ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಲವ್ ಜಿಹಾದ್, ಗೋ ಕಳ್ಳ ಸಾಗಣೆಗೆ ಬ್ರೇಕ್: ಯೋಗಿ ಆದಿತ್ಯನಾಥ್
ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಓಲೈಕೆ ರಾಜಕಾರಣ ಹಾಗೂ ರಾಷ್ಟ್ರೀಯ ಭದ್ರತೆಗೆ ಧಕ್ಕೆಯಾಗುವಂತಹ ಕೆಲಸಗಳಲ್ಲಿ ತೊಡಗಿದ್ದಾರೆ ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಆರೋಪಿಸಿದ್ದಾರೆ.
Published: 02nd March 2021 06:16 PM | Last Updated: 02nd March 2021 06:16 PM | A+A A-

ಯೋಗಿ ಆದಿತ್ಯನಾಥ್
ಮಾಲ್ಡಾ: ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಓಲೈಕೆ ರಾಜಕಾರಣ ಹಾಗೂ ರಾಷ್ಟ್ರೀಯ ಭದ್ರತೆಗೆ ಧಕ್ಕೆಯಾಗುವಂತಹ ಕೆಲಸಗಳಲ್ಲಿ ತೊಡಗಿದ್ದಾರೆ ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಆರೋಪಿಸಿದ್ದಾರೆ.
ವಿಧಾನಸಭೆ ಚುನಾವಣೆ ಪ್ರಚಾರದ ಅಂಗವಾಗಿ ಮಾ.02 ರಂದು ಮಾಲ್ಡಾದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿರುವ ಯೋಗಿ ಆದಿತ್ಯನಾಥ್, ಮಮತಾ ಬ್ಯಾನರ್ಜಿ ಓಟ್ ಬ್ಯಾಂಕ್ ರಾಜಕಾರಣಕ್ಕಾಗಿ ಅಕ್ರಮ ವಲಸಿಗರನ್ನು ರಾಜ್ಯದಲ್ಲಿ ಬಿಟ್ಟುಕೊಳ್ಳುತ್ತಿದ್ದು, ರಾಷ್ಟ್ರೀಯ ಭದ್ರತೆಗೆ ಧಕ್ಕೆ ಉಂಟುಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಬಿಜೆಪಿ ಅಧಿಕಾರಕ್ಕೆ ಬಂದಲ್ಲಿ ರಾಜ್ಯದಲ್ಲಿ ಗೋ ಕಳ್ಳಸಾಗಣಿಕೆ ಹಾಗೂ ಲವ್ ಜಿಹಾದ್ ಗೆ ಬ್ರೇಕ್ ಹಾಕುವುದಾಗಿ ಯೋಗಿ ಆದಿತ್ಯನಾಥ್ ಭರವಸೆ ನೀಡಿದ್ದಾರೆ.
"ಒಂದು ಕಾಲದಲ್ಲಿ ಪಶ್ಚಿಮ ಬಂಗಾಳ ಇಡೀ ದೇಶವನ್ನು ಮುನ್ನಡೆಸುತ್ತಿತ್ತು. ಈಗ ಅದೇ ರಾಜ್ಯದಲ್ಲಿ ಕಾನೂನು ಇಲ್ಲದಂತಹ ಪರಿಸ್ಥಿತಿ ಉಂಟಾಗಿದೆ, ರಾಜ್ಯದಲ್ಲಿ ಲವ್ ಜಿಹಾದ್ ನಡೆಯುತ್ತಿದ್ದರೂ ಟಿಎಂಸಿ ಸರ್ಕಾರ ಅದನ್ನು ತಡೆಗಟ್ಟುತ್ತಿಲ್ಲ. ಓಟ್ ಬ್ಯಾಂಕ್ ನ ರಾಜಕಾರಣದಿಂದಾಗಿ ಬಂಗಾಳದ ಭದ್ರತೆಗೆ ಅಷ್ಟೇ ಅಲ್ಲದೇ ರಾಷ್ಟ್ರದ ಭದ್ರತೆಗೂ ಅಪಾಯ ಎದುರಾಗುತ್ತಿದೆ. ಟಿಎಂಸಿ ಸರ್ಕಾರಕ್ಕೆ ನಿರಾಶ್ರಿತರು ಪೌರತ್ವ ಪಡೆದರೆ ಸಮಸ್ಯೆ ಇದೆ. ಆದರೆ ಅಕ್ರಮ ವಲಸಿಗರು ರಾಜ್ಯಕ್ಕೆ ಬರುತ್ತಿದ್ದರೂ ಅದು ಸಮಸ್ಯೆ ಎನಿಸುವುದಿಲ್ಲ ಎಂದು ಆದಿತ್ಯನಾಥ್ ಹೇಳಿದ್ದಾರೆ.
ರಾಜ್ಯದಲ್ಲಿ ಜೈ ಶ್ರೀರಾಮ್ ಘೋಷಣೆ ಕೂಗುವುದಕ್ಕೆ ನಿರ್ಬಂಧ ಇದೆ. ಧಾರ್ಮಿಕ ಭಾವನೆಗಳೊಂದಿಗೆ ಆಟ ಆಡುತ್ತಿರುವ ಟಿಎಂಸಿ ಸರ್ಕಾರಕ್ಕೆ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಆದಿತ್ಯನಾಥ್ ಹೇಳಿದ್ದಾರೆ.