ಬಿಹಾರದಲ್ಲಿ ಖಾಸಗಿ ಆಸ್ಪತ್ರೆಗಳೂ ಸೇರಿದಂತೆ ಎಲ್ಲೆಡೆ ಕೊರೋನಾ ಲಸಿಕೆ ಉಚಿತ: ಸಿಎಂ ನಿತೀಶ್ ಕುಮಾರ್
ಬಿಹಾರದ ರಾಜ್ಯದಲ್ಲಿ ಖಾಸಗಿ ಆಸ್ಪತ್ರೆಗಳೂ ಸೇರಿದಂತೆ ಎಲ್ಲೆಡೆ ಕೊರೋನಾ ಲಸಿಕೆ ಉಚಿತವಾಗಿ ನೀಡಲಾಗುತ್ತದೆ ಎಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಹೇಳಿದ್ದಾರೆ.
Published: 02nd March 2021 02:02 PM | Last Updated: 02nd March 2021 02:10 PM | A+A A-

ನಿತೀಶ್ ಕುಮಾರ್
ಪಾಟ್ನಾ: ಬಿಹಾರದ ರಾಜ್ಯದಲ್ಲಿ ಖಾಸಗಿ ಆಸ್ಪತ್ರೆಗಳೂ ಸೇರಿದಂತೆ ಎಲ್ಲೆಡೆ ಕೊರೋನಾ ಲಸಿಕೆ ಉಚಿತವಾಗಿ ನೀಡಲಾಗುತ್ತದೆ ಎಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಹೇಳಿದ್ದಾರೆ.
ಬಿಹಾರ ಸರ್ಕಾರ ವಿಧಾನ ಸಭಾ ಚುನಾವಣೆ ವೇಳೆ ಉಚಿತವಾಗಿ ಎಲ್ಲರಿಗೂ ಲಸಿಕೆ ನೀಡುವ ಭರವಸೆ ನೀಡಿತ್ತು. ಅದರಂತೆ ಈಗ ಅಸ್ತಿತ್ವದಲ್ಲಿರುವ ಜೆಡಿಯು-ಬಿಜೆಪಿ ಮೈತ್ರಿ ಸರ್ಕಾರ ಚುನಾವಣಾ ಪೂರ್ವ ಭರವಸೆ ಈಡೇರಿಸಲು ಮುಂದಾಗಿದ್ದು, ಉಚಿತವಾಗಿ ಲಸಿಕೆ ನೀಡಲಿದೆ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿಕೆ ನೀಡಿದ್ದಾರೆ.
ನಿತೀಶ್ ಕುಮಾರ್ ಅವರು ಇಂದು 70ನೇ ವಸಂತಕ್ಕೆ ಕಾಲಿಟ್ಟಿದ್ದು, ಈ ನಡುವಲ್ಲೇ ಲಸಿಕೆ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಚಿತ ಲಸಿಕೆ ನೀಡುವ ಘೋಷಣೆ ಮಾಡಿದ್ದಾರೆ.
ರಾಜ್ಯದಲ್ಲಿ ಖಾಸಗಿ ಆಸ್ಪತ್ರೆಗಳೂ ಸೇರಿದಂತೆ ಎಲ್ಲೆಡೆ ಕೊರೋನಾ ಲಸಿಕೆಯನ್ನು ಉಚಿತವಾಗಿ ನೀಡಲಾಗುತ್ತದೆ. ಲಸಿಕೆಯ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಮೂರನೇ ಹಂತದ ಲಸಿಕೆ ವಿತರಣೆ ಆರಂಭವಾಗಿದ್ದು, 60 ವರ್ಷ ಮೇಲ್ಪಟ್ಟ ಹಾಗೂ ದೀರ್ಘಕಾಲಿಕ ರೋಗದಿಂದ ಬಳಲುತ್ತಿರುವವರಿಗೆ ಲಸಿಕೆ ನೀಡಲಾಗುತ್ತಿದೆ. ಪ್ರತೀಯೊಬ್ಬರೂ ನಿರ್ಭೀತಿಯಿಂದ ಲಸಿಕೆಯನ್ನು ಪಡೆಯಬೇಕು. ಬಿಹಾರ ರಾಜ್ಯದ ವಿಧಾನ ಪರಿಷತ್ ಹಾಗೂ ವಿಧಾನಸಭೆಯ ಎಲ್ಲಾ ಸದಸ್ಯರಿಗೂ ಲಸಿಕೆ ನೀಡಲು ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. ರಾಜ್ಯದಲ್ಲಿರುವ ಪ್ರತೀಯೊಬ್ಬರಿಗೂ ಲಸಿಕೆ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಈ ನಡುವೆ ಬಿಹಾರ ರಾಜ್ಯದ ಆರೋಗ್ಯ ಸಚಿವ ಮಂಗಲ್ ಪಾಂಡೆಯವರೂ ಕೂಡ ಲಸಿಕೆ ಪಡೆದುಕೊಂಡಿದ್ದಾರೆ. ಮೂರನೇ ಹಂತದ ಲಸಿಕೆ ಅಭಿಯಾನದಲ್ಲಿ 60 ವರ್ಷ ಮೇಲ್ಪಟ್ಟ 1 ಕೋಟಿ ಜನರಿಗೆ ಲಸಿಕೆ ನೀಡಲಾಗುತ್ತದೆ ಎಂದು ಮಂಗಲ್ ಪಾಂಡೆ ಮಾಹಿತಿ ನೀಡಿದ್ದಾರೆ.