ದೀದಿಗೆ ಬಿಗ್ ಶಾಕ್: ಟಿಎಂಸಿ ತೊರೆದು ಬಿಜೆಪಿ ಸೇರಿದ ಐವರು ಹಾಲಿ ಶಾಸಕರು
ದೇಶಾದ್ಯಂತ ತೀವ್ರ ಗಮನ ಸೆಳೆದಿರುವ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳೂ ಬಾಕಿ ಇದ್ದರೂ ಆಡಳಿತ ಪಕ್ಷದ ಪಕ್ಷಾಂತರ ಪರ್ವ ಮುಂದುವರೆದಿದ್ದು, ಟಿಎಂಸಿಯ ಐವರು ಶಾಸಕರು ಸೋಮವಾರ ಬಿಜೆಪಿ ಸೇರಿದ್ದಾರೆ.
Published: 08th March 2021 07:00 PM | Last Updated: 08th March 2021 07:00 PM | A+A A-

ಮಮತಾ ಬ್ಯಾನರ್ಜಿ
ಕೋಲ್ಕತಾ: ದೇಶಾದ್ಯಂತ ತೀವ್ರ ಗಮನ ಸೆಳೆದಿರುವ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳೂ ಬಾಕಿ ಇದ್ದರೂ ಆಡಳಿತ ಪಕ್ಷದ ಪಕ್ಷಾಂತರ ಪರ್ವ ಮುಂದುವರೆದಿದ್ದು, ಟಿಎಂಸಿಯ ಐವರು ಶಾಸಕರು ಸೋಮವಾರ ಬಿಜೆಪಿ ಸೇರಿದ್ದಾರೆ.
ಟಿಎಂಸಿ ಟಿಕೆಟ್ ನಿರಾಕರಿಸಿದ ಹಿನ್ನೆಲೆಯಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷದ ಹಾಲಿ ಶಾಸಕರಾದ 80 ವರ್ಷದ ರವಿಂದ್ರನಾಥ್ ಭಟ್ಟಾಚಾರ್ಯ ಮತ್ತು ಸೋನಾಲಿ ಗುಹಾ ಅವರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
ನಾಲ್ಕು ಬಾರಿ ಶಾಸಕರಾಗಿದ್ದ 85 ವರ್ಷದ ಜಾತು ಲಾಹಿರಿ ಮತ್ತು ಮೊದಲ ಬಾರಿಗೆ ಶಾಸಕರಾದ ಮಾಜಿ ಫುಟ್ಬಾಲ್ ಆಟಗಾರ ದೀಪೇಂದು ಬಿಸ್ವಾಸ್ ಅವರು ಸಹ, ಮಾರ್ಚ್ 5 ರಂದು ಬಿಡುಗಡೆಯಾದ ಟಿಎಂಸಿ ಅಭ್ಯರ್ಥಿಗಳ ಪಟ್ಟಿಯಲ್ಲಿ ತಮ್ಮ ಹೆಸರು ಇಲ್ಲದ ಕಾರಣ ಪಕ್ಷ ತೊರೆದು ಬಿಜೆಪಿ ಸೇರಿದ್ದಾರೆ.
ಅನಾರೋಗ್ಯದ ಹಿನ್ನೆಲೆಯಲ್ಲಿ ಟಿಕೆಟ್ ನಿರಾಕರಿಸಲಾಗಿದ್ದ ಮತ್ತೊಬ್ಬ ಟಿಎಂಸಿ ಶಾಸಕಿ, ಸೀತಾಲ್ ಸರ್ದಾರ್ ಅವರು ಸಹ ಇಂದು ಕೇಸರಿ ಪಕ್ಷ ಸೇರಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ದಿಲೀಪ್ ಘೋಷ್ ಅವರು ಈ ಐವರು ನಾಯಕರಿಗೆ ಪಕ್ಷದ ಧ್ವಜ ನೀಡುವ ಮೂಲಕ ಸ್ವಾಗತಿಸಿದ್ದಾರೆ.