ಖಾಸಗಿ ಆಸ್ಪತ್ರೆಗಳು ನೇರವಾಗಿ ಕೋವಿಡ್ ಲಸಿಕೆ ಖರೀದಿಸಲಾಗದು, ಕೋವಿನ್ ಆ್ಯಪ್ ನಲ್ಲಿ ಆರ್ಡರ್ ಬುಕ್ ಮಾಡಬೇಕು: ಕೇಂದ್ರ ಸರ್ಕಾರ

ಖಾಸಗಿ ಆಸ್ಪತ್ರೆಗಳು ನೇರವಾಗಿ ಕೋವಿಡ್ ಲಸಿಕೆ ಖರೀದಿಸುವಂತಿಲ್ಲ ಎಂದು ಹೇಳಿರುವ ಕೇಂದ್ರ ಸರ್ಕಾರ ಕೋವಿನ್ ಆ್ಯಪ್ ನಲ್ಲಿ ಆರ್ಡರ್ ಬುಕ್ ಮಾಡುವಂತೆ ಸೂಚನೆ ನೀಡಿದೆ.
ಲಸಿಕೆ ಪಡೆಯುತ್ತಿರುವ ಮಹಿಳೆ ಚಿತ್ರ
ಲಸಿಕೆ ಪಡೆಯುತ್ತಿರುವ ಮಹಿಳೆ ಚಿತ್ರ

ನವದೆಹಲಿ: ಖಾಸಗಿ ಆಸ್ಪತ್ರೆಗಳು ನೇರವಾಗಿ ಕೋವಿಡ್ ಲಸಿಕೆ ಖರೀದಿಸುವಂತಿಲ್ಲ ಎಂದು ಹೇಳಿರುವ ಕೇಂದ್ರ ಸರ್ಕಾರ ಕೋವಿನ್ ಆ್ಯಪ್ ನಲ್ಲಿ ಆರ್ಡರ್ ಬುಕ್ ಮಾಡುವಂತೆ ಸೂಚನೆ ನೀಡಿದೆ.

ಜುಲೈ 1 ರಿಂದ ದೇಶದ ಖಾಸಗಿ ಆಸ್ಪತ್ರೆಗಳಿಗೆ ಕೋವಿಡ್-19 ಲಸಿಕೆಗಳನ್ನು ನೇರವಾಗಿ ಉತ್ಪಾದಕರಿಂದ ಖರೀದಿಸಲು ಅನುಮತಿಸಲಾಗುವುದಿಲ್ಲ ಎಂದು ಹೇಳಿರುವ ಕೇಂದ್ರ ಸರ್ಕಾರ ಕೋವಿನ್ ಪೋರ್ಟಲ್‌ನಲ್ಲಿ ಲಸಿಕೆಗಾಗಿ ಆರ್ಡರ್ ಮಾಡಿ ಲಸಿಕೆಗಳನ್ನು ಪಡೆಯಬಹುದಾಗಿದೆ ಎಂದು ಹೇಳಿದೆ.

ಒಟ್ಟುಗೂಡಿಸುವ ಕಾರ್ಯವಿಧಾನದಲ್ಲಿ ಭಾಗವಹಿಸಲು ಎಲ್ಲಾ ಖಾಸಗಿ ಆಸ್ಪತ್ರೆಗಳು ಕೋವಿನ್‌ನಲ್ಲಿ ಖಾಸಗಿ ಕೋವಿಡ್ ವ್ಯಾಕ್ಸಿನೇಷನ್ ಸೆಂಟರ್ (ಪಿಸಿವಿಸಿ) ಆಗಿ ನೋಂದಾಯಿಸಿಕೊಳ್ಳಬೇಕು. ಹೆಚ್ಚಿನ ಆಸ್ಪತ್ರೆಗಳು ಈಗಾಗಲೇ ಪೋರ್ಟಲ್‌ನಲ್ಲಿ ನೋಂದಣಿಯಾಗಿದ್ದು, ಶೀಘ್ರದಲ್ಲೇ ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ  ಲಭ್ಯವಾಗುವಂತೆ ನೋಡಿಕೊಳ್ಳಲಾಗುತ್ತದೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

'ರಾಜ್ಯಗಳು ಮತ್ತು ಕೇಂದ್ರಾಡಳಇತ ಪ್ರದೇಶಗಳನ್ನು ಒಂದು ತಿಂಗಳಲ್ಲಿ ಖಾಸಗಿ ಸಿವಿಸಿಗಳಿಗೆ ಲಭ್ಯವಿರುವ ಒಟ್ಟು ಪ್ರಮಾಣಗಳ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ತಿಳಿಸಲಾಗುವುದು. ಅವರು ಈ ಪ್ರಮಾಣಗಳನ್ನು ಗಮನದಲ್ಲಿಟ್ಟುಕೊಂಡು ಖಾಸಗಿ ಸಿವಿಸಿಗಳಿಂದ ಬೇಡಿಕೆಯನ್ನು ಒಟ್ಟುಗೂಡಿಸುತ್ತಾರೆ. ಈ  ಪ್ರಮಾಣಗಳ ಆಧಾರದ ಮೇಲೆ ಅಗತ್ಯ ಲಸಿಕೆ ಪ್ರಮಾಣಗಳನ್ನು ವಿತರಿಸಲಾಗುತ್ತದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಹೇಳಿಕೆ ತಿಳಿಸಿದೆ.

ಇದೇ ವೇಳೆ ಲಸಿಕೆಗಾಗಿ ಸರ್ಕಾರದಿಂದ ಅನುಮೋದನೆ ಪಡೆಯುವ ಅಗತ್ಯವಿಲ್ಲ ಎಂದು ಹೇಳಿರುವ ಆರೋಗ್ಯ ಸಚಿವಾಲಯ ಸರ್ಕಾರಿ ಪೋರ್ಟಲ್‌ನಲ್ಲಿ ಖರೀದಿ ಆದೇಶಗಳನ್ನು ಯಶಸ್ವಿಯಾಗಿ ಸಲ್ಲಿಸಿದರೆ ಸಾಕು ಎಂದು ಸ್ಪಷ್ಟನೆ ನೀಡಿದೆ. ಎನ್‌ಎಚ್‌ಎ ಪೋರ್ಟಲ್ ಮೂಲಕ ವಿದ್ಯುನ್ಮಾನವಾಗಿ ಹಣ ಪಾವತಿಸಿದ  ನಂತರ ಈ ಲಸಿಕೆಗಳನ್ನು ಖಾಸಗಿ ಆಸ್ಪತ್ರೆಗಳಿಗೆ ಪೂರೈಸಲು ಕೇಂದ್ರ ಆರೋಗ್ಯ ಸಚಿವಾಲಯ ಅನುಕೂಲ ಮಾಡುತ್ತದೆ. ಈ ಪ್ರಕ್ರಿಯೆಯು ಈಗಾಗಲೇ ಪ್ರಾರಂಭವಾಗಿದೆ. ಲಸಿಕೆಗಳ ಖರೀದಿ ಮತ್ತು ಪೂರೈಕೆಗಾಗಿ ಆಸ್ಪತ್ರೆಗಳು ಅನುಸರಿಸಬೇಕಾದ ಪ್ರಕ್ರಿಯೆಯಲ್ಲಿ ಈ ಕೆಳಗಿನ ಪರಿಷ್ಕರಣೆಗಳು ಜುಲೈ 1 ರಿಂದ ಜಾರಿಗೆ  ಬರಲಿವೆ.

ನಿಬಂಧನೆಗಳು
ಪಿಸಿವಿಸಿಗಳು ಕೋವಿಶೀಲ್ಡ್ ಅಥವಾ ಕೊವಾಕ್ಸಿನ್‌ಗೆ ನಾಲ್ಕು ಕಂತುಗಳವರೆಗೆ ಆರ್ಡರ್ ಬುಕ್ ಮಾಡಬಹುದು. ಆರ್ಡರ್ ಬುಕ್ ಮಾಡಿದ ಮೂರು ದಿನಗಳಲ್ಲಿ ಪಾವತಿ ಮಾಡಬೇಕು, ಎಲೆಕ್ಟ್ರಾನಿಕ್ ಅಥವಾ ಡಿಜಿಟಲ್ ಮೋಡ್ ಮೂಲಕ ಮಾತ್ರ ಪಾವತಿ ಸ್ವೀಕರಿಸಲಾಗುತ್ತದೆ, ಎಸ್‌ಒಪಿ ನಿರ್ದಿಷ್ಟಪಡಿಸುತ್ತದೆ. ಸೀರಮ್  ಇನ್‌ಸ್ಟಿಟ್ಯೂಟ್‌ನ ಕೋವಿಶೀಲ್ಡ್ ಮತ್ತು ಭಾರತ್ ಬಯೋಟೆಕ್‌ನ ಕೋವಾಕ್ಸಿನ್‌ಗೆ ಮಾತ್ರ ಬೇಡಿಕೆಯ ಆರ್ಡರ್ ಬುಕ್ ಮಾಡಿಕೊಳ್ಳಲಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com