ಮುಂದಿನ ಹಂತದ ಕೋವಿಡ್ ಲಸಿಕೆ ಅಭಿಯಾನಕ್ಕೆ ಇಂದಿನಿಂದ ನೋಂದಣಿ ಆರಂಭ

ನಿರ್ದಿಷ್ಟ ನಾಗರಿಕರ ಗುಂಪುಗಳಿಗೆ ಕೋವಿಡ್-19 ವ್ಯಾಕ್ಸಿನೇಷನ್ ನೋಂದಣಿ ಸೋಮವಾರ ಬೆಳಿಗ್ಗೆ 9 ಗಂಟೆಯಿಂದ ಪ್ರಾರಂಭಿಸಲಾಗುತ್ತದೆ.

Published: 01st March 2021 08:26 AM  |   Last Updated: 01st March 2021 08:26 AM   |  A+A-


Covid-10 Vaccine

ಸಂಗ್ರಹ ಚಿತ್ರ

Posted By : Srinivasamurthy VN
Source : The New Indian Express

ನವದೆಹಲಿ: ನಿರ್ದಿಷ್ಟ ನಾಗರಿಕರ ಗುಂಪುಗಳಿಗೆ ಕೋವಿಡ್-19 ವ್ಯಾಕ್ಸಿನೇಷನ್ ನೋಂದಣಿ ಸೋಮವಾರ ಬೆಳಿಗ್ಗೆ 9 ಗಂಟೆಯಿಂದ ಪ್ರಾರಂಭಿಸಲಾಗುತ್ತದೆ.

ಹೌದು... 60 ವರ್ಷ ಮೇಲ್ಪಟ್ಟ ಹಾಗೂ 45 ವರ್ಷಕ್ಕಿಂತ ಹೆಚ್ಚು ವಯಸ್ಸಿನ ಇತರೆ ಆನಾರೋಗ್ಯ (ಕೋಮಾರ್ಬಿಡಿಟಿ) ಸಮಸ್ಯೆಗಳನ್ನು ಹೊಂದಿರುವವರಿಗೆ ಲಸಿಕೆ ನೀಡಲು ಕೇಂದ್ರ ಸರ್ಕಾರ ಸಜ್ಜಾಗಿದ್ದು, ಇದಕ್ಕಾಗಿ ಅರ್ಹ ಫಲಾನುಭವಿಗಳ ನೋಂದಣಿ ಕಾರ್ಯವನ್ನು ಇಂದಿನಿಂದ ಆರಂಭಿಸಲಿದೆ. ಇಂದು ಬೆಳಗ್ಗೆ 9 ಗಂಟೆಯಿಂದಲೇ ನೋಂದಣಿ ಕಾರ್ಯ ಆರಂಭವಾಗಲಿದ್ದು, ಆನ್ ಲೈನ್ ನಲ್ಲಿ ನೋಂದಣಿ ಕಾರ್ಯಕ್ಕೆ ಸಂಪೂರ್ಣ ಸಿದ್ಧತೆ ಮಾಡಿಕೊಳ್ಳಲಾಗಿದೆ. 

ಮೂಲಗಳ ಪ್ರಕಾರ ಕೋ-ವಿನ್2.0 ಆನ್ ಲೈನ್ ಪೋರ್ಟಲ್ ನಲ್ಲಿ ಅರ್ಹ ಫಲಾನುಭವಿಗಳು ನೋಂದಣಿ ಮಾಡಿಕೊಳ್ಳುವ ಮೂಲಕ ಉಚಿತವಾಗಿ ಲಸಿಕೆ ಪಡೆದುಕೊಳ್ಳಬಹುದಾಗಿದೆ. ಲಸಿಕೆ ನೋಂದಣಿಯ ಕೋ–ವಿನ್‌ 2.0 ಆ್ಯಪ್‌ ಅಥವಾ ಪೋರ್ಟಲ್‌ ಸೋಮವಾರ ಬೆಳಿಗ್ಗೆ 9 ಗಂಟೆಗೆ ಸಕ್ರಿಯವಾಗಲಿದೆ. ಅರ್ಹ ವ್ಯಕ್ತಿಗಳು ಲಸಿಕೆ ಪಡೆಯುವುದಕ್ಕಾಗಿ ಕೋ–ವಿನ್ ಆ್ಯಪ್‌ ಅಥವಾ ಆರೋಗ್ಯ ಸೇತು ಆ್ಯಪ್‌ ಮೂಲಕ ಯಾವುದೇ ಸಮಯದಲ್ಲಿ, ಯಾವುದೇ ಸ್ಥಳದಿಂದ ಸಮಯ ಕಾಯ್ದಿರಿಸಬಹುದು ಎಂದು ಕೇಂದ್ರ ಆರೋಗ್ಯ ಸಚಿವಾಲಯವು ಹೇಳಿದೆ. 60 ವರ್ಷ ದಾಟಿದವರು ಮತ್ತು 2022ರ ಜನವರಿ 1ಕ್ಕೆ 60 ವರ್ಷ ತುಂಬುವವರು ಲಸಿಕೆಗಾಗಿ ನೋಂದಣಿ ಮಾಡಿಕೊಳ್ಳಲು ಅರ್ಹರು. ಬೇರೆ ರೋಗಗಳನ್ನು ಹೊಂದಿರುವ, 2022ರ ಜನವರಿ 1ಕ್ಕೆ 45 ವರ್ಷ ತುಂಬುವವರು ಮತ್ತು ಈಗಾಗಲೇ 45 ದಾಟಿದವರು ಕೂಡ ನೋಂದಣಿಗೆ ಅರ್ಹರು. 20 ಅನಾರೋಗ್ಯಗಳನ್ನು ಆರೋಗ್ಯ ಸಚಿವಾಲಯವು ಪಟ್ಟಿ ಮಾಡಿದೆ.  

ಇನ್ನು ಈಗಾಗಲೇ CoWin2.0 ಕುರಿತ ಮಾರ್ಗದರ್ಶನ ಟಿಪ್ಪಣಿಯನ್ನು ಕೇಂದ್ರಸರ್ಕಾರವು ರಾಜ್ಯಗಳೊಂದಿಗೆ ಹಂಚಿಕೊಂಡಿದ್ದು, 'ಸಿವಿಸಿ (COVID ವ್ಯಾಕ್ಸಿನೇಷನ್ ಸೆಂಟರ್) ನಲ್ಲಿ ಲಭ್ಯವಿರುವ ಲಸಿಕೆ ಪ್ರಕಾರವನ್ನು ಆನ್‌ಲೈನ್ ನೋಂದಣಿ ಸಮಯದಲ್ಲಿ ನಾಗರಿಕರಿಗೆ ಪ್ರದರ್ಶಿಸಲಾಗುವುದಿಲ್ಲ ಎಂದೂ ಹೇಳಿದೆ. ಆದರೆ ಪೂರ್ವ-ಬುಕಿಂಗ್ ಸ್ಲಾಟ್ ಮೂಲಕ ಅಥವಾ ಗೊತ್ತುಪಡಿಸಿದ ಕೇಂದ್ರಗಳಲ್ಲಿ ಕೋವಿಡ್ ಲಸಿಕೆ ಡೋಸ್ ಗಳನ್ನು ತೆಗೆದುಕೊಳ್ಳಬಹುದು. ಫಲಾನುಭವಿಗಳ 1 ಮತ್ತು 2 ನೇ ಡೋಸ್ ವೇಳೆ ಲಸಿಕೆಗಳ ಗೊಂದಲ ಉಂಟಾಗಬಾರದು ಎಂಬ ಉದ್ದೇಶದಿಂದ ಸಿವಿಸಿ ಸಾಮಾನ್ಯವಾಗಿ ಒಂದೇ ರೀತಿಯ ಲಸಿಕೆಗಳನ್ನು ಹೊಂದಿರುತ್ತದೆ ಎಂದು ಹೇಳಲಾಗಿದೆ.

ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ ಅಡಿಯಲ್ಲಿ ಗೊತ್ತುಪಡಿಸಿದ 10,000 ಆಸ್ಪತ್ರೆಗಳಿವೆ. ಕೇಂದ್ರ ಸರ್ಕಾರದ ಆರೋಗ್ಯ ಯೋಜನೆಯಡಿ ಸುಮಾರು 600 ಆಸ್ಪತ್ರೆಗಳನ್ನು ಗೊತ್ತು ಮಾಡಲಾಗಿದೆ. 

ಒಂದು ಮೊಬೈಲ್ ಸಂಖ್ಯೆ ಗರಿಷ್ಠ 4 ಮಂದಿಗೆ ಮಾತ್ರ ನೋಂದಣಿ
ಇನ್ನು ಒಂದು ಮೊಬೈಲ್‌ ಸಂಖ್ಯೆ ನೀಡಿ ಗರಿಷ್ಠ ನಾಲ್ಕು ಫಲಾನುಭವಿಗಳು ನೋಂದಣಿ ಮಾಡಿಕೊಳ್ಳಬಹುದು. ಆಧಾರ್‌ ಕಾರ್ಡ್‌, ಮತದಾರರ ಗುರುತಿನ ಚೀಟಿ, ಪಾಸ್‌ಪೋರ್ಟ್‌, ಚಾಲನಾ ಪರವಾನಗಿ, ಪ್ಯಾನ್‌ ಕಾರ್ಡ್‌, ಎನ್‌ಪಿಆರ್‌ ಸ್ಮಾರ್ಟ್‌ ಕಾರ್ಡ್‌, ಭಾವಚಿತ್ರ ಇರುವ ಪೆನ್ಶನ್‌ ಪತ್ರದಲ್ಲಿ ಯಾವುದಾದರೂ ಒಂದನ್ನು ಬಳಸಿ ನೋಂದಣಿ ಮಾಡಬಹುದು.  ಕೇಂದ್ರ ಸರ್ಕಾರವು ಗುರುತಿಸಿರುವ 8,600ಕ್ಕೂ ಹೆಚ್ಚು ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ನೀಡಿಕೆ ನಡೆಯಲಿದೆ. ಪ್ರತಿ ದಿನ ಸಂಜೆ 3 ಗಂಟೆಯವರೆಗೆ ಈ ಆಸ್ಪತ್ರೆಗೆ ಭೇಟಿ ನೀಡಿಯೂ ಲಸಿಕೆಗಾಗಿ ನೋಂದಣಿ ಮಾಡಿಕೊಳ್ಳಬಹುದು. 

ರಾಜ್ಯದ 250ಕ್ಕೂ ಹೆಚ್ಚು ಆಸ್ಪತ್ರೆಗಳು
ಬೆಂಗಳೂರು: ಲಸಿಕೆ ನೀಡಿಕೆಗಾಗಿ ರಾಜ್ಯದ 250ಕ್ಕೂ ಹೆಚ್ಚು ಆಸ್ಪತ್ರೆಗಳನ್ನು ಗುರುತಿಸಲಾಗಿದೆ. ರಾಜ್ಯದ ಎಲ್ಲ ಜಿಲ್ಲಾ ಆಸ್ಪತ್ರೆಗಳು, ತಾಲ್ಲೂಕು ಆಸ್ಪತ್ರೆಗಳು, ಆಯ್ದ ವೈದ್ಯಕೀಯ ಕಾಲೇಜುಗಳು ಹಾಗೂ ಕೆಲ ಖಾಸಗಿ ಆಸ್ಪತ್ರೆಗಳನ್ನು ಗುರುತಿಸಲಾಗಿದೆ. ಮಧ್ಯಾಹ್ನ 12 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಲಸಿಕೆ ನೀಡಲಾಗುತ್ತದೆ. ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ಲಸಿಕೆ ನೀಡಲಾಗುತ್ತದೆ. ಖಾಸಗಿ ಆಸ್ಪತ್ರೆಗಳಲ್ಲಿ 250ರೂ ಪಾವತಿಸಬೇಕು. ಈಗಾಲೇ ಮೊದಲ ಡೋಸ್ ಲಸಿಕೆ ಪಡೆದವರಿಗೆ ಎರಡನೇ ಡೋಸ್ ನೀಡಿಕೆ ಮುಂದುವರಿಯಲಿದೆ. ಅದೇ ರೀತಿ, ಮೊದಲ ಹಂತದಲ್ಲಿ ಬಿಟ್ಟು ಹೋದ ಮತ್ತು ಗೈರಾದ ಆರೋಗ್ಯ ಕಾರ್ಯಕರ್ತರು ಹಾಗೂ ಮುಂಚೂಣಿ ಯೋಧರಿಗೆ ಸಹ ಲಸಿಕೆ ನೀಡಲಾಗುತ್ತದೆ.

ಆಯ್ಕೆಗೆ ಅವಕಾಶ ಇಲ್ಲ
ದೇಶದಲ್ಲಿ ಈಗ ಎರಡು ಲಸಿಕೆಗಳು ಲಭ್ಯ ಇವೆ. ಪುಣೆಯ ಸೀರಂ ಇನ್ಸ್‌ಟಿಟ್ಯೂಟ್‌ ತಯಾರಿಸಿರುವ ಕೋವಿಶೀಲ್ಡ್‌ ಮತ್ತು ಹೈದರಾಬಾದ್‌ನ ಭಾರತ್‌ ಬಯೊಟೆಕ್‌ ಅಭಿವೃದ್ಧಿಪಡಿಸಿರುವ ಕೋವ್ಯಾಕ್ಸಿನ್‌ಗಳನ್ನು ಜನರು ಪಡೆದುಕೊಳ್ಳಬಹುದು. ಆದರೆ, ಇದರಲ್ಲಿ ಯಾವುದನ್ನು ಪಡೆದುಕೊಳ್ಳಬೇಕು ಎಂಬ ಆಯ್ಕೆಯು ಜನರಿಗೆ ಇಲ್ಲ. ಆಸ್ಪತ್ರೆಯವರು ಯಾವ ಲಸಿಕೆ ನೀಡುತ್ತಾರೆಯೋ ಅದನ್ನೇ ಪಡೆದುಕೊಳ್ಳಬೇಕು. ಹೆಚ್ಚಿನವರಿಗೆ ಕೋವಿಶೀಲ್ಡ್‌ ಲಸಿಕೆಯನ್ನೇ ನೀಡಲಾಗುವುದು. ಆದರೆ, ಪರಿಣಾಮಕಾರಿತ್ವದ ದತ್ತಾಂಶ ಲಭ್ಯ ಇಲ್ಲದೆಯೂ ಭಾರತೀಯ ಔಷಧ ನಿಯಂತ್ರಕರು ಅನುಮೋದನೆ ನೀಡಿರುವ ಕೋವ್ಯಾಕ್ಸಿನ್‌ ಲಸಿಕೆಯನ್ನು ಕೆಲವು ಜನರಿಗೆ ನೀಡಲಾಗುವುದು ಎಂದು ಮೂಲಗಳು ತಿಳಿಸಿವೆ. 

ರಾಜ್ಯದಲ್ಲಿ ಜ.16 ರಿಂದ ಪ್ರಾರಂಭವಾಗಿದ್ದ ಮೊದಲ ಹಂತದ ಅಭಿಯಾನದಲ್ಲಿ ಆರೋಗ್ಯ ಕಾರ್ಯಕ‌ರ್ತರಿಗೆ ಲಸಿಕೆ ನೀಡಲಾಗಿದೆ. ಈವರೆಗೆ 4,47,267 ಮಂದಿ ಆರೋಗ್ಯ ಕಾರ್ಯಕರ್ತರು ಹಾಗೂ 1,58,575 ಮಂದಿ ಫ್ರಂಟ್ ಲೈನ್ ವಾರಿಯರ್ಸ್ ಗೆ ಲಸಿಕೆ ಪಡೆದುಕೊಂಡಿದ್ದಾರೆ. 

Stay up to date on all the latest ರಾಷ್ಟ್ರೀಯ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp