ಭಾರತದ ಭೂಪಟ ವಿರೂಪಗೊಳಿಸಿದ ಟ್ವಿಟರ್ ಸಂಸ್ಥೆ ಮುಖ್ಯಸ್ಥರ ವಿರುದ್ಧ ಯುಪಿ ಪೊಲೀಸರಿಂದ ಮತ್ತೊಂದು ಎಫ್ಐಆರ್!

ಭಾರತದ ಭೂಪಟವನ್ನು ವಿರೂಪಗೊಳಿಸಿ ಪ್ರಕಟಿಸಿದ್ದ ಟ್ವಿಟರ್ ವಿರುದ್ಧ ಉತ್ತರ ಪ್ರದೇಶ ಪೊಲೀಸರು ಮತ್ತೊಂದು ಎಫ್ಐಆರ್ ನ್ನು ದಾಖಲಿಸಿದ್ದಾರೆ. 
ಟ್ವಿಟರ್ ಇಂಡಿಯಾದ ಮುಖ್ಯಸ್ಥ
ಟ್ವಿಟರ್ ಇಂಡಿಯಾದ ಮುಖ್ಯಸ್ಥ

ಲಖನೌ: ಭಾರತದ ಭೂಪಟವನ್ನು ವಿರೂಪಗೊಳಿಸಿ ಪ್ರಕಟಿಸಿದ್ದ ಟ್ವಿಟರ್ ವಿರುದ್ಧ ಉತ್ತರ ಪ್ರದೇಶ ಪೊಲೀಸರು ಮತ್ತೊಂದು ಎಫ್ಐಆರ್ ನ್ನು ದಾಖಲಿಸಿದ್ದಾರೆ. 

ಟ್ವಿಟರ್ ಇಂಡಿಯಾದ ಇಬ್ಬರು ಹಿರಿಯ ಅಧಿಕಾರಿಗಳ ವಿರುದ್ಧ ಬಜರಂಗದಳ ಪದಾಧಿಕಾರಿಯೊಬ್ಬರು ನೀಡಿದ್ದ ದೂರಿನ ಆಧಾರದಲ್ಲಿ ಖುರ್ಜಾ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಟ್ವಿಟರ್ ನಲ್ಲಿ ಪ್ರಕಟಗೊಂಡಿದ್ದ ಭೂಪಟದಲ್ಲಿ ಕೇಂದ್ರಾಡಳಿತ ಪ್ರದೇಶಗಳಾದ ಲಡಾಖ್, ಜಮ್ಮು-ಕಾಶ್ಮೀರಗಳನ್ನು ಭಾರತದ ಹೊರ ಭಾಗದಲ್ಲಿ ಚಿತ್ರೀಕರಿಸಲಾಗಿತ್ತು. ಈ ಪ್ರಮಾದ ಸೋಮವಾರ (ಜೂ.28 ರಂದು) ಬೆಳಕಿಗೆ ಬಂದಿದ್ದು, ನೆಟಿಜನ್ ಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. 

ಆಕ್ಷೇಪ ವ್ಯಕ್ತವಾಗುತ್ತಿದ್ದಂತೆಯೇ ಎಚ್ಚೆತ್ತ ಟ್ವಿಟರ್ ಸಂಜೆಯ ವೇಳೆಗೆ ಭೂಪಟವನ್ನು ತೆಗೆದುಹಾಕಿತ್ತು. "ವಿಶ್ವಭೂಪಟದಲ್ಲಿ ಲಡಾಖ್, ಜಮ್ಮು-ಕಾಶ್ಮೀರಗಳನ್ನು ಭಾರತದ ಒಳಗೆ ಚಿತ್ರೀಕರಿಸಲಾಗಿಲ್ಲ. ಇದು ಕಾಕತಾಳೀಯವಲ್ಲ. ಈ ನಡೆಯಿಂದ ಭಾರತೀಯರಿಗೆ ತೀವ್ರವಾದ ನೋವುಂಟಾಗಿದೆ ಎಂದು ಪಶ್ಚಿಮ ಉತ್ತರ ಪ್ರದೇಶದ ಬಜರಂಗದಳದ ಸಂಚಾಲಕ ಪ್ರವೀಣ್ ಭಾಟಿ ಹೇಳಿದ್ದಾರೆ. 

ಎಫ್ಐಆರ್ ನಲ್ಲಿ ಟ್ವಿಟರ್ ಇಂಡಿಯಾದ ಎಂಡಿ ಮನೀಷ್ ಮಹೇಶ್ವರಿ ಹಾಗೂ ನ್ಯೂಸ್ ಪಾರ್ಟ್ನರ್ಶಿಪ್ಸ್ ನ ಮುಖ್ಯಸ್ಥರಾದ ಅಮೃತಾ ತ್ರಿಪಾಠಿ ಅವರ ಹೆಸರನ್ನು ಉಲ್ಲೇಖಿಸಲಾಗಿದ್ದು, ಐಪಿಸಿ ಸೆಕ್ಷನ್ 505 (2) (ಸಾರ್ವಜನಿಕ ಕಿಡಿಗೇಡಿತನ)ದ ಆರೋಪದ ಅಡಿ ಪ್ರಕರಣ ದಾಖಲಿಸಲಾಗಿದೆ. 

ಐಟಿ ಕಾಯ್ದೆಯ ಸೆಕ್ಷನ್ 74 (ಮೋಸದ ಉದ್ದೇಶಕ್ಕಾಗಿ ಪ್ರಕಟಣೆ) ಆರೋಪದ ಅಡಿಯೂ ಪ್ರಕರಣ ದಾಖಲಾಗಿದೆ. ಟ್ವಿಟರ್ ನ ವೆಬ್ ಸೈಟ್ ನ ವೃತ್ತಿ ವಿಭಾಗದಲ್ಲಿ ಈ ಭೂಪಟ ಪ್ರಕಟವಾಗಿದ್ದು, ಟ್ವೀಪ್ ಲೈಫ್ ಎಂಬ ಶೀರ್ಷಿಕೆಯಲ್ಲಿದೆ. ಇದಕ್ಕೂ ಮುನ್ನ ಲೇಹ್ ಭಾಗವನ್ನು ಚೀನಾದ್ದೆಂದು ತೋರಿಸಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com