'ಮೆಟ್ರೋ ಮ್ಯಾನ್' ಶ್ರೀಧರನ್ ಸಿಎಂ ಅಭ್ಯರ್ಥಿ ಹೇಳಿಕೆ: ಬಿಜೆಪಿ ವಿರುದ್ಧ ಸುಬ್ರಮಣಿಯನ್ ಸ್ವಾಮಿ ವಾಗ್ದಾಳಿ
ಬಿಜೆಪಿಯಲ್ಲಿದ್ದರೂ ಸಮಯ ಸಂದರ್ಭ ಬಂದಾಗಲೆಲ್ಲಾ ಪಕ್ಷದ ನಿರ್ಧಾರಗಳನ್ನು ಟೀಕಿಸಲು ಹಿಂಜರಿಯದ ಆ ಪಕ್ಷದ ಹಿರಿಯ ನಾಯಕ ಡಾ. ಸುಬ್ರಮಣಿಯನ್ ಸ್ವಾಮಿ, ಮತ್ತೊಮ್ಮೆ ಪಕ್ಷದ ನಿಲುವಿನ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
Published: 06th March 2021 07:57 PM | Last Updated: 06th March 2021 07:57 PM | A+A A-

ಸುಬ್ರಮಣಿಯನ್ ಸ್ವಾಮಿ
ನವದೆಹಲಿ: ಬಿಜೆಪಿಯಲ್ಲಿದ್ದರೂ ಸಮಯ ಸಂದರ್ಭ ಬಂದಾಗಲೆಲ್ಲಾ ಪಕ್ಷದ ನಿರ್ಧಾರಗಳನ್ನು ಟೀಕಿಸಲು ಹಿಂಜರಿಯದ ಆ ಪಕ್ಷದ ಹಿರಿಯ ನಾಯಕ ಡಾ. ಸುಬ್ರಮಣಿಯನ್ ಸ್ವಾಮಿ, ಮತ್ತೊಮ್ಮೆ ಪಕ್ಷದ ನಿಲುವಿನ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕೇರಳ ವಿಧಾನಸಭೆ ಚುನಾವಣೆಯಲ್ಲಿ ಮೆಟ್ರೋ ಮ್ಯಾನ್ ಇ ಶ್ರೀಧರನ್ ಅವರು ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿಯಾಗಲಿದ್ದಾರೆ ಎಂದು ಹೇಳಿದ್ದ ಕೇರಳ ಬಿಜೆಪಿ ಅಧ್ಯಕ್ಷ ಕೆ ಸುರೇಂದ್ರನ್ ಅವರನ್ನು ಟ್ವೀಟರ್ ನಲ್ಲಿ ಪ್ರಶ್ನಿಸಿದ ಸುಬ್ರಮಣಿಯನ್ ಸ್ವಾಮಿ ಅವರು, ಅಭ್ಯರ್ಥಿಗಳ ವಯೋಮಿತಿಗೆ ಸಂಬಂಧಿಸಿದಂತೆ ಪಕ್ಷ ತನ್ನ ನಿಲುವನ್ನು ಬದಲಿಸಿಕೊಂಡಂತೆ ಕಾಣಿಸುತ್ತಿದೆ ಎಂದಿದ್ದಾರೆ.
"ಕೇರಳ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಎಂದು 89 ವರ್ಷದ ಶ್ರೀಧರನ್ ಅವರನ್ನು ಪಕ್ಷ ಘೋಷಿಸಿದೆ. ಇದರಿಂದ 75 ವರ್ಷ ಮೀರಿದ ಬಿಜೆಪಿ ನಾಯಕರನ್ನು ಮಾರ್ಗದರ್ಶನ ಮಂಡಳಿಯ ಹೆಸರಿನಲ್ಲಿ ನಿವೃತ್ತಿಯ ಅಂಚಿಗೆ ತಳ್ಳುವ ತನ್ನ ನಿರ್ಧಾರವನ್ನು ಬಿಜೆಪಿ ಬದಲಿಸಿಕೊಂಡಿದೆ ಎಂದು ಭಾವಿಸಬಹುದೇ?.. ಆ ರೀತಿ ಆದರೆ... ಎಲ್.ಕೆ. ಅಡ್ವಾಣಿ, ಡಾ. ಮುರಳಿ ಮನೋಹರ್ ಜೋಶಿ.. ಶಾಂತ ಕುಮಾರ್ ಅವರಂತಹ ಹಿರಿಯ ನಾಯಕರಿಗೆ 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ನೀಡಬೇಕು" ಎಂದು ಸ್ವಾಮಿ ಟ್ವೀಟ್ ಮಾಡಿದ್ದಾರೆ.
ಶ್ರೀಧರನ್ ಅವರನ್ನು ಕೇರಳ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಆ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಸುರೇಂದ್ರನ್ ಎರಡು ದಿನಗಳ ದಿನಗಳ ಹಿಂದೆ ಘೋಷಿಸಿದ್ದರು. ಆದರೆ ಈ ಬಗ್ಗೆ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ನಾಯಕರು ಹೇಳಿದ್ದಾರೆ.