್ರರು ದಾಳಿ ನಡೆಸಲು ಸತತ ಪ್ರಯತ್ನಗಳನ್ನು ನಡೆಸುತ್ತಿದ್ದು, ಈ ಹಿನ್ನೆಲೆಯಲ್ಲಿ ದೆಹಲಿಯ ಭಯೋತ್ಪಾದನಾ ನಿಗ್ರಹ ಘಟಕ ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ. ಇದಕ್ಕಾಗಿ ಈಗಾಗಲೇ ದೆಹಲಿ ಹಿರಿಯ ಪೊಲೀಸರ ನೇತೃತ್ವದ ತಂಡ ಜಮ್ಮುವಿಗೆ ಭೇಟಿ ನೀಡಿದೆ ಎಂದು ತಿಳಿದುಬಂದಿದೆ. 

ಭಾನುವಾರ ನಡೆದ ಡ್ರೋಣ್ ದಾಳಿ ಬಳಿಕ ಜಮ್ಮುವಿನ ಗಡಿ ಪ್ರದೇಶಗಳಲ್ಲಿ ಪದೇ ಪದೇ ಡ್ರೋಣ್ ಗಳು ಪತ್ತೆಯಾಗುತ್ತಿರುವ ಬೆಳವಣಿಗೆಗಳು ಕಂಡು ಬರುತ್ತಲೇ ಇವೆ. 

ಭಾನುವಾರವಷ್ಟೇ ಸ್ಫೋಟಕಗಳನ್ನು ಕಟ್ಟಲಾಗಿದ್ದ ಎರಡು ಡ್ರೋಣ್ ಮೂಲಕ ಜಮ್ಮುವಿನ ಭಾರತೀಯ ವಾಯುಪಡೆ ಸ್ಟೇಷನ್ ಮೇಲೆ ದಾಳಿ ನಡೆಸಲಾಗಿತ್ತು.

ಈ ಘಟನೆ ಬಳಿಕ ಸೋಮವಾರ ಬೆಳಗಿನ ಜಾವ ಕಾಲೂಚಕ್ ಮಿಲಿಟರಿ ಸ್ಟೇಷನ್ ಬಳಿ ಡ್ರೋಣ್ ಪತ್ತೆಯಾಗಿತ್ತು, ಕೂಡಲೇ ಅಲರ್ಟ್ ಆಗಿದ್ದ ಸೇನಾಪಡೆ 20-25 ಸುತ್ತಿನ ಗುಂಡಿನ ದಾಳಿ ನಡೆಸಿ, ಉಗ್ರರ ಸಂಚು ವಿಫಲಗೊಳ್ಳುವಂತೆ ಮಾಡಿದ್ದರು. ಇದೀಗ ಮತ್ತೆ ರತ್ನುಚಕ್-ಕಾಲೂಚಕ್ ಸೇನಾ ಕೇಂದ್ರದ ಬಳಿ ಡ್ರೋಣ್ ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ.

ಡ್ರೋಣ್ ಗಳನ್ನು ಬಳಸಿಕೊಂಡು ಗಡಿಯಾಚೆಯಿಂದ ಜಮ್ಮು ಮತ್ತು ಕಾಶ್ಮೀರಕ್ಕೆ ಶಸ್ತ್ರಾಸ್ತ್ರ, ಸ್ಫೋಟಕ ಪದಾರ್ಥ, ಮಾದಕ ವಸ್ತುಗಳನ್ನು ಸಾಗಿಸುತ್ತಿದ್ದ ಉಗ್ರರು ಇದೀಗ ಅದೇ ಡ್ರೋಣ್ ಬಳಸಿ ಜಮ್ಮು ಏರ್ಪೋರ್ಟ್ ನ ಒಂದು ಭಾಗದಲ್ಲಿರುವ ಭಾರತೀಯ ವಾಯುಪಡೆ ಸ್ಟೇಷನ್ ಮೇಲೆ ಭಾನುವಾರ ದಾಳಿ ನಡೆಸಿದ್ದರು. ಉಗ್ರರ ಈ ದುಷ್ಕೃತ್ಯ ಇದೀಗ ತೀವ್ರ ಆತಂಕವನ್ನು ಸೃಷ್ಟಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com