ಪ್ರಧಾನಿ ಮೋದಿ, ಉಪರಾಷ್ಟ್ರಪತಿ ನಾಯ್ಡು ಸೇರಿದಂತೆ 1.28 ಲಕ್ಷ ಹಿರಿಯ ನಾಗರಿಕರಿಗೆ ಕೋವಿಡ್ ಲಸಿಕೆ
ಮಾರಕ ಕೊರೋನಾ ವೈರಸ್ ವಿರುದ್ಧದ ಲಸಿಕೆ ವಿತರಣಾ ಕಾರ್ಯಕ್ರಮದ ಮುಂದಿನ ಭಾಗವಾಗಿ ಸೋಮವಾರದಿಂದ 60 ವರ್ಷ ಮೇಲ್ಪಟ್ಟವರಿಗೆ ಮತ್ತು 45 ವರ್ಷ ದಾಟಿದ ಇತರೆ ಅನಾರೋಗ್ಯ ಸಂಬಂಧಿತ ಸಮಸ್ಯೆಗಳಿರುವ ವ್ಯಕ್ತಿಗಳಿಗೆ ಲಸಿಕೆ ನೀಡಿಕೆ ಆರಂಭಿಸಲಾಗಿದೆ.
Published: 02nd March 2021 08:20 AM | Last Updated: 02nd March 2021 08:20 AM | A+A A-

ಕೋವಿಡ್ ಲಸಿಕೆ ಪಡೆದ ಇನ್ಫೋಸಿಸ್ ಅಧ್ಯಕ್ಷ ನಾರಾಯಣ ಮೂರ್ತಿ
ನವದೆಹಲಿ: ಮಾರಕ ಕೊರೋನಾ ವೈರಸ್ ವಿರುದ್ಧದ ಲಸಿಕೆ ವಿತರಣಾ ಕಾರ್ಯಕ್ರಮದ ಮುಂದಿನ ಭಾಗವಾಗಿ ಸೋಮವಾರದಿಂದ 60 ವರ್ಷ ಮೇಲ್ಪಟ್ಟವರಿಗೆ ಮತ್ತು 45 ವರ್ಷ ದಾಟಿದ ಇತರೆ ಅನಾರೋಗ್ಯ ಸಂಬಂಧಿತ ಸಮಸ್ಯೆಗಳಿರುವ ವ್ಯಕ್ತಿಗಳಿಗೆ ಲಸಿಕೆ ನೀಡಿಕೆ ಆರಂಭಿಸಲಾಗಿದೆ.
ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರು ಲಸಿಕೆ ಹಾಕಿಸಿಕೊಳ್ಳುವ ಮೂಲಕ ಈ ಹಂತಕ್ಕೆ ಚಾಲನೆ ನೀಡಿದರು. ಬಳಿಕ ಉಪ ರಾಷ್ಟ್ಪಪತಿ ವೆಂಕಯ್ಯ ನಾಯ್ಡು, ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್, ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್, ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಮುಂತಾದ ಅನೇಕ ಗಣ್ಯರು ಕೋವಿಡ್–19 ಲಸಿಕೆಯ ಮೊದಲ ಡೋಸ್ ಹಾಕಿಸಿಕೊಂಡಿದ್ದಾರೆ. ನಿನ್ನೆ ಒಂದೇ ದಿನ ಒಟ್ಟು 1.28 ಲಕ್ಷ ಫಲಾನುಭವಿಗಳಿಗೆ ಲಸಿಕೆ ಹಾಕಲಾಗಿದ್ದು, ಈ ಪೈಕಿ 1,28,630 ಫಲಾನುಭವಿಗಳು 60 ವರ್ಷ ಮೇಲ್ಟಟ್ಟವರಾಗಿದ್ದು, 18,850 ಮಂದಿ 45 ವರ್ಷ ದಾಟಿದ ಇತರೆ ಅನಾರೋಗ್ಯ ಸಂಬಂಧಿತ ಸಮಸ್ಯೆಗಳಿರುವ ವ್ಯಕ್ತಿಗಳಿದ್ದರು ಎನ್ನಲಾಗಿದೆ.
ಆ ಮೂಲಕ ದೇಶದಲ್ಲಿ ಲಸಿಕೆ ಪಡೆದವರ ಸಂಖ್ಯೆ ಒಟ್ಟಾರೆ 1.47 ಕೋಟಿಗೆ ಏರಿಕೆಯಾಗಿದೆ. ಕಳೆದ ಜನವರಿ 16ರಂದು ದೇಶದಲ್ಲಿ ಲಸಿಕೆ ನೀಡಿಕೆ ಆರಂಭವಾಗಿತ್ತು. ಆರಂಭಿಕ ಹಂತದಲ್ಲಿ ಆರೋಗ್ಯ ಸಿಬ್ಬಂದಿಗಳಿಗೆ, ಬಳಿಕೆ ಫೆಬ್ರವರಿ 2ರಿಂದ ಮುಂಚೂಣಿ ಕಾರ್ಯಕರ್ತರಿಗೆ ಲಸಿಕೆ ಹಾಕಲಾಗಿತ್ತು. ಇದೀಗ ಮೂರನೇ ಹಂತ ಆರಂಭವಾಗಿದ್ದು, 60 ವರ್ಷ ಮೇಲ್ಪಟ್ಟವರಿಗೆ ಮತ್ತು 45 ವರ್ಷ ದಾಟಿದ ಇತರೆ ಅನಾರೋಗ್ಯ ಸಂಬಂಧಿತ ಸಮಸ್ಯೆಗಳಿರುವ ವ್ಯಕ್ತಿಗಳಿಗೆ ಲಸಿಕೆ ನೀಡಲಾಗುತ್ತಿದೆ.
ಕೋವಿನ್ ಪೋರ್ಟಲ್ ನಲ್ಲಿ 25 ಲಕ್ಷ ಮಂದಿಯಿಂದ ನೋಂದಣಿ
ಇನ್ನು ಲಸಿಕೆ ವಿತರಣೆಗಾಗಿ ಕೇಂದ್ರ ಸರ್ಕಾರ ಆರಂಭಿಸಿರುವ ಕೋವಿನ್ ಪೋರ್ಟಲ್ ನಲ್ಲಿ ಸುಮಾರು 25 ಲಕ್ಷಕ್ಕೂ ಅಧಿಕ ಮಂದಿ ಲಸಿಕೆ ಪಡೆಯಲು ಹೆಸರು ನೋಂದಾಯಿಸಿದ್ದಾರೆ. ಈ ಪೈಕಿ ಸೋಮವಾರ ಒಂದೇ ದಿನ 6.44 ಲಕ್ಷ ಆಪಾಯಿಂಟ್ ಮೆಂಟ್ ಬುಕ್ ಆಗಿದೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
"ಸೋಮವಾರ ಸಂಜೆ 7 ರವರೆಗಿನ ತಾತ್ಕಾಲಿಕ ವರದಿಯ ಪ್ರಕಾರ ಈ ವರೆಗೂ ಒಟ್ಟು 1,47,28,569 ಡೋಸ್ ಲಸಿಕೆಯನ್ನು ನೀಡಲಾಗಿದೆ. ಇವುಗಳಲ್ಲಿ 1 ನೇ ಡೋಸ್ ತೆಗೆದುಕೊಂಡ 66,95,665 ವೈಯಕ್ತಿಕ ಆರೋಗ್ಯ ಕಾರ್ಯಕರ್ತರು ಮತ್ತು 2 ನೇ ಡೋಸ್ ತೆಗೆದುಕೊಂಡ 25,57,837 ವೈಯಕ್ತಿಕ ಆರೋಗ್ಯ ಕಾರ್ಯಕರ್ತರು ಸೇರಿದ್ದಾರೆ. ಅಂತೆಯೇ 53,27,587 ಮುಂಚೂಣಿ ಕಾರ್ಯಕರ್ತರು (1 ನೇ ಡೋಸ್), 60 ವರ್ಷಕ್ಕಿಂತ ಮೇಲ್ಪಟ್ಟ 1,28,630 ಫಲಾನುಭವಿಗಳು ಮತ್ತು 45 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ನಿರ್ದಿಷ್ಟ ಸಹ-ಕಾಯಿಲೆಗಳಿರುವ 18,850 ಫಲಾನುಭವಿಗಳು ಲಸಿಕೆ ಪಡೆದಿದ್ದಾರೆ.