ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಿಗೆ ಇಂದು ಕೋವಿಡ್ ಲಸಿಕೆ: ಆಯ್ಕೆ ಇಲ್ಲ ಎಂದ ಆರೋಗ್ಯ ಸಚಿವಾಲಯ

ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಿಗೆ ಇಂದು ಕೋವಿಡ್ ಲಸಿಕೆ ವಿತರಣೆ ಮಾಡಲಾಗುತ್ತಿದ್ದು, ಲಸಿಕೆ ಪಡೆಯುವ ನ್ಯಾಯಮೂರ್ತಿಗಳಿಗೆ ಲಸಿಕೆಗಳ ನಡುವೆ ಆಯ್ಕೆಗೆ ಅವಕಾಶ ಇಲ್ಲ ಎಂದು ಕೇಂದ್ರ ಆರೋಗ್ಯ ಇಲಾಖೆ ಸ್ಪಷ್ಟನೆ ನೀಡಿದೆ.

Published: 02nd March 2021 10:07 AM  |   Last Updated: 02nd March 2021 10:08 AM   |  A+A-


Supreme court

ಸುಪ್ರೀಂ ಕೋರ್ಟ್

Posted By : Srinivasamurthy VN
Source : PTI

ನವದೆಹಲಿ: ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಿಗೆ ಇಂದು ಕೋವಿಡ್ ಲಸಿಕೆ ವಿತರಣೆ ಮಾಡಲಾಗುತ್ತಿದ್ದು, ಲಸಿಕೆ ಪಡೆಯುವ ನ್ಯಾಯಮೂರ್ತಿಗಳಿಗೆ ಲಸಿಕೆಗಳ ನಡುವೆ ಆಯ್ಕೆಗೆ ಅವಕಾಶ ಇಲ್ಲ ಎಂದು ಕೇಂದ್ರ ಆರೋಗ್ಯ ಇಲಾಖೆ ಸ್ಪಷ್ಟನೆ ನೀಡಿದೆ.

ಪ್ರಧಾನಿ ನರೇಂದ್ರ ಮೋದಿ ಸೋಮವಾರ ಏಮ್ಸ್‌ನಲ್ಲಿ ಕೊವ್ಯಾಕ್ಸಿನ್‌ ಲಸಿಕೆ ಹಾಕಿಸಿಕೊಳ್ಳುವ ಮೂಲಕ ದೇಶದಲ್ಲಿ 3ನೇ ಹಂತದ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಇದೀಗ ಅದರ ಮುಂದುವರೆದ ಭಾಗವಾಗಿ ಇಂದು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳು, ನಿವೃತ್ತ ನ್ಯಾಮೂರ್ತಿಗಳು ಹಾಗೂ ಅವರ ಮನೆಯ ಸದಸ್ಯರಿಗೆ ಇಂದಿನಿಂದ ಕೋವಿಡ್‌–19 ಲಸಿಕೆ ವಿತರಣೆ ಮಾಡಲಾಗುತ್ತಿದೆ. ಸುಪ್ರೀಂ ಕೋರ್ಟ್‌ನ 30 ನ್ಯಾಯಮೂರ್ತಿಗಳ ಪೈಕಿ 59 ವರ್ಷ ವಯಸ್ಸಿನ ಸೂರ್ಯ ಕಾಂತ್‌ ಅವರನ್ನು ಹೊರತು ಪಡಿಸಿ, ಉಳಿದ ಎಲ್ಲ ನ್ಯಾಯಮೂರ್ತಿಗಳು ಕೋವಿಡ್‌ ಲಸಿಕೆ ಹಾಕಿಸಿಕೊಳ್ಳಲು ಅವಕಾಶವಿದೆ. ಎರಡನೇ ಹಂತದ ಲಸಿಕೆ ಅಭಿಯಾನದಲ್ಲಿ 60 ವರ್ಷ ವಯಸ್ಸು ಮೇಲ್ಪಟ್ಟವರು ಹಾಗೂ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವ 45 ವರ್ಷ ವಯಸ್ಸಿಗಿಂತ ಮೇಲ್ಪಟ್ಟ ವ್ಯಕ್ತಿಗಳು ಲಸಿಕೆ ಹಾಕಿಸಿಕೊಳ್ಳಬಹುದಾಗಿದೆ.

ಲಸಿಕೆ ಆಯ್ಕೆ ಇಲ್ಲ
ಇನ್ನು ದೇಶದಲ್ಲಿ ಪ್ರಸ್ತುತ ಎರಡು ಬಗೆಯ ಕೋವಿಡ್ ಲಸಿಕೆಗಳನ್ನು ನೀಡಲಾಗುತ್ತಿದ್ದು, ಭಾರತ್‌ ಬಯೋಟೆಕ್‌ ಅಭಿವೃದ್ಧಿ ಪಡಿಸಿರುವ ಕೊವ್ಯಾಕ್ಸಿನ್‌ ಹಾಗೂ ಪುಣೆಯ ಸೆರಂ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾ ತಯಾರಿಸಿರುವ ಕೋವಿಶೀಲ್ಡ್‌ ಲಸಿಕೆಗಳನ್ನು ನೀಡಲಾಗುತ್ತಿದೆ. ಆದರೆ ನ್ಯಾಯಾಧೀಶರಿಗೆ ನಿರ್ದಿಷ್ಟ ಲಸಿಕೆಯ ಆಯ್ಕೆ ಮಾಡಲು ಅವಕಾಶವಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ. 

ನ್ಯಾಯಾಲಯದ ಆವರಣದಲ್ಲೇ ಲಸಿಕೆ ವಿತರಣೆಗೆ ಸಿದ್ಧತೆ
ಲಸಿಕೆ ನೀಡಲು ಸರ್ಕಾರ ನಿಗದಿ ಪಡಿಸಿರುವ ಆಸ್ಪತ್ರೆಗಳ ಜೊತೆಗೆ ಸುಪ್ರೀಂ ಕೋರ್ಟ್‌ ಆವರಣದಲ್ಲಿಯೇ ಲಸಿಕೆ ಹಾಕುವ ವ್ಯವಸ್ಥೆಯನ್ನು ಕಲ್ಪಿಸಿದೆ. ಕೇಂದ್ರ ಸರ್ಕಾರದ ನಿಯಮಗಳ ಅನ್ವಯ ಲಸಿಕೆಯ ದರ ನಿಗದಿಯಾಗಿರುತ್ತದೆ. ಪ್ರತಿ ಡೋಸ್‌ ಲಸಿಕೆಗೆ ಖಾಸಗಿ ಆಸ್ಪತ್ರೆಗಳು ₹250ರ ವರೆಗೂ ಶುಲ್ಕ ವಿಧಿಸಬಹುದಾಗಿದೆ.

ಇನ್ನು ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ, ಜನವರಿ 16ರಿಂದ ಮಾರ್ಚ್‌ 1ರವರೆಗೂ ದೇಶದಲ್ಲಿ 1.47 ಕೋಟಿಗೂ ಅಧಿಕ ಕೋವಿಡ್‌ ಲಸಿಕೆ ಡೋಸ್‌ಗಳನ್ನು ಹಾಕಲಾಗಿದೆ.

ಕೋವಿಡ್ ಸಾಂಕ್ರಾಮಿಕ ಅವಧಿಯಲ್ಲಿ ಸುಪ್ರೀಂ ಕೋರ್ಟ್‌ನ ಆರು ನ್ಯಾಯಮೂರ್ತಿಗಳು ಹಾಗೂ ಹಲವು ಸಿಬ್ಬಂದಿ ಕೊರೊನಾ ವೈರಸ್ ಸೋಂಕಿಗೆ ಒಳಗಾಗಿದ್ದರು. 2020ರ ಮಾರ್ಚ್‌ 24ರಿಂದ ಸುಪ್ರೀಂ ಕೋರ್ಟ್‌ ವಿಡಿಯೊ ಕಾನ್ಫರೆನ್ಸ್‌ ಮೂಲಕ ಪ್ರಕರಣಗಳ ವಿಚಾರಣೆ ನಡೆಸುತ್ತಿದ್ದು, ಶೀಘ್ರದಲ್ಲೇ ಭೌತಿಕವಾಗಿ ವಿಚಾರಣೆ ಶುರು ಮಾಡಲು ಕೋರ್ಟ್‌ ಸಿದ್ಧತೆ ನಡೆಸಿದೆ. ಮುಂದಿನ ದಿನಗಳಲ್ಲಿ ವಾರದಲ್ಲಿ ಕೆಲವು ದಿನಗಳು ಕೋರ್ಟ್‌ನಲ್ಲಿ ನೇರ ವಿಚಾರಣೆ ನಡೆಸಲು ನಿರ್ಧರಿಸಲಾಗಿದೆ. 'ಕೋರ್ಟ್‌ನಲ್ಲೇ ನೇರ ವಿಚಾರಣೆ ಪುನರಾರಂಭಿಸಲು ನ್ಯಾಯಮೂರ್ತಿಗಳು ಸ್ವತಃ ಆಸಕ್ತಿ ತೋರಿದ್ದಾರೆ. ಆದರೆ ಕೆಲವು ವೈದ್ಯಕೀಯ ಹಾಗೂ ತಾಂತ್ರಿಕ ಸಮಸ್ಯೆಗಳಿದ್ದು, ಸುಪ್ರೀಂ ಕೋರ್ಟ್‌ನ ರೆಜಿಸ್ಟ್ರಿ ಅವುಗಳನ್ನು ಪರಿಹರಿಸಲು ಪ್ರಯತ್ನಿಸುತ್ತಿದೆ. ಹಾಗಾಗಿ, ಹಂತ ಹಂತವಾಗಿ ಪ್ರಕ್ರಿಯೆ ನಡೆಯಲಿದೆ' ಎಂದು ಬಾರ್‌ ಕೌನ್ಸಿಲ್‌ ಆಫ್‌ ಇಂಡಿಯಾ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿತ್ತು.

Stay up to date on all the latest ರಾಷ್ಟ್ರೀಯ news
Poll
Mamata_PM_Modi1

ಕೋವಿಡ್ ಉಲ್ಬಣದ ಕಾರಣ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮತ್ತು ಟಿಎಂಸಿ ಸಾಮೂಹಿಕ ಚುನಾವಣಾ ಪ್ರಚಾರವನ್ನು ಸ್ಥಗಿತಗೊಳಿಸಬೇಕೇ?


Result
ಹೌದು
ಬೇಡ
flipboard facebook twitter whatsapp