ಅಂಬಾನಿ ಮನೆ ಬಳಿ ಪತ್ತೆಯಾಗಿದ್ದ ಕಾರು, ಜಿಲಿಟಿನ್ ಕಡ್ಡಿಗಳು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಿದ ಅಧಿಕಾರಿಗಳು
ಉದ್ಯಮಿ ಮುಕೇಶ್ ಅಂಬಾನಿ ಅವರ ಐಷಾರಾಮಿ ನಿವಾಸದ ಬಳಿ ಕೆಲ ದಿನಗಳ ಹಿಂದಷ್ಟೇ ಪತ್ತೆಯಾಗಿದ್ದ ಎಸ್ಯುವಿ ಮತ್ತು ಅದರಲ್ಲಿದ್ದ ಜಿಲೆಟಿನ್ ಕಡ್ಡಿಗಳನ್ನು ಪರೀಕ್ಷೆ ನಡೆಸಲು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ವರದಿಗಳು ತಿಳಿಸಿವೆ.
Published: 07th March 2021 01:56 PM | Last Updated: 07th March 2021 01:56 PM | A+A A-

ಸಂಗ್ರಹ ಚಿತ್ರ
ಮುಂಬೈ: ಉದ್ಯಮಿ ಮುಕೇಶ್ ಅಂಬಾನಿ ಅವರ ಐಷಾರಾಮಿ ನಿವಾಸದ ಬಳಿ ಕೆಲ ದಿನಗಳ ಹಿಂದಷ್ಟೇ ಪತ್ತೆಯಾಗಿದ್ದ ಎಸ್ಯುವಿ ಮತ್ತು ಅದರಲ್ಲಿದ್ದ ಜಿಲೆಟಿನ್ ಕಡ್ಡಿಗಳನ್ನು ಪರೀಕ್ಷೆ ನಡೆಸಲು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ವರದಿಗಳು ತಿಳಿಸಿವೆ.
ಈ ಕುರಿತು ಮಾಹಿತಿ ನೀಡಿರುವ ಮುಂಬೈ ನಗರದ ಪೊಲೀಸರು, ಅಂಬಾನಿ ಮನೆಯ ಮುಂದೆ ಪತ್ತೆಯಾಗಿದ್ದ ಕಾರು ಹಾಗೂ ಜಿಲೆಟಿನ್ ಕಡ್ಡಿಗಳನ್ನು ಮುಂಬೈನ ಕಲಿನಾದಲ್ಲಿ ಇರುವ ಫೊರೆನ್ಸಿಕ್ ಸೈನ್ಸ್ ಲ್ಯಾಬ್ಗೆ (ಎಫ್ಎಸ್ಎಲ್) ಕಳುಹಿಸಲಾಗಿದೆ ಎಂದು ಹೇಳಿದ್ದಾರೆ.
ವರದಿಯಿಂದ ಕಾರಿನಲ್ಲಿ ಯಾವುದಾದರೂ ರಕ್ತದ ಕಲೆ, ಕೂದಲು ಅಥವಾ ಕುರುಹು ಪತ್ತೆಯಾದರೆ, ಈ ಕಾರನ್ನು ಚಲಾಯಿಸಿಕೊಂಡು ಬಂದ ವ್ಯಕ್ತಿಯನ್ನು ಗುರುತಿಸಲು ಸಹಾಯವಾಗುತ್ತದೆ. ಪ್ರಯೋಗಾಲಯವು ಈ ಕುರಿತು ವಾರದೊಳಗೆ ವರದಿ ನೀಡಲಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಈ ಕಡ್ಡಿಗಳಲ್ಲಿನ ಜಿಲೆಟಿನ್ನ ಶೇಕಡಾವಾರು ಪ್ರಮಾಣವನ್ನು ಎಫ್ಎಸ್ಎಲ್ ಪತ್ತೆ ಮಾಡಲಿದೆ. ಅಲ್ಲದೆ ವಾಹನದ ಚಾಸಿ ಸಂಖ್ಯೆ ಬದಲಾಗಿದೆಯೇ ಎಂಬುದನ್ನು ಗುರುತಿಸಲಿದೆ. ಇದಾದರೆ ವಾಹನದ ನಿಜವಾದ ಮಾಲೀಕ ಯಾರು ಎಂಬುದು ಗೊತ್ತಾಗುತ್ತದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಅಂಬಾನಿ ಅವರ ಮನೆಯ ಬಳಿ ಪತ್ತೆಯಾಗಿದ್ದ ಸ್ಕಾರ್ಪಿಯೊ ವಾಹನ ತನ್ನದೆಂದು ಹೇಳಿಕೊಂಡಿದ್ದ ಆಟೊಮೊಬೈಲ್ ಪರಿಕರಗಳ ವ್ಯಾಪಾರಿ ಹಿರೇನ್ ಮನ್ಸುಖ್ (45) ಅವರು ಕೆಲ ದಿನಗಳ ಹಿಂದೆಯಷ್ಟೇ ಶಂಕಾಸ್ಪದವಾಗಿ ಮೃತಪ್ಟಿದ್ದರು. ಅವರು ಈ ವಾಹನ ಫೆ.18ರಂದು ಐರೋಲಿ–ಮುಲುಂದ್ ಸೇತುವೆ ಬಳಿಯಿಂದ ಕಳುವಾಗಿತ್ತು ಎಂದು ಪೊಲೀಸರಿಗೆ ತಿಳಿಸಿದ್ದರು.