ನೋಟ್ ಬ್ಯಾನ್ ನಿಂದಾಗಿ ನಿರುದ್ಯೋಗ ಸಿಕ್ಕಾಪಟ್ಟೆ ಹೆಚ್ಚಾಗಿದೆ: ಮಾಜಿ ಪ್ರಧಾನಿ ಮನಮೋಹನ್ ಸಿಂಗ್
2016ರಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ತೆಗೆದುಕೊಂಡ ನೋಟ್ ಬ್ಯಾನ್ ನಂತಹ ಅತ್ಯಂತ ಕೆಟ್ಟ ನಿರ್ಧಾರದಿಂದ ದೇಶದಲ್ಲಿ ನಿರುದ್ಯೋಗ ಸಿಕ್ಕಾಪಟ್ಟೆ ಹೆಚ್ಚಾಗಿದೆ ಮತ್ತು ಅನೌಪಚಾರಿಕ ವಲಯ ಅಸ್ತವ್ಯಸ್ತವಾಗಿದೆ...
Published: 02nd March 2021 03:03 PM | Last Updated: 02nd March 2021 03:03 PM | A+A A-

ಡಾ.ಮನಮೋಹನ್ ಸಿಂಗ್
ತಿರುವನಂತಪುರಂ: 2016ರಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ತೆಗೆದುಕೊಂಡ ನೋಟ್ ಬ್ಯಾನ್ ನಂತಹ ಅತ್ಯಂತ ಕೆಟ್ಟ ನಿರ್ಧಾರದಿಂದ ದೇಶದಲ್ಲಿ ನಿರುದ್ಯೋಗ ಸಿಕ್ಕಾಪಟ್ಟೆ ಹೆಚ್ಚಾಗಿದೆ ಮತ್ತು ಅನೌಪಚಾರಿಕ ವಲಯ ಅಸ್ತವ್ಯಸ್ತವಾಗಿದೆ ಎಂದು ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರು ಮಂಗಳವಾರ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ರಾಜೀವ್ ಗಾಂಧಿ ಇನ್ಸ್ಟಿಟ್ಯೂಟ್ ಆಫ್ ಡೆವಲಪ್ಮೆಂಟ್ ಸ್ಟಡೀಸ್ ಆಯೋಜಿಸಿದ್ದ ಅಭಿವೃದ್ಧಿ ಶೃಂಗಸಭೆಯನ್ನು ವರ್ಚುವಲ್ ಮೂಲಕ ಉದ್ಘಾಟಿಸಿ ಮಾತನಾಡಿದ ಮಾಜಿ ಪ್ರಧಾನಿ, ಕೇಂದ್ರ ಸರ್ಕಾರ ರಾಜ್ಯಗಳೊಂದಿಗೆ ನಿಯಮಿತವಾಗಿ ಸಮಾಲೋಚನೆ ನಡೆಸುತ್ತಿಲ್ಲ ಎಂದು ಟೀಕಿಸಿದರು.
ದೇಶದಲ್ಲಿ ನಿರುದ್ಯೋಗ ಸಿಕ್ಕಾಪಟ್ಟೆ ಹೆಚ್ಚಾಗಿದೆ ಮತ್ತು ಅನೌಪಚಾರಿಕ ವಲಯ ಅಸ್ತವ್ಯಸ್ತವಾಗಿದೆ. ಇದಕ್ಕೆ 2016 ರಲ್ಲಿ ಮೋದಿ ಸರ್ಕಾರ ತೆಗೆದುಕೊಂಡ ಡಿಮಾನಿಟೈಸೇಷನ್ ಕಾರಣ ಎಂದು ಹೇಳಿದರು.
ಚುನಾವಣೆ ಎದುರಿಸಲಿರುವ ಕೇರಳ ಮತ್ತು ಇತರ ಅನೇಕ ರಾಜ್ಯಗಳಲ್ಲಿ, ರಾಜ್ಯ ಸರ್ಕಾರಗಳು ಅತಿಯಾದ ಸಾಲವನ್ನು ಆಶ್ರಯಿಸಬೇಕಾಗಿರುವುದರಿಂದ ಸಾರ್ವಜನಿಕ ಹಣಕಾಸು ಅಸ್ತವ್ಯಸ್ತವಾಗಿದೆ, ಇದು ಭವಿಷ್ಯದ ಬಜೆಟ್ ಮೇಲೆ ಮತ್ತಷ್ಟು ಹೊರೆಯಾಗಲಿದೆ ಎಂದು ಮನಮೋಹನ್ ಸಿಂಗ್ ಎಚ್ಚರಿಸಿದರು.