ಮಮತಾ ಬ್ಯಾನರ್ಜಿ ಮೇಲೆ ಹಲ್ಲೆ ಪ್ರಕರಣ: ಟಿಎಂಸಿಯ ವ್ಯವಸ್ಥಿತ ನಾಟಕ ಎಂದು ಬಿಜೆಪಿ ಟೀಕೆ, ಸಿಬಿಐ ತನಿಖೆಗೆ ಒತ್ತಾಯ
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಹಾಗೂ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ವಿರುದ್ಧದ ಹಲ್ಲೆ ಪ್ರಕರಣ ಇದೀಗ ಹೊಸ ರೂಪ ಪಡೆದುಕೊಳ್ಳುತ್ತಿದೆ. ಈ ಬಗ್ಗೆ ಸಿಬಿಐ ತನಿಖೆಯಾಗಬೇಕು ಎಂದು ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ ಒತ್ತಾಯಿಸಿದ್ದಾರೆ.
Published: 11th March 2021 01:09 PM | Last Updated: 11th March 2021 01:13 PM | A+A A-

ಪಶ್ಚಿಮ ಬಂಗಾಳ ಬಿಜೆಪಿ ಮುಖ್ಯಸ್ಥ ದಿಲೀಪ್ ಘೋಷ್ ಮತ್ತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (ಸಂಗ್ರಹ ಚಿತ್ರ)
ಕೋಲ್ಕತ್ತಾ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಹಾಗೂ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ವಿರುದ್ಧದ ಹಲ್ಲೆ ಪ್ರಕರಣ ಇದೀಗ ಹೊಸ ರೂಪ ಪಡೆದುಕೊಳ್ಳುತ್ತಿದೆ. ಈ ಬಗ್ಗೆ ಸಿಬಿಐ ತನಿಖೆಯಾಗಬೇಕು ಎಂದು ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ ಒತ್ತಾಯಿಸಿದ್ದಾರೆ.
ನಿಜವಾಗಿಯೂ ಮುಖ್ಯಮಂತ್ರಿಗಳ ಮೇಲೆ ಹಲ್ಲೆ ನಡೆದಿದೆಯೇ ಅಥವಾ ವಿಧಾನಸಭೆ ಚುನಾವಣೆಯಿರುವುದರಿಂದ ಜನರ ಮತಗಳನ್ನು ಅನುಕಂಪದಲ್ಲಿ ಗಿಟ್ಟಿಸಿಕೊಳ್ಳಲು ಇದೊಂದು ವ್ಯವಸ್ಥಿತ ನಾಟಕವೇ ಎಂದು ರಾಜ್ಯದ ಜನತೆಗೆ ಸಿಬಿಐ ತನಿಖೆಯಿಂದ ಬಹಿರಂಗವಾಗಬೇಕು ಎಂದು ಹೇಳಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಕೂಡ ಟಿಎಂಸಿ ನಾಯಕರ ನಾಟಕಗಳನ್ನು ರಾಜ್ಯದ ಜನತೆ ನೋಡಿದ್ದಾರೆ. ವಾಸ್ತವವಾಗಿ ಏನು ನಡೆದಿದೆ ಎಂದು ತನಿಖೆಯಿಂದ ಬಹಿರಂಗವಾಗಬೇಕು. ಝಡ್+ ಭದ್ರತೆ ಹೊಂದಿರುವ ವ್ಯಕ್ತಿ ಮೇಲೆ ಇಂತಹ ದಾಳಿ ನಡೆಯಲು ಹೇಗೆ ಸಾಧ್ಯಈ ಬಗ್ಗೆ ರಾಜ್ಯ ಸರ್ಕಾರ ಸಿಬಿಐ ತನಿಖೆ ವಹಿಸಿ ಸತ್ಯ ಹೊರಬರಬೇಕು ಎಂದು ಹೇಳಿದರು.
ಇದೊಂದು ಸತ್ಯವಾಗಿಯೂ ನಡೆದ ಘಟನೆಯೇ ಅಥವಾ ಸಂಚಿತ ವ್ಯವಸ್ಥಿತ ನಾಟಕವೇ ಎಂದು ಗೊತ್ತಾಗಬೇಕು ಎಂದು ಮಮತಾ ಬ್ಯಾನರ್ಜಿಯವರು ಆಸ್ಪತ್ರೆಯ ಬೆಡ್ ಮೇಲೆ ಕಾಲಿಗೆ ಬ್ಯಾಂಡೇಜ್ ಹಾಕಿಸಿಕೊಂಡು ಮಲಗಿರುವ ಫೋಟೋವನ್ನು ತೋರಿಸುತ್ತಾ ಹೇಳಿದರು.
ಒಂದು ವೇಳೆ ಇದೊಂದು ವ್ಯವಸ್ಥಿತ ನಾಟಕವಾಗಿದ್ದರೆ ಜನರ ಮತಗಳನ್ನು ಸಹಾನುಭೂತಿಯಿಂದ ಗಿಟ್ಟಿಸಿಕೊಳ್ಳಲು ನೋಡಿದರೆ ಉತ್ತಮ ಫಲಿತಾಂಶ ನೀಡುವುದಿಲ್ಲ, ಇಂತಹ ನಾಟಕಗಳಿಂದೇನು ಪ್ರಯೋಜನವಿಲ್ಲ ಎಂದರು.
ಇಂತಹ ನಾಟಕವನ್ನು ರಾಜ್ಯದ ಜನರು ಮೊದಲೇ ನೋಡಿದ್ದಾರೆ. ಜನರ ಮತಗಳನ್ನು ಗಿಟ್ಟಿಸಿಕೊಳ್ಳಲು ಯಾವುದೇ ಹಂತಕ್ಕೆ ಇಳಿಯಲು ಸಿದ್ದರಿದ್ದಾರೆ. ಎಂದು ದಿಲೀಪ್ ಘೋಷ್ ಟೀಕಿಸಿದರು.
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಪ್ರಸ್ತುತ ಕೋಲ್ಕತ್ತಾದ ಎಸ್ ಎಸ್ ಕೆಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಅವರ ಎಡಗಾಲಿಗೆ, ಸೊಂಟ, ಭುಜ ಮತ್ತು ಕುತ್ತಿಗೆಗೆ ಗಾಯಗಳಾಗಿವೆ ಎಂದು ವೈದ್ಯರು ತಿಳಿಸಿದ್ದಾರೆ.
ನಿನ್ನೆ ನಂದಿಗ್ರಾಮದಲ್ಲಿ ಚುನಾವಣಾ ಪ್ರಚಾರ ವೇಳೆ ನಾಲ್ಕೈದು ಮಂದಿ ತಮ್ಮ ಮೇಲೆ ಹಲ್ಲೆ ಮಾಡಿ ತಮ್ಮನ್ನು ನೂಕಿಹಾಕಿದ್ದರಿಂದ ಕಾರಿನ ಬಾಗಿಲಿಗೆ ಬಡಿದು ತೀವ್ರ ಗಾಯಗಳಾದವು ಎಂದು ಮಮತಾ ಬ್ಯಾನರ್ಜಿ ಆರೋಪಿಸಿದರು.
ತಮ್ಮನ್ನು ಚುನಾವಣಾ ಪ್ರಚಾರದಿಂದ ದೂರವುಳಿಸಲು ವಿರೋಧ ಪಕ್ಷಗಳು ಮಾಡಿರುವ ವ್ಯವಸ್ಥಿತ ಪಿತೂರಿ ಎಂದು ತೃಣಮೂಲ ಕಾಂಗ್ರೆಸ್ ಆರೋಪಿಸಿದೆ.